ಚಿತ್ರದುರ್ಗ/ಗದಗ: ಇತ್ತ ದುರ್ಗದ ಗ್ರಾಮವೊಂದರಲ್ಲಿ ಇಂಜೆಕ್ಷನ್ ರಿಯಾಕ್ಷನ್ನಿಂದ 7 ವರ್ಷದ ಬಾಲಕ ಸಾವಿಗೀಡಾಗಿರುವ ಆರೋಪ ಕೇಳಿಬಂದಿದ್ದರೆ ಅತ್ತ ಗದಗ (gadag) ತಾಲೂಕಿನಲ್ಲಿ ಅಂಬ್ಯುಲೆನ್ಸ್ ನಲ್ಲಿಯೇ (ambulance) ಹೆರಿಗೆಯಾಗಿದ್ದು ತಾಯಿ-ಮಗು ಸೇಫ್ ಆಗಿರುವ ಘಟನೆ ವರದಿಯಾಗಿದೆ. ಚಿತ್ರದುರ್ಗ ಜಿಲ್ಲೆ (chitradurga) ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ಹೊಲಿಗೆ ಯಂತ್ರದಲ್ಲಿ ಕೈ ಸಿಲುಕಿ ಪೆಟ್ಟು ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ 7 ವರ್ಷದ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕ್ಕಜಾಜೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿರಾಯಿ ಎಂಬ ಬಾಲಕ ಚಿಕಿತ್ಸೆ ಪಡೆದಿದ್ದ. ಇಂಜೆಕ್ಷನ್ (injection) ಬಳಿಕ ಬಾಲಕ ವಾಂತಿ ಮಾಡಿಕೊಂಡಿರುವ ಆರೋಪ ಮಾಡಲಾಗಿದೆ.
ಇಂಜೆಕ್ಷನ್ ರಿಯಾಕ್ಷನ್ ಸುಳಿವು ಸಿಗುತ್ತಿದ್ದಂತೆ ಬಾಲಕನನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲೂ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತ ಬಾಲಕ ಚಿರಾಯಿ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲಿಂದ ಮುಂದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಾಲತೇಶ್ ಮತ್ತು ಸುನೀತಾ ದಂಪತಿಯ ಪುತ್ರ ಚಿರಾಯಿ (7) ಅಸುನೀಗಿದ ಕಂದ. ವರ್ಷದ ಹಿಂದಷ್ಟೇ ಮಾಲತೇಶ ಸಾವನ್ನಪ್ಪಿದ್ದರೆಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಸೇಫ್ ಆಗಿದ್ದಾರೆ. ಗದಗ ತಾಲೂಕಿನ ಬಳಗಾನೂರು ಗ್ರಾಮದ ಸಲೀಮಾ ಮೆಹಬೂಬಸಾಬ ಮುದೆಪ್ಪನವರ ಗರ್ಭಿಣಿ ಮಹಿಳೆ. ಸಕಾಲದಲ್ಲಿ ಅಂಬ್ಯುಲೆನ್ಸ್ ಸಿಬ್ಬಂದಿ ನೆರವಾಗಿದ್ದು, ದಾರಿ ಮಧ್ಯೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಸಲೀಮಾ ಹೆಣ್ಣು ಮಗುವಿಗೆ ಜನ್ಮ ನಿಡಿದ್ದಾರೆ. ಇಂದು ಬುಧವಾರ ಬೆಳಿಗ್ಗೆ ಸಲೀಮಾಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಅಂಬ್ಯುಲೆನ್ಸ್ ಗ್ರಾಮಕ್ಕೆ ತೆರಳಿತ್ತು. ಗರ್ಭಿಣಿ ಮಹಿಳೆಯನ್ನ ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವು ಹೆಚ್ಚಾಗಿದೆ. ತಕ್ಷಣ ಎಚ್ಚೆತ್ತ ಅಂಬ್ಯುಲೆನ್ಸ್ ಸಿಬ್ಬಂದಿ, ಸಮಯಪ್ರಜ್ಞೆಯಿಂದ ಆಸ್ಪತ್ರೆ ತಲುಪುವದಕ್ಕಿಂತ ಮುಂಚೆಯೇ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಕಾರ್ಯ ಮಾಡಿದ್ದಾರೆ.
ಸಮಯೋಚಿತ ಚಿಕಿತ್ಸೆ ನೀಡೋ ಮೂಲಕ ಅಂಬ್ಯುಲೆನ್ಸ್ ಸಿಬ್ಬಂದಿ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಿಬ್ಬಂದಿಗಳಾದ ನರ್ಸಿಂಗ್ ಆಫೀಸರ್ ರವಿ ಬಡಿಗೇರ ಹಾಗೂ ಅಂಬ್ಯುಲೆನ್ಸ್ ಚಾಲಕ ದಸ್ತಗೀರಸಾಬ. ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಗದಗ ನಗರದ ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಬ್ಬಂದಿಯ ಸಮಯಪ್ರಜ್ಞೆಗೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:29 am, Wed, 30 August 23