ಬಾಗಲಕೋಟೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ವಿರೋಧ; ಡಿಸಿ ಕಚೇರಿ ಎದುರು ಮಹಿಳೆಯರಿಂದ ಪ್ರತಿಭಟನೆ

ಗ್ರಾಮದಲ್ಲಿ ಮದ್ಯದಂಗಡಿ ಆರಂಭವಾದಾಗಿನಿಂದ‌ ಕೆಲವರು ಪ್ರತಿನಿತ್ಯ ಕುಡಿತದ ದಾಸರಾಗಿದ್ದಾರೆ‌. ಯುವಕರು ಕುಡಿದ‌ ಮತ್ತಲ್ಲಿ ಯುವತಿಯರು, ಮಹಿಳೆಯರ ಜತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಪತ್ನಿ, ಮಕ್ಕಳ ಜತೆಗೆ ದಿನಾಲೂ ಜಗಳ ಗಲಾಟೆ ನಡೆಯುತ್ತಿವೆ. ಆದ ಕಾರಣ ಮದ್ಯದಂಗಡಿ ಸ್ಥಳಾಂತರ ಮಾಡಿ ಎಂದು ಸ್ಥಳೀಯ ಮಹಿಳೆ ದುರ್ಗವ್ವ ಆಗ್ರಹಿಸಿದ್ದಾರೆ.

ಬಾಗಲಕೋಟೆಯಲ್ಲಿ ಮದ್ಯದಂಗಡಿ ಆರಂಭಕ್ಕೆ ವಿರೋಧ; ಡಿಸಿ ಕಚೇರಿ ಎದುರು ಮಹಿಳೆಯರಿಂದ ಪ್ರತಿಭಟನೆ
ಮದ್ಯದಂಗಡಿ
Edited By:

Updated on: Jun 27, 2021 | 5:00 PM

ಬಾಗಲಕೋಟೆ: ಮದ್ಯಪಾನ ಮಾಡುವವರು ಯಾರ ಮಾತು ಕೂಡ ಕೇಳುವುದಿಲ್ಲ ಎನ್ನುವ ಮಾತಿದೆ. ಅಲ್ಲದೇ ಮದ್ಯಕ್ಕೆ ದಾಸರಾಗಿ ಸಂಸಾರವನ್ನು ಬೀದಿಗೆ ತಳ್ಳಿದ ಅದೇಷ್ಟೋ ಘಟನೆಗಳ ಬಗ್ಗೆ ನಾವು ಓದಿದ್ದೇವೆ. ಆದರೆ ಮದ್ಯದಂಗಡಿ ನಿರ್ಮಾಣದ ಕಾರ್ಯ ಮಾತ್ರ ಇನ್ನು ಕೂಡ ಕಡಿಮೆಯಾಗಿಲ್ಲ. ಬದಲಾಗಿ ಒಂದರ ಮೇಲೆ ಒಂದರಂತೆ ಹಳ್ಳಿ ಮತ್ತು ನಗರಗಳಲ್ಲಿ ಮದ್ಯದಂಡಿಗಳ ಸಂಖ್ಯೆ ಏರುತ್ತಲೇ ಇದೆ. ಸದ್ಯ ಇದೇ ವಿಚಾರವಾಗಿ ಬಾಗಲಕೋಟೆ ಜಿಲ್ಲೆಯ ಗ್ರಾಮವೊಂದರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ವಿರೋಧದ ನಡುವೆಯೂ ಆರಂಭವಾದ ಎಮ್​ಎಸ್​ಐಎಲ್​ ಮದ್ಯದಂಗಡಿಗೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ತಲೆ ಎತ್ತಿರುವ ಎಮ್​ಎಸ್​ಐಎಲ್​ ಮದ್ಯದಂಗಡಿ ಈಗ ಗ್ರಾಮದ ಪ್ರಜ್ಞಾವಂತ‌ ನಾಗರೀಕರ ಹಾಗೂ ಮಹಿಳೆಯರ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ. ಆರಂಭದ ವೇಳೆಯೂ ವಿರೋಧ ಮಾಡಿದರೂ ಮದ್ಯದಂಗಡಿ ಆರಂಭವಾಗಿದೆ. ಇದರಿಂದ ಗ್ರಾಮದ‌ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಡಿಸಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಾರೆ. ಗ್ರಾಮದಲ್ಲಿ ಮದ್ಯದಂಗಡಿ ಆರಂಭವಾದಾಗಿನಿಂದ‌ ಕೆಲವರು ಪ್ರತಿನಿತ್ಯ ಕುಡಿತದ ದಾಸರಾಗಿದ್ದಾರೆ‌. ಯುವಕರು ಕುಡಿದ‌ ಮತ್ತಲ್ಲಿ ಯುವತಿಯರು, ಮಹಿಳೆಯರ ಜತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಪತ್ನಿ, ಮಕ್ಕಳ ಜತೆಗೆ ದಿನಾಲೂ ಜಗಳ ಗಲಾಟೆ ನಡೆಯುತ್ತಿವೆ. ಆದ ಕಾರಣ ಮದ್ಯದಂಗಡಿ ಸ್ಥಳಾಂತರ ಮಾಡಿ ಎಂದು ಸ್ಥಳೀಯ ಮಹಿಳೆ ದುರ್ಗವ್ವ ಆಗ್ರಹಿಸಿದ್ದಾರೆ.

ಹೊಸೂರು ಗ್ರಾಮದ ಜನರ ಪ್ರಮುಖ ಕಾರ್ಯ ಅಂದರೆ ಅದು ಕೃಷಿ ಮಾಡುವುದು. ಜತೆಗೆ ಸಾಕಷ್ಟು ಜನರು ದಿನ ಬೆಳಗಾದರೆ ಕೂಲಿ‌ ಕೆಲಸ ಮಾಡುತ್ತಾರೆ. ಕೆಲವರು ಬಾದಾಮಿ ಪಟ್ಟಣಕ್ಕೆ ವಿವಿಧ ಅಂಗಡಿಯಲ್ಲಿ ಕೆಲಸ‌ ಮಾಡುವುದಕ್ಕೆ ಹೋಗುವ ಶ್ರಮಜೀವಿಗಳು.ಗ್ರಾಮದಲ್ಲಿ ಪ್ರತಿಶತ ಎಂಬತ್ತರಷ್ಟು ಬಡಜನರೇ ವಾಸವಾಗಿದ್ದಾರೆ. ಕೂಲಿ‌ಮಾಡಿ‌ ಹೊಟ್ಟೆ ಹೊರೆಯುವಂತವರಿದ್ದಾರೆ. ಆದರೆ ಗ್ರಾಮದಲ್ಲಿಯೇ ಮದ್ಯದಂಗಡಿ ಮಾಡಿ ಬಡ ಕಾರ್ಮಿಕರ ಬದುಕನ್ನು‌ ಮೂರಾಬಟ್ಟೆ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ನಾಗೇಶ್ ತಿಳಿಸಿದ್ದಾರೆ.

ಗ್ರಾಮದ ಒಳಿತಿಗಾಗಿ ಇಲ್ಲಿನ ಗ್ರಾಮಸ್ಥರು ಮದ್ಯದಂಗಡಿ ಬಂದ್ ಮಾಡಿಸಿ ಎಂದು ಪಟ್ಟು ಹಿಡಿದಿದ್ದು, ಈಗಾಗಲೇ ಡಿಸಿ‌ ಕಚೇರಿ‌ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಬಾದಾಮಿ ಶಾಸಕರಾದ ಸಿದ್ದರಾಮಯ್ಯ ಅವರಿಗೂ ಮನವಿ‌ ಮಾಡಿದ್ದಾರೆ. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ ಹಗಳಗಾರ ಕೇಳಿದರೆ ಎಮ್​ಎಸ್​ಐಎಲ್​ ಮದ್ಯದಂಗಡಿಯನ್ನು ಕಾನೂನು ಚೌಕಟ್ಟಿನ ನಿಯಮಾನುಸಾರ ನಿರ್ಮಾಣ ಮಾಡಲಾಗಿದೆ. ಸ್ಥಳೀಯರು ಸ್ಥಳಾಂತರ ‌ಮಾಡಬೇಕು ಎಂದು ‌ಮನವಿ ಕೊಟ್ಟಿದ್ದಾರೆ. ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಲಾಗಿದ್ದು,ಅವರ ಸೂಚನೆ ಪ್ರಕಾರ ‌ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ದೆಹಲಿಯಲ್ಲಿ ಲಾಕ್​ಡೌನ್ ಘೋಷಣೆಯಾದ ಕೂಡಲೇ ಮದ್ಯದಂಗಡಿ ಮುಂದೆ ಜನವೋ ಜನ

ಮದ್ಯದಂಗಡಿ ಮುಚ್ಚುವಂತೆ ಗ್ರಾಮಸ್ಥರಿಂದ ಧರಣಿ, ಫ್ಲೆಕ್ಸ್​ಗಳನೆಲ್ಲ ಹರಿದು ಆಕ್ರೋಶ