ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expresssway) ಅಪಘಾತಗಳ ತಡೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ರಸ್ತೆ ದಾಟುವವರಿಗೆ ಸಮಸ್ಯೆಯಾಗದಂತೆ ಮತ್ತು ರಸ್ತೆಯಲ್ಲಿ ಜನ ಅಡ್ಡದಾಟುವ ಪರಿಣಾಮ ಸಂಭವಿಸುವ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಮತ್ತೊಂದು ಕ್ರಮಕ್ಕೆ ಮುಂದಾಗಿದೆ. ಎಕ್ಸ್‌ಪ್ರೆಸ್‌ವೇಯಲ್ಲಿ 24 ಕಡೆಗಳಲ್ಲಿ ಪ್ರಾಧಿಕಾರವು ಸ್ಕೈವಾಕ್‌ಗಳನ್ನು ನಿರ್ಮಿಸಲಿದೆ ಎಂದು ವರದಿಯಾಗಿದೆ. ಒಂದು ವರ್ಷದೊಳಗೆ ಸ್ಕೈವಾಕ್‌ಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾರ್ಚ್ 2023 ರಲ್ಲಿ ಸಂಚಾರಕ್ಕೆ ಮುಕ್ತವಾದ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳು ಹೆಚ್ಚಾದ ನಂತರ ಸ್ಕೈವಾಕ್‌ಗಳನ್ನು ನಿರ್ಮಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸ್ಕೈವಾಕ್‌ಗಳನ್ನು ನಿರ್ಮಿಸಲು ಎಕ್ಸ್‌ಪ್ರೆಸ್‌ವೇಯಲ್ಲಿ ಹಾಟ್‌ಸ್ಪಾಟ್‌ಗಳು ಮತ್ತು ಅಪಘಾತ-ಪೀಡಿತ ವಲಯಗಳನ್ನು ಪ್ರಾಧಿಕಾರ ಗುರುತಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಮತ್ತು ನೀಲನಕ್ಷೆ ಸಿದ್ಧವಾಗಿದೆ ಎಂದು ಹೇಳಲಾಗಿದೆ. ಯೋಜನೆಗೆ 46.1 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಇದನ್ನು ಕೈಗೆತ್ತಿಕೊಳ್ಳುವ ಗುತ್ತಿಗೆದಾರರು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು ಮತ್ತು ಐದು ವರ್ಷಗಳ ಅವಧಿಗೆ ಸ್ಕೈವಾಕ್‌ಗಳನ್ನು ನಿರ್ವಹಿಸುವ ಹೊಣೆ ಅವರದ್ದೇ ಆಗಿರುತ್ತದೆ ಎನ್ನಲಾಗಿದೆ.
ಸ್ಕೈವಾಕ್‌ಗಳು 63 ಅಡಿ ಉದ್ದ ಮತ್ತು 3.5 ಮೀಟರ್ ಅಗಲ ಇರಲಿದ್ದು, ಪಾದಚಾರಿಗಳಿಗೆ ನಡೆಯಲು ಮೂರು ಮೀಟರ್ ಜಾಗ ಲಭ್ಯವಿರುತ್ತದೆ ಎನ್ನಲಾಗಿದೆ.
ಎಕ್ಸ್‌ಪ್ರೆಸ್‌ವೇಯ ಕೆಲವು ಕಡೆಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಪ್ರಯತ್ನಿಸಿದಾಗ ಅನೇಕ ಅಪಘಾತಗಳು ಸಂಭವಿಸಿದ ಬಗ್ಗೆ ಈ ಹಿಂದೆ ವರದಿಯಾಗಿವೆ.
ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮುಗಿಯದ ಗೋಳು; ತಂತಿ ಬೇಲಿ ಕಳವಾದಲ್ಲಿ ರಸ್ತೆಗೆ ನುಸುಳುತ್ತಿರುವ ಬೈಕ್ ಸವಾರರು
ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳಿಗೆ ಗಂಟೆಗೆ 100 ಕಿಮೀ ವೇಗದ ಮಿತಿ ನಿಗದಿಪಡಿಸಿದ ಮತ್ತು ಬೈಕ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ನಿಧಾನವಾಗಿ ಚಲಿಸುವ ವಾಹನಗಳ ಪ್ರವೇಶವನ್ನು ನಿಷೇಧಿಸಿದ ನಂತರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ.
ಈ ಮಧ್ಯೆ, ಎಕ್ಸ್‌ಪ್ರೆಸ್‌ವೇಯಲ್ಲಿ ತಂತಿ ಬೇಲಿ ಕಳವು ಪ್ರಕರಣಗಳೂ ವರದಿಯಾಗುತ್ತಿವೆ. ಹೀಗೆ ತಂತಿ ಬೇಲಿ ಕಳವಾದ ಜಾಗದಲ್ಲಿ ಬೈಕ್ ಸವಾರರು ರಸ್ತೆಗೆ ನುಸುಳುತ್ತಿರುವುದು ಕಂಡುಬಂದಿದೆ. ಕೆಲವು ದ್ವಿಚಕ್ರ ವಾಹನ ಸವಾರರು ತಂತಿ ಬೇಲಿ ಕಳವಾದ ಜಾಗದಲ್ಲಿರುವ ಅಂತರದ ಲಾಭವನ್ನು ಪಡೆದುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟುವ ವಿಡಿಯೋ ಇತ್ತೀಚೆಗೆ ಟ್ವಿಟರ್ನಲ್ಲಿ ವೈರಲ್ ಆಗಿತ್ತು. ಆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಹೇಳಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ