ಆನೇಕಲ್: ಮದ್ದೂರಮ್ಮ ಜಾತ್ರೆಗಾಗಿ ಕೆರೆ ಶುದ್ಧಿ ಮಾಡುವಾಗ ಶಿವಲಿಂಗ ಪತ್ತೆ, ಶಿವಲಿಂಗ ನೋಡಲು ಮುಗಿಬಿದ್ದ ಜನ
ಮದ್ದೂರಮ್ಮ ಜಾತ್ರೆ ಪ್ರಯುಕ್ತ ಕೆರೆ ಶುದ್ಧಿ ಮಾಡುವ ವೇಳೆಗೆ ಪುರಾತನ ಲಿಂಗ ಪ್ರತ್ಯಕ್ಷವಾಗಿದ್ದು, ಎಲ್ಲರಿಗೂ ಅಚ್ಚರಿ ಉಂಟಾಗಿದೆ. ಸದ್ಯ ಪತ್ತೆಯಾದ ಶಿವಲಿಂಗವನ್ನು ಮಣ್ಣಿನಿಂದ ಹೊರ ತೆಗೆಯಲು ಗ್ರಾಮಸ್ಥರು ಮುಂದಾಗಿದ್ದಾರೆ.
ಆನೇಕಲ್: ಆಗಾಗ ಪುರಾತನ ಕಾಲದ ವಿಗ್ರಹಗಳು ಸಿಗುತ್ತಿರುತ್ತವೆ. ಪತ್ತೆಯಾದ ವಿಗ್ರಹಳನ್ನು ಕೆಲವರು ನೋಡಿ ಸುಮ್ಮನಿದ್ದರೆ ಇನ್ನೂ ಕೆಲವರು ಸಿಕ್ಕ ವಿಗ್ರಹದ ಬಗ್ಗೆ ಹೆಚ್ಚು ಅಧ್ಯಯನಕ್ಕೆ ಇಳಿಯುತ್ತಾರೆ. ವಿಗ್ರಹ ಯಾವ ಕಾಲದ್ದು? ಇಲ್ಲಿಗೆ ಹೇಗೆ ಬಂತು? ವಿಗ್ರಹದ ಹಿಂದಿರುವ ಇತಿಹಾಸವೇನು? ಎಂಬ ಮಾಹಿತಿಗಳನ್ನು ಕಲೆ ಹಾಕಲು ಮುಂದಾಗುತ್ತಾರೆ. ಭೂಮಿಯನ್ನು ಅಗೆಯುವಾಗ ದೇವರ ವಿಗ್ರಹಗಳು ಸಿಗುವುದು ಸಾಮಾನ್ಯವಾಗಿದೆ. ಅಂತಹದೊಂದು ವಿಗ್ರಹ ಬೆಂಗಳೂರಿನ ಹುಸ್ಕೂರು ಕೆರೆಯಲ್ಲಿ ಸಿಕ್ಕಿದೆ. ಮದ್ದೂರಮ್ಮ ಜಾತ್ರೆ ಹಿನ್ನೆಲೆ ಬೆಂಗಳೂರಿನ ಹುಸ್ಕೂರು ಕೆರೆಯಲ್ಲಿ ಶುದ್ಧೀಕರಣ ಮಾಡುವ ಹೊತ್ತಿಗೆ ಶಿವಲಿಂಗ ಪತ್ತೆಯಾಗಿದೆ. ಶಿವಲಿಂಗ ಪತ್ತೆಯಾದ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಚ್ಚರಿಗೊಂಡ ಜನರು ದೊಡ್ಡ ಸಂಖ್ಯೆಯಲ್ಲಿ ಕೆರೆಯತ್ತ ಧಾವಿಸಿದ್ದಾರೆ. ಹೀಗಾಗಿ ಕೆರೆಯಲ್ಲಿ ಕಂಡುಬಂದ ಶಿವಲಿಂಗದ ದರ್ಶನ ಪಡೆಯಲು ನೂರಾರು ಜನರು ಮುಗಿಬಿದಿದ್ದಾರೆ. ಹೀಗೆ ಮದ್ದೂರಮ್ಮ ಜಾತ್ರೆ ಪ್ರಯುಕ್ತ ಕೆರೆ ಶುದ್ಧಿ ಮಾಡುವ ವೇಳೆಗೆ ಪುರಾತನ ಲಿಂಗ ಪ್ರತ್ಯಕ್ಷವಾಗಿದ್ದು, ಎಲ್ಲರಿಗೂ ಅಚ್ಚರಿ ಉಂಟಾಗಿದೆ.
ಸದ್ಯ ಪತ್ತೆಯಾದ ಶಿವಲಿಂಗವನ್ನು ಮಣ್ಣಿನಿಂದ ಹೊರ ತೆಗೆಯಲು ಗ್ರಾಮಸ್ಥರು ಮುಂದಾಗಿದ್ದಾರೆ. ಶಿವಲಿಂಗವು ಪುರಾತನ ಕಾಲದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಶಿವಲಿಂಗ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ದಾರೆ. ಪತ್ತೆಯಾದ ಶಿವಲಿಂಗಕ್ಕೆ ಹೂವು, ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ.
ಒಂದು ವಾರದಿಂದ ಕೆರೆ ಕಟ್ಟೆ ಅಭಿವೃದ್ಧಿ ಮಾಡಲಾಗುತ್ತಿತ್ತು. ಜೆಸಿಬಿಗಳ ಮೂಲಕ ಕೆರೆಯಲ್ಲಿ ಕೆಲಸ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಬೃಹತ್ ಶಿವಲಿಂಗ ಪತ್ತೆಯಾಗಿದೆ. ಈ ಹಿಂದೆ ಇದೇ ಕೆರೆಯ ಪಕ್ಕದಲ್ಲಿ ಆನೆ ಲಿಂಗೇಶ್ವರ ದೇವಸ್ಥಾನ ಇತ್ತು ಎನ್ನಲಾಗುತ್ತಿದೆ. ಈ ದೇವಾಲಯಕ್ಕೆ ಸೇರಿರುವ ವಿಗ್ರಹವು ಇರಬಹುದು ಎಂದು ಹೇಳಲಾಗುತ್ತಿದೆ. ಚೋಳರ ಕಾಲದ ವಿಗ್ರಹವೆಂದು ಹೇಳುತ್ತಿರುವ ಗ್ರಾಮಸ್ಥರು ಈಗಾಗಲೇ ತಾಲ್ಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.
ಸಕಲೇಶಪುರದಲ್ಲಿ ಪತ್ತೆಯಾದ ವಿಗ್ರಹ ಈ ಹಿಂದೆಯೂ ಹಾಸನ ಜಿಲ್ಲೆಯ ಸಕಲೇಶಪುರದ ಹಾಲೇಬೇಲೂರು ಬಳಿಯ ಹೇಮಾವತಿ ನದಿ ತೀರದಲ್ಲಿ ಪುರಾತನ ಕಾಲದ ಬೃಹತ್ ಚನ್ನಕೇಶವ ವಿಗ್ರಹವೊಂದು ಪತ್ತೆಯಾಗಿತ್ತು. ಹೇಮಾವತಿ ನದಿ ತೀರದಲ್ಲಿ ಮರಳು ತೆಗೆಯುವಾಗ ಚನ್ನಕೇಶವ ವಿಗ್ರಹ ಸಿಕ್ಕಿತ್ತು. ಭೂಮಿಯಲ್ಲಿ ಹುದುಗಿದ್ದ ಸುಮಾರು 5 ಅಡಿ ಎತ್ತರದ ಚನ್ನಕೇಶವ ವಿಗ್ರಹವನ್ನು ಜನ ಹೊರ ತೆಗೆದಿದ್ದರು. ವಿಗ್ರಹದ ಗಾತ್ರ ಕಂಡು ಜನರು ಬೆರಗಾಗಿದ್ದರು. ಹಾಲೇಬೇಲೂರು ದೇಗುಲದಲ್ಲಿ ವಿಗ್ರಹವನ್ನು ಇಟ್ಟು ಸ್ಥಳೀಯರು ಪೂಜೆ ಸಲ್ಲಿಸಿದ್ದಾರೆ.
ಜೆಸಿಬಿ ಮೂಲಕ ನದಿ ತೀರದಲ್ಲಿ ಮರಳು ತೆಗೆಯಲಾಗುತ್ತಿತ್ತು. ಮರಳು ತೆಗೆಯುವ ವೇಳೆ ಜೆಸಿಬಿಗೆ ವಿಗ್ರಹ ಸಿಕ್ಕಿ ಬಿದ್ದಿದೆ. ಬೃಹತ್ ಆಕಾರದ ವಿಗ್ರಹವನ್ನು ಕಂಡ ಜೆಸಿಬಿ ಚಾಲಕ ಹೆದರಿ ಸ್ಥಳದಿಂದ ಪರಾರಿಯಾಗಿದ್ದನು. ಅದರಂತೆ ಇಂದು ಬೆಂಗಳೂರಿನ ಹುಸ್ಕೂರು ಕೆರೆಯಲ್ಲಿ ಶಿವಲಿಂಗ ವಿಗ್ರಹ ಪತ್ತೆಯಾಗಿದೆ.
ಇದನ್ನೂ ಓದಿ
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ: ಅಲ್ಲೊಬ್ಬ ಪಾಳೆಗಾರ, ಇಲ್ಲೊಬ್ಬ ಮಾಂಡಲಿಕ- ಸಿದ್ದರಾಮಯ್ಯ ಲೇವಡಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ
(ancient Shivalinga Idol found in huskur lake at anekal)
Published On - 1:43 pm, Sat, 10 April 21