ರಾಮನ ಬ್ಯಾನರ್ ಹರಿದ ಕಿಡಿಗೇಡಿಗಳು: ಕೇಸರಿ ಬಾವುಟ ಹಿಡಿದು ಪ್ರತಿಭಟನೆಗಳಿದ ಗ್ರಾಮಸ್ಥರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹಾಕಿದ್ದ ಬ್ಯಾನರ್ನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಹೀಗಾಗಿ ಕೇಸರಿ ಬಾವುಟಗಳನ್ನ ಹಿಡಿದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಸೂಲಿಬೆಲೆ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ದೇವನಹಳ್ಳಿ, ಜನವರಿ 22: ರಾಮನೂರು ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಈ ದಿನವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ಸಂಭ್ರಮಿಸಲಾಗಿದೆ. ಆದರೆ ಇದೇ ಶುಭದಿನದಂದು ಕೆಲವರು ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹಾಕಿದ್ದ ಬ್ಯಾನರ್ (banner) ನ್ನು ಕಿಡಿಗೇಡಿಗಳು ಹರಿದು ಹಾಕಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ನಡೆದಿದೆ. ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು, ಕೇಸರಿ ಬಾವುಟಗಳನ್ನ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಸೂಲಿಬೆಲೆ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ
ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಹಿಂದು ಕಾರ್ಯಕರ್ತರಿಂದ ಸಿಹಿ ವಿತರಣೆ ಮಾಡುತ್ತಿದ್ದ ವೇಳೆ ಅದೇ ದಾರಿಯಲ್ಲಿ ಬಂದ ಮುಸ್ಲಿಂ ಮಹಿಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಾಳೆ. ನೀವು ಮೋದಿ ಪರ ಕೆಲಸ ಮಾಡುತ್ತಿದ್ದೀರಾ ಎಂದು ಮಹಿಳೆ ಪೊಲೀಸರಿಗೆ ಆವಾಜ್ ಹಾಕಿದ್ದಾಳೆ. ಸ್ಥಳದಲ್ಲಿದ್ದ ಹಿಂದು ಕಾರ್ಯಕರ್ತರಿಂದ ಪ್ರತಿರೋಧ ವ್ಯಕ್ತವಾಗಿದ್ದು, ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ: ಎಸ್ಪಿ ಮಿಥುನ್ ಕುಮಾರ್
ಮುಸ್ಲಿಂ ಮಹಿಳೆಯನ್ನು ಬಂಧಿಸುವಂತೆ ಬಿಜೆಪಿ ಮುಖಂಡ, ಮಾಜಿ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಂದ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಸ್ಲಿಂ ಮಹಿಳೆ ನ್ಯೂಸೆನ್ಸ್ ಮಾಡುತ್ತಿದ್ದರು ಸುಮ್ಮನಿದ್ದೀರಾ ಎಂದಿದ್ದಾರೆ. ನಂತರ ಮುಸ್ಲಿಂ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.
ಈ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, 500 ವರ್ಷಗಳ ಬಳಿಕ ಹಿಂದೂಗಳ ಕನಸು ನನಸಾಗಿದೆ. ಆದರೆ, ಸಂಭ್ರಮದ ವೇಳೆ ಷಡ್ಯಂತ್ರ ರೂಪಿಸುವ ಕೆಲಸ. ಶಿವಪ್ಪನಾಯಕ ಪ್ರತಿಮೆ ಬಳಿ ಸಂಭ್ರಮಾಚರಣೆ ನಡೀತಿತ್ತು. ಈ ವೇಳೆ ಬುರ್ಕಾ ಧರಿಸಿ ಬಂದಿದ್ದ ಮಹಿಳೆ ಘೋಷಣೆ ಕೂಗಿ ಪ್ರಧಾನಿ ಮೋದಿಗೆ ಅಪಮಾನಿಸಿದ್ದಾಳೆ ಎಂದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಎಸ್ಡಿಪಿಐ ವಿರೋಧ
ಘಟನೆ ಕುರಿತು ನಾನು ಎಸ್ಪಿ ಜೊತೆ ಮಾತನಾಡಿದೆ. ಆ ಮುಸ್ಲಿಂ ಮಹಿಳೆ ಹುಚ್ಚಿ ಎಂದು ಎಸ್ಪಿ ಹೇಳಿದರು. ಹುಚ್ಚಿ ಅಂತ ನೀವೇ ಹೇಗೆ ನಿರ್ಧರಿಸ್ತೀರಿ ಎಂದು ಕೇಳಿದೆ. ಆಕೆ ವಿರುದ್ಧ FIR ಹಾಕಿ, ಅರೆಸ್ಟ್ ಮಾಡಲು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:26 pm, Mon, 22 January 24