ಬೆಂಗಳೂರು, ಜ.22: ಅಯೋಧ್ಯೆಗೆ ಪ್ರಭು ಶ್ರೀರಾಮ ಮರಳಿ ಬರುತ್ತಿರುವ ಹಿನ್ನೆಲೆ ದೇಶಾದ್ಯಂತ ದೀಪಾವಳಿ ಆಚರಣೆಗೆ ಕರೆ ನೀಡಲಾಗಿತ್ತು. ಅದರಂತೆ ಇಂದು ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮ ವಿರಾಜಮಾನನಾಗಿದ್ದು, ರಾಮ ಜ್ಯೋತಿ (Ram Jyothi) ಹೆಸರಿನಡಿ ಅಯೋಧ್ಯೆಯಲ್ಲಿ 10 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ಅಲ್ಲದೆ, ಕೋಟ್ಯಂತರ ಹಿಂದೂಗಳ ಮನೆಮನೆಗಳಲ್ಲೂ ದೀಪಗಳನ್ನು ಬೆಳಗುವ ಮೂಲಕ ಸಂಭ್ರಮಾಚರಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಬಿಜೆಪಿ (BJP Karnataka) ಕಚೇರಿಯಲ್ಲಿ ಅಯೋಧ್ಯೆ ಮಂದಿರದ ಆಕಾರದಲ್ಲಿ ದೀಪಗಳನ್ನು ಬೆಳಗಿಸಲಾಗಿದೆ.
ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಶ್ರೀರಾಮಮಂದಿರದ ಆಕಾರದಲ್ಲಿ ದೀಪ ಬೆಳಗಿಸಲಾಯಿತು. ಶ್ರೀರಾಮನ ಫೋಟೋ ಮುಂದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೀಪ ಬೆಳಗಿದರು. ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಒಟ್ಟು 1008 ದೀಪಗಳನ್ನು ಬೆಳಗಿದರು. ಈ ವೇಳೆ ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಂ ಗೌಡ ಮತ್ತಿತರರಿದ್ದರು.
ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ರಾಮಭಕ್ತರ ಅಪೇಕ್ಷೆಯಂತೆ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ನೆರವೇರಿದೆ. ಶ್ರೀರಾಮನ ಬಗ್ಗೆ ಭಕ್ತಿ ಪ್ರತಿಯೊಬ್ಬರಲ್ಲೂ ಜಾಗೃತವಾಗಿದೆ. ಪ್ರತಿ ಹಿಂದೂಗಳು ರಾಮಲಲ್ಲಾ ಪ್ರತಿಷ್ಠಾಪನೆ ಆರಾಧಿಸಿದ್ದಾರೆ ಎಂದರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ರಾಮ ಜ್ಯೋತಿ ಬೆಳಗಿದ ಮೋದಿ
ಬೆಂಗಳೂರಿನ ರಸ್ತೆ ಎಲ್ಲಾ ಖಾಲಿ ಖಾಲಿ ಇತ್ತು. ಎಲ್ಲರೂ ಮನೆಯಲ್ಲಿ ಕುಳಿತು ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಿದ್ದಾರೆ. ರಾಮ ರಾಜ್ಯದ ಕನಸು ಮೋದಿ ನೇತೃತ್ವದಲ್ಲಿ ನನಸಾಗಲಿದೆ. ಪ್ರತಿ ರಾಜ್ಯ ಅಭಿವೃದ್ಧಿ ಆಗಲಿದೆ. 2047 ಕ್ಕೆ ಭಾರತ ವಿಕಸಿತ ಭಾರತ ಆಗಲಿದೆ. ರಾಮರಾಜ್ಯದ ಕನಸು ಕೂಡ ಮುಂದಿನ ದಿನಗಳಲ್ಲಿ ನನಸಾಗಲಿದೆ. ಪ್ರತಿ ಹಿಂದೂ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂಜೆ ‘ರಾಮ ಜ್ಯೋತಿ’ ಬೆಳಗಿಸಿದರು. ಈ ಶುಭ ಸಂದರ್ಭದಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಿ ಬಾಲರಾಮನನ್ನು ಸ್ವಾಗತಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದರು.
ಎಲ್ಲಾ ದೇಶವಾಸಿಗಳು ರಾಮ ಜ್ಯೋತಿಯನ್ನು ಬೆಳಗಿಸಲು ಮತ್ತು ಅವರ ಮನೆಗಳಲ್ಲಿ ಭಗವಾನ್ ರಾಮನನ್ನು ಸ್ವಾಗತಿಸುವಂತೆ ನಾನು ವಿನಂತಿಸುತ್ತೇನೆ. ಜೈ ಸಿಯಾ ರಾಮ್ ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಅಯೋಧ್ಯಾ ನಗರವು 10 ಲಕ್ಷ ದೀಪಗಳ ಪ್ರಕಾಶದಿಂದ ಅಲಂಕರಿಸಲ್ಪಟ್ಟಿದ್ದು ಅದ್ಭುತವಾಗಿ ಕಾಣಿಸುತ್ತಿದೆ. ಅಂಗಡಿಗಳು, ಧಾರ್ಮಿಕ ಸ್ಥಳಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ‘ರಾಮ ಜ್ಯೋತಿ’ಯನ್ನು ಬೆಳಗಿಸಲಾಗಿದೆ.
ರಾಮ ಮಂದಿರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ