ಬಾಗಲಕೋಟೆ, ನ.18: ಜಿಲ್ಲೆಯ ಅಲ್ಪಸಂಖ್ಯಾತ ಪತ್ತಿನ ಸಹಕಾರಿ ಬ್ಯಾಂಕ್ನಲ್ಲಿ 10 ಕೋಟಿಗೂ (10 crore Golmaal) ಅಧಿಕ ಸಾಲದಲ್ಲಿ ಗೋಲ್‌ಮಾಲ್ ನಡೆದಿದೆ. ಆಡಳಿತ ಮಂಡಳಿ, ಮ್ಯಾನೇಜರ್, ಸಿಇಒಗಳಿಂದ ಗೋಲ್ ಮಾಲ್ ನಡೆದಿದ್ದು ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತ ನಾಮದೇವ ಸಾಲಾಪುರ ಎಂಬುವವರು ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಸದ್ಯ ಇಡೀ ಅಕ್ರಮದ ಕುರಿತು ತನಿಖೆ ನಡೆಸಲಾಗಿದ್ದು ತನಿಖೆಯಲ್ಲಿ ಅಕ್ರಮ ಬಯಲಾಗಿದೆ. ಹೀಗಾಗಿ ಬ್ಯಾಂಕ್ ಆಡಳಿತ ಮಂಡಳಿಗೆ ನೊಟೀಸ್ ನೀಡಲಾಗಿದೆ.
ಇದೇ ವರ್ಷ ಜೂನ್ 27ರಂದು ನಾಮದೇವ ಸಾಲಾಪುರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಬೆನ್ನಲ್ಲೆ ಬೆಂಗಳೂರು ಲೋಕಾಯುಕ್ತ ಕಚೇರಿಯಿಂದ ಬಾಗಲಕೋಟೆ ಸಹಕಾರ ಇಲಾಖೆ ಉಪನಿಬಂಧಕರಿಗೆ ತನಿಖೆ ನಡೆಸಲು ಸೂಚನೆ ನೀಡಲಾಗಿತ್ತು. ಸೂಚನೆ ಮೇರೆಗೆ ತನಿಖೆ ನಡೆಸಿದ್ದು ಅಕ್ರಮ ಬಯಲಾಗಿದೆ. ಸಹಕಾರಿ ಬ್ಯಾಂಕ್ ನಿಯಮ ಉಲ್ಲಂಘಿಸಿ ಕೋಟಿ ಕೋಟಿ ಹಣ ಸಾಲ ವಿತರಣೆ ಮಾಡಿರುವುದು ಪತ್ತೆಯಾಗಿದೆ. ಸಮೂಹ ರಚಿಸಿಕೊಂಡು ಒಂದು ಕುಟುಂಬದ 24 ಜನರು, ಇನ್ನೊಂದು ಕುಟುಂಬ ಸಮೂಹ ರಚಿಸಿಕೊಂಡು 15 ಜನರಿಗೆ ಹಾಗೂ ಮತ್ತೊಂದು ಕುಟುಂಬದ 3 ಜನರಿಗೆ ಸಾಲ ನೀಡಲಾಗಿದೆ. ಮೂರು ಪ್ರತ್ಯೇಕ ಕುಟುಂಬ ಸಮೂಹ ರಚಿಸಿಕೊಂಡು ಒಟ್ಟು 10 ಕೋಟಿ 66 ಲಕ್ಷ ಸಾಲ ಪಡೆದಿದ್ದಾರೆ. ಬಡ್ಡಿಯಲ್ಲೂ ಒಬ್ಬೊಬ್ಬರಿಗೆ ಮನಬಂದಂತೆ ಬಡ್ಡಿ ಫಿಕ್ಸ್ ಮಾಡಲಾಗಿದೆ. ಈ ಮೂಲಕ ಭಾರೀ ಅಕ್ರಮ ನಡೆದಿರುವುದು ಬಹಿರಂಗವಾಗಿದೆ.
ಒಬ್ಬರಿಗೆ 14%, ಮತ್ತೊಬ್ಬರಿಗೆ 12%, ಇನ್ನೊಬ್ಬರಿಗೆ 16% ರಂತೆ ಬಡ್ಡಿ ವಿಧಿಸಿ ಬ್ಯಾಂಕ್ನ ನಿಯಮ ಉಲ್ಲಂಘನೆ ಮಾಡಲಾಗಿದೆ. ಉಸ್ಮಾನ್ ಸಾಗರ ಎಂಬುವರ ಹೆಸರಿನಲ್ಲಿ ಸಮೂಹ ರಚಿಸಿಕೊಂಡು ಅವರ ಕುಟುಂಬ ಹಾಗೂ ಸಂಬಂಧಿಕರ ಹೆಸರಿನಲ್ಲಿ ಎರಡು ಆಸ್ತಿ ಮೇಲೆ 2018ರಲ್ಲಿ 5 ಕೋಟಿ 59 ಲಕ್ಷ ಸಾಲ ವಿತರಣೆ ಮಾಡಲಾಗಿದೆ. ಇದುವರೆಗೂ ಕೇವಲ ಬಡ್ಡಿ ಮಾತ್ರ ವಸೂಲಿ ಮಾಡಲಾಗಿದೆ. ತೌಫಿಕ್ ಪಾರ್ಥನಳ್ಳಿ ಹೆಸರಲ್ಲಿ ಕುಟುಂಬ ಹಾಗೂ ಸಂಬಂಧಿಕರ 15 ಜನರ ಸಮೂಹ ರಚಿಸಿಕೊಂಡು ಮೂರು ಜನರ ಆಸ್ತಿ ಮೇಲೆ 4 ಕೋಟಿ 7 ಲಕ್ಷ ಸಾಲ ವಿತರಿಸಲಾಗಿದೆ.
ರೇಣುಕಾ ತೇಲಿ ಹೆಸರಲ್ಲಿ ಸಮೂಹ ರಚಿಸಿಕೊಂಡು ಅವರ ಕುಟುಂಬದ 3 ಜನರಿಗೆ 1 ಕೋಟಿ ಸಾಲ ವಿತರಣೆ ಮಾಡಲಾಗಿದೆ. ಸಹಕಾರಿ ಸಂಘದ ನಿಯಮಾನುಸಾರ ಒಬ್ಬರಿಗೆ ಕನಿಷ್ಟ 25 ಲಕ್ಷ ಸಾಲ ಮಾತ್ರ ನೀಡಬೇಕು. ಆದರೆ ಪಾರ್ತನಳ್ಳಿ ಮೌಲಾಸಾಬ್ ಅವರಿಗೆ 37 ಲಕ್ಷ 59 ಸಾವಿರ ಸಾಲ ನೀಡಲಾಗಿದೆ. ಸಹಕಾರಿ ಸಂಘದ ನಿಯಮಾನುಸಾರ ಸಮೂಹ ರಚಿಸಿಕೊಂಡು ಸಾಲ ನೀಡಲು ಅವಕಾಶವಿಲ್ಲ. ಆದರೆ ಸಮೂಹ ರಚಿಸಿಕೊಂಡು 10 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಮೂರು ಸಮೂಹದಿಂದ ಇದುವರೆಗೂ ಸಾಲ ವಸೂಲಿ ಮಾಡಿಲ್ಲ. ಕೇವಲ ಬಡ್ಡಿ ಮಾತ್ರ ವಸೂಲಿ ಮಾಡಲಾಗಿದೆ. ಸಂಘದ ಸದಸ್ಯರ ಸಂಖ್ಯೆ 15% ರಷ್ಟು ಮೀರಬಾರದು. ಆದರೆ ಸದಸ್ಯರ ಸಂಖ್ಯೆ 84.54% ಮೀರಿದೆ.
ಒಟ್ಟು 9 ನ್ಯೂನ್ಯತೆ, ನಿಯಮ ಉಲ್ಲಂಘನೆ ಬಹಿರಂಗವಾಗಿದೆ. ಬ್ಯಾಂಕ್ ನಿಯಮ ಉಲ್ಲಂಘನೆ ಹಿನ್ನೆಲೆ ಬ್ಯಾಂಕ್ ಆಡಳಿತ ಮಂಡಲಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಬಾಗಲಕೋಟೆ ಸಹಕಾರಿ ಸಂಘದ ಉಪ ನಿಬಂಧಕರಿಂದ ನೊಟೀಸ್ ಜಾರಿ ಮಾಡಲಾಗಿದೆ. ಬ್ಯಾಂಕ್ ಅಧ್ಯಕ್ಷ ಅಲ್ ಹಾಜಿ ದೊಡ್ಡಮನಿ, ಉಪಾಧ್ಯಕ್ಷ ಹೆಚ್ ಡಿ ಚೌಧರಿ, ಬ್ಯಾಂಕ್ ನಿರ್ದೇಶಕರಾದ ಆಯ್ ಎ ಮಮದಾಪೂರ, ಎ ಆರ್ ಭಾಗವಾನ್.ಎಮ್ ಎಮ್ ಭಾಗವಾನ್, ಅಮೀನಸಾಬ್ ಬೀಳಗಿ, ಗಿಡ್ಡುಸಾಬ್ ಮೇಲಿನಮನಿ, ರಸುಲ್ ಸಾಬ್ ಭಾಗವಾನ್. ಹೆಚ್ ಜಿ ಭಾಗವಾನ್, ಬ್ಯಾಂಕ್ ಮ್ಯಾನೇಜರ್ ಹೆಚ್ ಬಿ ಪಿಂಜಾರ್ ಅವರಿಗೆ ನವೆಂಬರ್ 3ರಂದು ನೋಟಿಸ್ ಜಾರಿ ಮಾಡಲಾಗಿದೆ. ನೋಟಿಸ್ ಮುಟ್ಟಿದ 15 ದಿನದೊಳಗೆ ಲಿಖಿತ ಹೇಳಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಬಹುತೇಕ ಬ್ಯಾಂಕ್ ಆಡಳಿತ ಮಂಡಲಿ ಸುಫರ್ ಸೀಡ್ ಮಾಡುವ ಸಾಧ್ಯತೆ ಇದೆ. ಸಣ್ಣಪುಟ್ಟ ವ್ಯಾಪಾರಿಗಳು,ಕೂಲಿಕಾರ್ಮಿಕರು ಹಣವಿಟ್ಟಿರುವ ಬ್ಯಾಂಕ್ ಇದಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಬಾಗಲಕೋಟೆ ಸಹಕಾರಿ ಇಲಾಖೆ ಉಪನಿಬಂಧಕ ಮಲ್ಲಿಕಾರ್ಜುನ ಪೂಜಾರ, “ಸಹಕಾರಿ ಇಲಾಖೆ ನಿಯಮ ಗಾಳಿಗೆ ತೂರಿ 10 ಕೋಟಿಗೂ ಅಧಿಕ ಆಕ್ರಮ ಸಾಲ ನೀಡಲಾಗಿದೆ. ಸಮೂಹ ರಚಿಸಿಕೊಂಡು ಸಾಲ ಕೊಡಲು ಬರೋದಿಲ್ಲ. ಆದರೆ ಮೂರ ಪ್ರತ್ಯೇಕ ಸಮೂಹ ರಚಿಸಿ ಕುಟುಂಬಸ್ಥರಿಗೆ ಸಾಲ ನೀಡಲಾಗಿದೆ. ಸಹಕಾರಿ ಸಂಘದ ರೂಲ್ಸ್ ಪ್ರಕಾರ ಒಬ್ಬರಿಗೆ ಗರಿಷ್ಟ 25 ಲಕ್ಷ ಸಾಲ ನೀಡಬೇಕು, ಆದರೆ ಇಲ್ಲಿ ಒಬ್ಬ ವ್ಯಕ್ತಿಗೆ 37 ಲಕ್ಷ 59 ಸಾವಿರ ಸಾಲ ನೀಡಲಾಗಿದೆ. ಬಡ್ಡಿಯಲ್ಲಿ ವ್ಯತ್ಯಾಸಗಳಿವೆ. ಕೊಟ್ಟ ಸಾಲಕ್ಕೆ ಬಡ್ಡಿ ಮಾತ್ರ ವಸೂಲಿ ಮಾಡಿದ್ದಾರೆ. ಲೋಕಾಯುಕ್ತರ ನಿರ್ದೇಶನದ ಪ್ರಕಾರ ತನಿಖೆ ನಡೆಸಿದ್ದು ಈ ತರಹ ಆಕ್ರಮ ಕಂಡುಬಂದಿದೆ. ಬ್ಯಾಂಕ್ ಆಡಳಿತ ಮಂಡಳಿಗೆ ನೊಟೀಸ್ ನೀಡಿದ್ದು, ಶೀಘ್ರದಲ್ಲೇ ಈ ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಸಲಾಗುವುದು” ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ