ವಿಜಯಪುರ, ಜ.2: ಹುಬ್ಬಳ್ಳಿಯ ಶಹರ ಠಾಣಾ ಪೊಲೀಸರು ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತನನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಪ್ರಕರಣದಲ್ಲಿ ಸಮಯ ಆದ ತಕ್ಷಣ ಅಪರಾಧವೇ ಹೋಗಿ ಬಿಡುತ್ತಾ ಎಂದು ಪ್ರಶ್ನಿಸಿದ್ದಾರೆ.
ವಿಜಯಪುರದ ಬಿಎಲ್ಡಿಇ ಹೆಲಿಪ್ಯಾಡ್ನಲ್ಲಿ ಮಾತನಾಡಿದ ಅವರು, ಯಾವತ್ತೂ ಅಪರಾಧಿ ಅಪರಾಧಿಯೇ ಆಗುತ್ತಾನೆ. ಹಳೆ ಪ್ರಕರಣವನ್ನು ಮುಗಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದ್ದಾರೆ. ಹಾಗಾಗಿ ಪ್ರಕರಣವನ್ನು ರೀಓಪನ್ ಮಾಡಲಾಗಿದೆ ಎಂದರು.
ಕಾಂಗ್ರೆಸ್ ನೀಚ ಸರ್ಕಾರ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅಪರಾಧಿಗಳಿಗೆ ಬೆಂಬಲ ಕೊಡುವ ಕೇಂದ್ರ ಸಚಿವ ಜೋಶಿಯವರದ್ದು ನೀಚತನ. ಈಗ ಅರೆಸ್ಟ್ ಮಾಡಿದರೆ ಏನು ತಪ್ಪು, ಬಂಧಿಸಬಾರದು ಅಂತಾ ಇದೆಯಾ? ಜೋಶಿ ಏನು ಕೋರ್ಟಾ? ಜೋಶಿ ಹೇಳಿದ್ದೇ ಅಂತಿಮವೇ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜಕೀಯವಾಗಿ ಮಾತನಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಮಾತನಾಡಲಿ. ಕಾನೂನು ಏನ್ ಹೇಳುತ್ತೋ ಅದನ್ನು ಸರ್ಕಾರ ಮಾಡುತ್ತೆ ಎಂದು ಹೇಳುವ ಮೂಲಕ ಶ್ರೀಕಾಂತ್ ಪೂಜಾರಿ ಬಂಧನವನ್ನು ಸಮರ್ಥಿಸಿಕೊಂಡರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ