ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಿ 2,836 ಕೋಟಿ ಆದಾಯ ಗಳಿಸಿದ ಕರ್ನಾಟಕ ಸರ್ಕಾರ!

| Updated By: ಸುಷ್ಮಾ ಚಕ್ರೆ

Updated on: May 16, 2022 | 5:50 PM

10 ವರ್ಷದ ಹಿಂದೆ ವಿದ್ಯುತ್ ಖರೀದಿ ಮಾಡುತ್ತಿದ್ದ ಕರ್ನಾಟಕ ರಾಜ್ಯ ಈಗ ಹೆಚ್ಚಿನ ವಿದ್ಯುತ್ ಉತ್ಪಾದಿಸಿ, ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸುತ್ತಿದೆ. ಇದು ಕರ್ನಾಟಕದ ವಿದ್ಯುತ್ ಕ್ಷೇತ್ರದ ಯಶಸ್ಸಿನ ಕಥೆ.

ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಿ 2,836 ಕೋಟಿ ಆದಾಯ ಗಳಿಸಿದ ಕರ್ನಾಟಕ ಸರ್ಕಾರ!
ವಿದ್ಯುತ್
Follow us on

ಬೆಂಗಳೂರು: ಕರ್ನಾಟಕ ರಾಜ್ಯ 10 ವರ್ಷಗಳ ಹಿಂದೆ ವಿದ್ಯುತ್ (Electricity) ಉತ್ಪಾದನೆಯಲ್ಲಿ ತೀವ್ರ ಕೊರತೆಯನ್ನು ಎದುರಿಸುತ್ತಿತ್ತು. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುವ ಸ್ಥಿತಿಯಲ್ಲಿ ಕರ್ನಾಟಕವಿತ್ತು. ಬೇರೆ ರಾಜ್ಯಗಳಲ್ಲೇ ವಿದ್ಯುತ್ ಉತ್ಪಾದನೆ ಮಾಡಿ, ಕರ್ನಾಟಕ ವಿದ್ಯುತ್ ಪಡೆಯುವ ಸ್ಥಿತಿಯಲ್ಲಿ ಇತ್ತು. ಆದರೆ, ಕಳೆದ 10 ವರ್ಷಗಳಲ್ಲಿ ಆದ ಬದಲಾವಣೆ, ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕೆಂಬ ಪ್ರಯತ್ನಗಳು ಈಗ ಫಲ ನೀಡಿವೆ. ಕೇವಲ 10 ವರ್ಷದ ಹಿಂದೆ ವಿದ್ಯುತ್ ಖರೀದಿ ಮಾಡುತ್ತಿದ್ದ ಕರ್ನಾಟಕ ರಾಜ್ಯ ಈಗ ಹೆಚ್ಚಿನ ವಿದ್ಯುತ್ ಉತ್ಪಾದಿಸಿ, ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸುತ್ತಿದೆ. ಇದು ಕರ್ನಾಟಕದ ವಿದ್ಯುತ್ ಕ್ಷೇತ್ರದ ಯಶಸ್ಸಿನ ಕಥೆ.

ಕರ್ನಾಟಕದಲ್ಲಿ ದಶಕಗಳ ಹಿಂದೆ ವಿದ್ಯುತ್​ಗೆ ತೀವ್ರ ಕೊರತೆ ಇತ್ತು. ಬೇರೆ ರಾಜ್ಯಗಳಿಂದ ಕರ್ನಾಟಕವು ವಿದ್ಯುತ್ ಅನ್ನು ಹಣ ನೀಡಿ ಖರೀದಿಸುವ ಸ್ಥಿತಿಯಲ್ಲಿ ಇತ್ತು. ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿಗೆ ರಾಜ್ಯವು ಇಂದಿಗೂ ಬೇರೆ ರಾಜ್ಯಗಳನ್ನೇ ಅವಲಂಬಿಸಿದೆ. ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಉತ್ಪಾದನಾ ಗಣಿಗಳಿಲ್ಲ. ಹೀಗಾಗಿ ಕರ್ನಾಟಕವು ಕಲ್ಲಿದ್ದಲಿಗಾಗಿ ಛತ್ತೀಸ್​ಗಢ, ಜಾರ್ಖಂಡ್‌, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳನ್ನು ಅವಲಂಬಿಸಿದೆ. ಮಹಾರಾಷ್ಟ್ರದ ಚಂದ್ರಾಪುರ, ಒರಿಸ್ಸಾದ ಮಹಾನಾಡಿ ಕಲ್ಲಿದ್ದಲು ಬ್ಲಾಕ್​ಗಳನ್ನು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ.

ಆದರೆ, ಕಳೆದೊಂದು ದಶಕದಲ್ಲಿ ಕರ್ನಾಟಕವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯಾಗಬೇಕೆಂದು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಈ ಎಲ್ಲ ಪ್ರಯತ್ನಗಳು ಈಗ ಫಲ ನೀಡಿವೆ. ಇದರ ಪರಿಣಾಮವಾಗಿ ಕರ್ನಾಟಕವು ಇಂದು ತನಗೆ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್ ಅನ್ನು ಕರ್ನಾಟಕದಲ್ಲೇ ಉತ್ಪಾದಿಸಿಕೊಂಡು ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಹೀಗೆ ವಿದ್ಯುತ್ ಮಾರಾಟದಿಂದ ಕರ್ನಾಟಕ ಸರ್ಕಾರ ಕಳೆದ ಕೆಲ ವರ್ಷಗಳಿಂದ ಸದ್ದಿಲ್ಲದೇ ಹಣ ಗಳಿಸುತ್ತಿದೆ. ದಶಕದ ಹಿಂದೆ ವಿದ್ಯುತ್ ಖರೀದಿಸುತ್ತಿದ್ದ ಕರ್ನಾಟಕ ರಾಜ್ಯ ಈಗ ವಿದ್ಯುತ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. 2021-22ರ ಹಣಕಾಸು ವರ್ಷದಲ್ಲಿ ಕರ್ನಾಟಕ ರಾಜ್ಯವು ವಿದ್ಯುತ್ ಮಾರಾಟದಿಂದ ಬರೋಬ್ಬರಿ 2,836 ಕೋಟಿ ರೂಪಾಯಿ ಆದಾಯ ಗಳಿಸಿದೆ. ಕಳೆದ 25 ದಿನಗಳಲ್ಲಿ ವಿದ್ಯುತ್ ಮಾರಾಟದಿಂದ ಬರೋಬ್ಬರಿ 800 ಕೋಟಿ ರೂ. ಆದಾಯ ಗಳಿಸಿದೆ. ಇದನ್ನು ಕೇಳಿದರೆ ನಿಮಗೆ ಅಶ್ಚರ್ಯವಾಗಬಹುದು. ಆದರೆ, ಇದು ಸತ್ಯ.

ವಿದ್ಯುತ್ ಮಾರಾಟದಿಂದ ಕರ್ನಾಟಕ ರಾಜ್ಯ ಸರ್ಕಾರ ಹಣ ಗಳಿಸುತ್ತಿರುವುದನ್ನು ಇಂಧನ ಇಲಾಖೆಯ ಸಚಿವ ಸುನೀಲ್ ಕುಮಾರ್ ಖಚಿತಪಡಿಸಿದ್ದಾರೆ. ಕಳೆದ 20 ದಿನಗಳಿಂದ ಕರ್ನಾಟಕದಲ್ಲಿ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ. ಇದರಿಂದ ಕೃಷಿ ಬೋರ್ ವೆಲ್ ಗಳು ಬಳಕೆಯಾಗುತ್ತಿಲ್ಲ. ಜೊತೆಗೆ ಬೇಸಿಗೆಯ ಬಿಸಿಲು ತೀವ್ರವಾಗಿದೆ. ಇದರ ಪರಿಣಾಮವಾಗಿ ಸೋಲಾರ್ ವಿದ್ಯುತ್ ಹೆಚ್ಚಾಗಿ ಉತ್ಪಾದನೆಯಾಗಿದ್ದನ್ನು ಬೇರೆ ರಾಜ್ಯಗಳಿಗೆ ಮಾರಲಾಗುತ್ತಿದೆ.

ಕರ್ನಾಟಕವು ಈಗ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮಾತ್ರ ವಿದ್ಯುತ್ ಉತ್ಪಾದನೆಗೆ ಅವಲಂಬಿಸಿಲ್ಲ. ಸೌರ ವಿದ್ಯುತ್, ಪವನ ವಿದ್ಯುತ್, ಜಲ ವಿದ್ಯುತ್ ಅನ್ನು ಉತ್ಪಾದಿಸುತ್ತಿದೆ. ತುಮಕೂರು ಜಿಲ್ಲೆಯ ಪಾವಗಡದಲ್ಲಿ 2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ ಇದೆ. ಇದೇ ರೀತಿ ಕೋಲಾರ, ಉತ್ತರ ಕರ್ನಾಟಕ ಭಾಗದಲ್ಲೂ ಸೌರ ವಿದ್ಯುತ್ ಉತ್ಪಾದನಾ ಘಟಕಗಳಿವೆ. ರೈತರು ತಮ್ಮ ಜಮೀನುಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸಿ, ಸರ್ಕಾರಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದ್ದಾರೆ. ಸೋಲಾರ್ ವಿದ್ಯುತ್ ಅನ್ನು ಹೆಚ್ಚಾಗಿ ಕರ್ನಾಟಕ ಉತ್ಪಾದಿಸುತ್ತಿದೆ. ಸೋಲಾರ್ ಜೊತೆಗೆ ಜಲ ವಿದ್ಯುತ್ ಅನ್ನು ಕರ್ನಾಟಕ ಉತ್ಪಾದಿಸುತ್ತಿದೆ. ಆದರೇ, ಹೀಗೆ ಉತ್ಪಾದನೆಯಾದ ವಿದ್ಯುತ್ ಅನ್ನು ಸಂಗ್ರಹಿಸಿಟ್ಟುಕೊಳ್ಳುವ ದೊಡ್ಡ ಸ್ಟೋರೇಜ್ ಬ್ಯಾಟರಿಗಳು, ಅಗತ್ಯ ಮೂಲಸೌಕರ್ಯ ಕರ್ನಾಟಕದಲ್ಲಿ ಇಲ್ಲ. ಹೀಗಾಗಿ ತನ್ನ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿ ಕರ್ನಾಟಕ ಸರ್ಕಾರ ಇದೆ. ಕೇಂದ್ರ ಸರ್ಕಾರವು ಕೂಡ ಎಲ್ಲ ರಾಜ್ಯಗಳಿಗೂ ಹೆಚ್ಚುವರಿ ವಿದ್ಯುತ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಹೆಚ್ಚುವರಿ ವಿದ್ಯುತ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸುತ್ತಿದೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ 1,292 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಕರ್ನಾಟಕ ಸರ್ಕಾರವು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿತ್ತು. ಆದರೆ, ಅಂತಿಮವಾಗಿ 1,162 ಮಿಲಿಯನ್ ಯೂನಿಟ್ ವಿದ್ಯುತ್ ಅನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ 377 ಕೋಟಿ ರೂ. ಆದಾಯವನ್ನು ವಿದ್ಯುತ್ ಮಾರಾಟದಿಂದ ಕರ್ನಾಟಕ ಸರ್ಕಾರ ಗಳಿಸಿದೆ.

2021ರ ಆಗಸ್ಟ್ ತಿಂಗಳಲ್ಲಿ 602 ಮಿಲಿಯನ್ ಯೂನಿಟ್ ವಿದ್ಯುತ್ ಮಾರಾಟದಿಂದ 507 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. 2021-22ರ ಹಣಕಾಸು ವರ್ಷದಲ್ಲಿ ಕರ್ನಾಟಕವು ಸರಾಸರಿ ಪ್ರತಿ ಯೂನಿಟ್​ಗೆ 4.3 ರೂ. ದರದಲ್ಲಿ ವಿದ್ಯುತ್ ಅನ್ನು ಮಾರಾಟ ಮಾಡಿದೆ.

ನಾವು ನಮ್ಮ ವಿದ್ಯುತ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಳ ಮಾಡುವವರೆಗೂ ಹಾಗೂ ಹೆಚ್ಚುವರಿ ವಿದ್ಯುತ್ ಅನ್ನು ರಾಜ್ಯದಲ್ಲೇ ಬಳಸಿಕೊಳ್ಳುವವರೆಗೂ ವಿದ್ಯುತ್ ಮಾರಾಟ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ರಾಜ್ಯದ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಜೂನ್​ನಿಂದ ಮಾನ್ಸೂನ್ ಆರಂಭವಾಗಲಿದೆ. ಮಾನ್ಸೂನ್​ನಿಂದ ರಾಜ್ಯದ ಜಲಾಶಯಗಳು ತುಂಬಲಿವೆ. ಒಳ್ಳೆಯ ಮಾನ್ಸೂನ್ ಮಳೆಯಾದರೆ ಬೋರ್​ವೆಲ್​ಗಳಿಗೆ ಕರೆಂಟ್ ಬೇಕಾಗುವುದಿಲ್ಲ. ಆಗ ಸೋಲಾರ್ ವಿದ್ಯುತ್, ಜಲ ವಿದ್ಯುತ್ ಅನ್ನು ಮಾರಾಟ ಮಾಡಬಹುದು.

ಆದರೆ, ಮಾನ್ಸೂನ್ ಮಳೆ ವಿಫಲವಾದರೆ, ರಾಜ್ಯದಲ್ಲೇ ವಿದ್ಯುತ್​ಗೆ ಬೇಡಿಕೆ ಹೆಚ್ಚಾಗಲಿದೆ. ಕೃಷಿ ಬೋರ್​ವೆಲ್​ಗಳಿಗೆ ಕರೆಂಟ್ ಪೂರೈಕೆ ಹೆಚ್ಚಾಗಿ ಮಾಡಬೇಕಾಗುತ್ತದೆ. ರಾಜ್ಯದ ಸೋಲಾರ್ ವಿದ್ಯುತ್ ಅನ್ನು ರಾಜ್ಯದಲ್ಲೇ ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ. ಅಂಥ ಪರಿಸ್ಥಿತಿಯಲ್ಲಿ ವಿದ್ಯುತ್ ಅನ್ನು ಮಾರಾಟ ಮಾಡಲಾಗಲ್ಲ. ಕರ್ನಾಟಕವು ಸದ್ಯ ಸೋಲಾರ್ ವಿದ್ಯುತ್ ಅನ್ನು ಮಾರಾಟ ಮಾಡುತ್ತಿದೆ. ಆದರೆ, ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುವ ಸಾಧ್ಯತೆಯನ್ನು ಪರಿಗಣಿಸಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ಕರ್ನಾಟಕ ಸರಕಾರವು ರಾಜ್ಯದಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿರುವುದೇನೋ ಒಳ್ಳೆಯ ಬೆಳವಣಿಗೆ. ಆದರೆ, ಕರ್ನಾಟಕದ ರೈತರೇ ತಮ್ಮ ಕೃಷಿ ಬೆಳೆಗಳಿಗೆ ಬೇಸಿಗೆ ಕಾಲದಲ್ಲಿ ಈಗ ನೀಡುತ್ತಿರುವ ದಿನಕ್ಕೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ಪರಿಗಣಿಸಿದಂತೆ ಇಲ್ಲ. ಮಾನ್ಸೂನ್ ಕಾಲದಲ್ಲಿ ಮಳೆಯಾದಾಗ, ರೈತರ ಬೆಳೆಗಳಿಗೆ ಬೋರ್ ವೆಲ್ ನೀರು ಬೇಕಾಗಲ್ಲ. ಆದರೆ, ಬೇಸಿಗೆ ಕಾಲದಲ್ಲೂ ರಾತ್ರಿ ವೇಳೆ ತ್ರಿಫೇಸ್ ಕರೆಂಟ್ ನೀಡುವುದರಿಂದ ರೈತರು ಜಮೀನು ಬಳಿ ಹಾವು-ಚೇಳು, ಕಾಡುಪ್ರಾಣಿಗಳ ಕಾಟದ ಮಧ್ಯೆ ಓಡಾಡಬೇಕಾದ ಅನಿವಾರ್ಯ ಸ್ಥಿತಿ ಇದೆ. ಹೀಗಾಗಿ, ಹಗಲು ವೇಳೆಯೇ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕೆಂದು ವಿಧಾನಸಭೆಯಲ್ಲೂ ಚರ್ಚೆ ಆಗಿದೆ. ಆದರೆ, ಶಾಸಕರ ಅಭಿಪ್ರಾಯಗಳನ್ನು ಕೂಡ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ರೈತರ ಬೇಡಿಕೆಯನ್ನು ಈಡೇರಿಸಿಲ್ಲ.

ಕರ್ನಾಟಕದಲ್ಲಿ 2022ರ ಮಾರ್ಚ್ ತಿಂಗಳಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆಯು 14,818 ಮೆಗಾವ್ಯಾಟ್​ಗೆ ಏರಿಕೆಯಾಗಿತ್ತು. 2021ರ ಜುಲೈ 24 ರಂದು ಕರ್ನಾಟಕದ ಗರಿಷ್ಠ ವಿದ್ಯುತ್ ಬೇಡಿಕೆಯು 6,600 ಮೆಗಾವ್ಯಾಟ್ ಗೆ ಕುಸಿದಿತ್ತು. ಮಳೆಯ ಕಾರಣದಿಂದಾಗಿ 2021ರ ಜುಲೈ 24 ರಂದು ವಿದ್ಯುತ್ ಬೇಡಿಕೆಯು 6,600 ಮೆಗಾವ್ಯಾಟ್‌ಗೆ ಕುಸಿದಿತ್ತು. ಕರ್ನಾಟಕದಲ್ಲಿ ಉತ್ಪಾದನೆಯಾದ ವಿದ್ಯುತ್ ನಲ್ಲಿ ಸೋರಿಕೆಯೂ ಇದೆ. ಸೋರಿಕೆ ತಡೆಗಟ್ಟಲು ಕೆಪಿಟಿಸಿಎಲ್ ಕೆಲ ಕ್ರಮಗಳನ್ನು ಕೈಗೊಂಡಿದೆ.

ಕರ್ನಾಟಕದಲ್ಲಿ ಎಲ್ಲ ಮೂಲಗಳಿಂದ ದಿನವೂ 30,506 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದೆ. ಇದರಲ್ಲಿ 10,343 ಮೆಗಾವ್ಯಾಟ್ ಅನ್ನು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಸಿ ಉತ್ಪಾದಿಸಲಾಗುತ್ತದೆ. ಕರ್ನಾಟಕದಲ್ಲಿ ಒಟ್ಟಾರೆ ಉತ್ಪಾದನೆಯಾಗುವ ವಿದ್ಯುತ್​ನಲ್ಲಿ ಶೇ.51ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದನೆಯಾಗುತ್ತದೆ. ಅಂದರೆ, ಸೋಲಾರ್, ಪವನ ವಿದ್ಯುತ್ ಗಳಿಂದ ಶೇ.51ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಶೇ.12ರಷ್ಟು ಜಲ ವಿದ್ಯುತ್ ಉತ್ಪಾದನೆಯಾಗುತ್ತದೆ. ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ.3ರಷ್ಟು ಅಣುಶಕ್ತಿಯಿಂದ ಉತ್ಪಾದನೆಯಾಗುತ್ತದೆ. ಶೇ.34ರಷ್ಟು ಮಾತ್ರ ಥರ್ಮಲ್ ಪವರ್ ಉತ್ಪಾದನೆಯಾಗುತ್ತದೆ. ಹೀಗೆ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಯಾಗುವುದರಿಂದ ಬೇಸಿಗೆ ಕಾಲದಲ್ಲಿ ಇಡೀ ದೇಶದಲ್ಲಿ ಕಲ್ಲಿದ್ದಲು ಕೊರತೆಯಿಂದ ಪವರ್ ಕಟ್ ಸಾಮಾನ್ಯವಾಗಿದ್ದರೂ, ಕರ್ನಾಟಕದಲ್ಲಿ ಪವರ್ ಕಟ್ ಸಮಸ್ಯೆ ಇರಲಿಲ್ಲ. ಕಲ್ಲಿದ್ದಲು ಕೊರತೆಯ ವೇಳೆ ಸೋಲಾರ್ ವಿದ್ಯುತ್, ಪವನ ವಿದ್ಯುತ್ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಪೂರೈಸಲಾಗಿದೆ.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Mon, 16 May 22