ಬೆಂಗಳೂರು: ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಪರ ವಕೀಲರಾದ ಕೆ.ಎನ್.ಜಗದಿಶ್ ಕುಮಾರ್ ಮತ್ತು ವಕೀಲ ಸೂರ್ಯ ಮುಕುಂದರಾಜ್ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ದೂರು ನೀಡಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಅನಾರೋಗ್ಯ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ಶಾಸಕ ರಮೇಶ್ ಜಾರಕಿಹೊಳಿ ಏಪ್ರಿಲ್ 5ರಂದು ಹಾಜರಾಗಬೇಕಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಸಚಿವ ಬೈರತಿ ಬಸವರಾಜ ಅವರು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇದೆ ಎಂದು ಹೇಳಿದ್ದಾರೆ. ಈ ಮೂಲಕ ಎಸ್ಐಟಿ ಮೇಲೆ ಒತ್ತಡ ಹೇರುವ ಕೆಲಸ ನಡೆಸಲಾಗಿದೆ. ಶಾಸಕ ರಮೇಶ್ ಜಾರಕಿಹೊಳಿ ಪಿಪಿಇ ಕಿಟ್ ಮತ್ತು ಬಟ್ಟೆ ಮಾಸ್ಕ್ ಧರಿಸಿರುವ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಶಾಸಕ ರಮೇಶ್ ಜಾರಕಿಹೊಳಿ ಸಚಿವ ಡಾ. ಸುಧಾಕರ್ ಅವರಿಗೆ ಆತ್ಮೀಯ ಗೆಳೆಯರು. ಹೀಗಾಗಿ ಸರ್ಕಾರಿ ಅಸ್ಪತ್ರೆ ವೈದ್ಯರ ಮೇಲೆ ಪ್ರಭಾವ ಬೀರಿದ್ದಾರೆ. ಈ ಮೂಲಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಅರೋಪಿಸಿ ದೂರು ನೀಡಲಾಗಿದೆ. ಶಾಸಕ ರಮೇಶ್ ಜಾರಕಿಹೊಳಿ ಕೊರೊನ ನಾಟಕ ಆಡುತ್ತಿದ್ದಾರೆ. ಹೀಗಾಗಿ ನುರಿತ ವೈದ್ಯರು ತಂಡದಿಂದ ಪರಿಶೀಲನೆ ಮಾಡಿಸಬೇಕು. ಹೈಕೋರ್ಟ್ ಪ್ರಕರಣದ ವರದಿಯನ್ನು ಕೇಳಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಪ್ರಭಾವ ಬಳಸಿ ತನಿಖೆ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರು ಸಲ್ಲಿಸಲಾಗಿದೆ.
ನಿನ್ನೆ ಕೊರೊನಾ ಪಾಸಿಟಿವ್ ಘೋಷಣೆ
ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ನಿನ್ನೆ ಮಾಹಿತಿ ನೀಡಿದ್ದರು. ಏಪ್ರಿಲ್ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್ ಟೆಸ್ಟ್ ಮಾಡಿಸಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದರು. ಗೋಕಾಕ್ ಆಸ್ಪತ್ರೆಗೆ ಬಂದ ವಕೀಲ ಚಂದನ್ ಗಿಡ್ನವರ (ಸಂತ್ರಸ್ತೆ ಪರ ವಕೀಲ K.N.ಜಗದೀಶ್ ಸ್ನೇಹಿತ) ಮತ್ತು ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರ ನಡುವೆ ಗೋಕಾಕ್ನ ತಾಲೂಕು ಆಸ್ಪತ್ರೆ ಆವರಣದಲ್ಲಿ ವಾಗ್ವಾದ ನಡೆದಿತ್ತು. ಶಾಸಕ ರಮೇಶ್ ಜಾರಕಿಹೊಳಿ ಐಸಿಯುನಲ್ಲಿ ಇಲ್ಲ ಎಂದು ವಕೀಲ ಚಂದನ್ ಗಿಡ್ನವರ ಬಲವಾಗಿ ಆರೋಪಿಸಿದ್ದರು. ಆದರೆ ವಕೀಲ ಚಂದನ್ ಗಿಡ್ನವರ ಆರೋಪಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆಸ್ಪತ್ರೆಯ ಆವರಣದಲ್ಲಿಯೇ ಮಾಧ್ಯಮಗಳ ಮುಂದೆಯೇ ಎರಡೂ ಕಡೆಯ ಮಧ್ಯೆ ಮಾತಿನ ಜಟಾಪಟಿ, ತಳ್ಳಾಟಗಳು ನಡೆದಿದ್ದವು.
ಇದನ್ನೂ ಓದಿ: ವಿಚಾರಣೆಗೆ 15 ದಿನ ಕ್ವಾರಂಟೈನ್?: ‘ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ’ ಎಂದ ಸಚಿವ ಭೈರತಿ ಬಸವರಾಜು
Coronavirus India Update: ಕಳೆದ 24 ಗಂಟೆಗಳಲ್ಲಿ 96,517 ಕೊವಿಡ್ ಪ್ರಕರಣ ಪತ್ತೆ, 445 ಸಾವು
Published On - 7:23 pm, Tue, 6 April 21