ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್​ಐಆರ್​ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ

ಹಾವೇರಿ ಜಿಲ್ಲೆಯ ಆಲದಕಟ್ಟಿ ಬಳಿ ಪಟಾಕಿ ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಧಿಕೃತ ಪಟಾಕಿ ಗೋದಾಮಿನ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಿ. ಈಗಾಗಲೇ ಇರುವ ಇನ್ನೊಂದು ಪಟಾಕಿ ಗೊದಾಮು ತೆರವುಗೊಳಿಸಿ ಎಂದು ಆಲದಕಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್​ಐಆರ್​ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ
ಸುಟ್ಟು ಕರಕಲಾದ ಗೋದಾಮು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ವಿವೇಕ ಬಿರಾದಾರ

Updated on:Aug 30, 2023 | 10:40 AM

ಹಾವೇರಿ: ಜಿಲ್ಲೆಯ ಆಲದಕಟ್ಟಿ ಬಳಿ ಪಟಾಕಿ (Firecracker) ಗೋದಾಮಿಗೆ ಬೆಂಕಿ ಹೊತ್ತಿಕೊಂಡು ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್​​ಐಆರ್ (FIR) ದಾಖಲಾಗಿದೆ. ಪಟಾಕಿ ಅಂಗಡಿ ಮಾಲೀಕರಾದ ಕೆ.ಬಿ ಜಯಣ್ಣ, ಸಿ.ಜೆ ವೀರೇಶ್, ವಿಜಯ್ ಯರೇಶೇಮಿ, ಕುಮಾರಪ್ಪ ಸಾತೇನಹಳ್ಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯತನದಿಂದ ಯಾವುದೇ ಸುರಕ್ಷತಾ ಕ್ರಮಕೈಗೊಂಡಿಲ್ಲ. ಅಲ್ಲದೇ ಕಾರ್ಮಿಕರಿಗೆ ಯಾವುದೇ ಸುರಕ್ಷತೆ ಒದಗಿಸದ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸಿದೆ ಎಂದು ಮೃತ ಕಾರ್ಮಿಕ ದ್ಯಾಮಪ್ಪ ಓಲೇಕಾರ ಸಂಬಂಧಿಕ ಕಾಟೇನಹಳ್ಳಿ ಗ್ರಾಮದ ದುರಗಪ್ಪ ಓಲೆಕಾರ್ ದೂರು ನೀಡಿದ್ದಾರೆ.

ನಿನ್ನೆ (ಆ.29) ಆಲದಕಟ್ಟಿ ಗ್ರಾಮದ ಬಳಿ ಪಟಾಕಿ ದುರಂತ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದರು. ದುರಂತದಲ್ಲಿ ಮೃತ ಹೊಂದಿದ ಕುಟುಂಬಗಳಿಗೆ ರಾಜ್ಯ ಬಿಜೆಪಿ ಘಟಕದಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಪಟಾಕಿ ಗೋದಾಮು ದುರಂತ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹಾವೇರಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ನಾಲ್ವರ ಸಾವು: ಮಾಲೀಕ ಪೊಲೀಸರ ವಶ

ಅಪಾಯಕಾರಿ ಸ್ಥಳದಲ್ಲಿ ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಪಟಾಕಿ ಸಿಡಿಮದ್ದು ದಾಸ್ತಾನು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಬೇಕು. ಕಾರ್ಮಿಕರಿಗೆ ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಮ್ಮ ಗ್ರಾಮದಲ್ಲಿ ಪಟಾಕಿ ಗೋದಾಮಿಗೆ ಪರವಾನಗಿ ಕೊಡಬೇಡಿ. ಅನಧಿಕೃತ ಪಟಾಕಿ ಗೋದಾಮಿನ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳಿ. ಈಗಾಗಲೇ ಇರುವ ಇನ್ನೊಂದು ಪಟಾಕಿ ಗೊದಾಮು ತೆರವುಗೊಳಿಸಿ. ನಿನ್ನೆ ನಡೆದ ಘಟನೆಯಲ್ಲಿ ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡಿದ್ದೆವೆ. ಆದಷ್ಟು ಬೇಗ ಇನ್ನೊಂದು ಪಟಾಕಿ ಗೋದಾಮನ್ನು ಖಾಲಿ ಮಾಡಿ. ಪಟಾಕಿ ಗೋದಾಮಿಗೆ ಗ್ರಾಮ ಪಂಚಾಯತಿಯವರು ಈ ಬಾರಿ ಪರವಾನಿಗೆ ಕೊಟ್ಟಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಪರವಾನಗಿ ತಂದಿದ್ದೆನಿ ಅಂತಾ ವಾದ ಮಾಡಿ ಪಟಾಕಿ ಸಂಗ್ರಹಣೆ ಮಾಡಿದ್ದರು ಎಂದು ಆಲದಕಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Wed, 30 August 23