ಮುಂಗಾರು ಮಳೆಗೆ ಸಂಪೂರ್ಣ ನೆಲಕಚ್ಚಿದ ಹೆಸರು ಬೆಳೆ; ಕಣ್ಣೀರಿನಲ್ಲಿ ರೈತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 20, 2024 | 6:42 PM

ಕಳೆದ ಬಾರಿ ಬರದಿಂದ ರೈತರು ಕಂಗೆಟ್ಟಿದ್ದರು. ಬರದಲ್ಲಿ ಬೆಂದ ರೈತರಿಗೆ ಈ ಬಾರಿ ಸುರಿದ ಮುಂಗಾರು ಮಳೆ ತಂಪು ನೀಡಿದೆ. ಬೆಳೆ ಸಮೃದ್ದವಾಗಿ ಬೆಳೆದಿವೆ. ಆದರೆ, ಅದೇ ಮುಂಗಾರು ಅತಿವೃಷ್ಟಿ ಕೆಲ ಕಡೆ ಹೆಸರು ಬೆಳೆಗೆ ಕೆಸರೆರೆಚಿದೆ. ಇದರಿಂದ ರೈತರು ಮರುಬಿತ್ತನೆ ಮಾಡುವಂತಾಗಿದೆ.

ಮುಂಗಾರು ಮಳೆಗೆ ಸಂಪೂರ್ಣ ನೆಲಕಚ್ಚಿದ ಹೆಸರು ಬೆಳೆ; ಕಣ್ಣೀರಿನಲ್ಲಿ ರೈತ
ಬಾದಾಮಿಯಲ್ಲಿ ಮುಂಗಾರು ಮಳೆಗೆ ಸಂಪೂರ್ಣ ನೆಲಕಚ್ಚಿದ ಹೆಸರು ಬೆಳೆ
Follow us on

ಬಾಗಲಕೋಟೆ, ಜೂ.20: ‌ಜಿಲ್ಲೆಯ ಬಾದಾಮಿ (Badami) ತಾಲ್ಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಸುರಿದ ಮಳೆಯಿಂದ ಸಮೃದ್ದವಾಗಿ ಬೆಳೆದಿದ್ದ ಹೆಸರು ಬೆಳೆ(Green Moong Dal), ನೀರು ನಿಂತು ಸಂಪೂರ್ಣ ಹಾಳಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ಬರದಿಂದ ರೈತರು ಹೈರಾಣ ಆಗಿದ್ದರು. ಆದರೆ, ಈ ಬಾರಿ‌‌ ಮುಂಗಾರು ಮಳೆ ಸುರಿದು ರೈತರು ಮುಂಗಾರು ಬಿತ್ತನೆ ಮಾಡಿದ್ದಾರೆ. ಹೆಸರು ಬೆಳೆ ಜಿಲ್ಲೆಯಲ್ಲಿ ಸಮೃದ್ದವಾಗಿ ಬೆಳೆದಿದೆ. ರೈತರು ಖುಷಿ ಖುಷಿಯಾಗಿ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಆದರೆ, ಇದೇ ಮಳೆ‌ ಕೆಲ ರೈತರಿಗೆ ಸಂಕಷ್ಟ ತಂದಿದೆ.

ಅತಿವೃಷ್ಟಿ ಹಿನ್ನೆಲೆ ಬಿತ್ತಿದ ಹೆಸರು ಬೆಳೆಗೆ ನೀರು ಆವರಿಸಿದ್ದರಿಂದ ಕಷ್ಟಪಟ್ಟು ಬೆಳೆದ ಬೆಳೆ ನೀರಲ್ಲೇ ಹೋಮ ಮಾಡಿದಂತಾಗಿದೆ. ಇದರಿಂದ ರೈತರು ಹೆಸರನ್ನು ಮರುಬಿತ್ತನೆ ಮಾಡಿದ್ದಾರೆ. ಇನ್ನು ಕೆಲ ರೈತರು ಹೆಸರು ಸರಿಯಾಗಿ ಹುಟ್ಟದ ಜಾಗದಲ್ಲಿ ಗೋವಿನ ಜೋಳ ಕೂಡ ಬಿತ್ತನೆ ಮಾಡುತ್ತಿದ್ದಾರೆ. ತಗ್ಗು ಪ್ರದೇಶದಲ್ಲಿ ನಿರಂತರವಾಗಿ ನೀರು ನಿಂತ ಪರಿಣಾಮ ‌ತಗ್ಗು ಪ್ರದೇಶದ ಹೊಲದಲ್ಲಿ ಹೆಸರು ಬೆಳೆ ಹೇಳ ಹೆಸರಿಲ್ಲದ ಹಾಗೆ ಅಳಿದು ಹೋಗಿದೆ.

ಇದನ್ನೂ ಓದಿ:ಎಂ.ಕಾಂ ಓದಿ ಕೃಷಿ ಕಾಯಕಕ್ಕೆ ಎಂಟ್ರಿ; ವೀಳ್ಯದೆಲೆ ಬೆಳೆದು ಭರ್ಜರಿ ಲಾಭ ಕಂಡ ಯುವ ರೈತ

ಬಾಗಲಕೋಟೆ ಜಿಲ್ಲೆಯಲ್ಲಿ 2 ಲಕ್ಷ 83 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಪ್ರದೇಶವಿದೆ. ಅದರಲ್ಲಿ ಈ ಬಾರಿ ಮುಂಗಾರು ಅವಧಿಯಲ್ಲಿ ಜಿಲ್ಲಾದ್ಯಂತ 14661 ಹೆಕ್ಟೇರ್ ಹೆಸರು ಬಿತ್ತನೆ ಮಾಡಲಾಗಿದೆ. ಹೆಸರಿಗೆ ‌ಮುಂಗಾರು ಹದ ಮಳೆ ಆದ ಕಾರಣ ಸಮೃದ್ದವಾಗಿ ಬೆಳೆದಿದೆ. ಆದರೆ, ಕೆರಕಲಮಟ್ಟಿ ಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಬಿತ್ತಿದ ಹೆಸರು, ನೀರು ನಿಂತು ಕೆರೆಯಂತೆ ಗೋಚರಿಸುತ್ತಿದೆ. ಆದರೆ, ಇತರೆ ಪ್ರದೇಶದ ಬೆಳೆ ನೋಡಿ ರೈತರು ಸ್ವಲ್ಪ‌ ನೆಮ್ಮದಿಯಿಂದ ಇದ್ದಾರೆ. ಆದರೆ, ಕೆಲವರು ಹೆಸರು ಸರಿಯಾಗಿ ಹುಟ್ಟದ ಕಾರಣ ಮರುಬಿತ್ತನೆ ಮಾಡಿದ್ದಾರೆ.

ಕಳೆದ ಬಾರಿ ಬರದ ಬರೆ ಒಂದು ಕಡೆ, ಇನ್ನೊಂದೆಡೆ ಮರುಬಿತ್ತನೆಗೆ ಗೊಬ್ಬರ ಬೀಜ, ಬಾಡಿಗೆ ನೇಗಿಲು ಎಲ್ಲವೂ ಡಬಲ್ ಡಬಲ್ ಖರ್ಚು. ಒಂದು ಬಾರಿ ಬಿತ್ತನೆ ಮಾಡುವುದಕ್ಕೆ ರೈತರು ಸಾಲ ಮಾಡಿ ಬಿತ್ತನೆ ಮಾಡ್ತಾರೆ. ಆದರೆ, ಇಲ್ಲಿ ‌ಎರಡು ಸಾರಿ ಬಿತ್ತನೆ ಮಾಡುವ ಸ್ಥಿತಿ ರೈತರಿಗೆ ಹೊರೆಯಾಗಿದೆ. ಇನ್ನು ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದರೆ, ರೈತರು ತಗ್ಗು ಪ್ರದೇಶದಲ್ಲಿ ಹೆಸರು ಬೆಳೆಯಬಾರದು ನೆಲವನ್ನು ಸಮತಟ್ಟು ಮಾಡಿ ಬಿತ್ತನೆ‌ ಮಾಡಬೇಕು. ಮುಂಗಾರು ಮಳೆ ಹದವಾಗಿ ಸುರಿದಿದೆ. ಹೆಸರು ಹಾಳಾಗಿದ್ದು, ಕೇವಲ ತಗ್ಗು ಪ್ರದೇಶದಲ್ಲಿ‌ ಮಾತ್ರ. ರೈತರು ಈ ಬಗ್ಗೆ ಅರಿತು ಬಿತ್ತನೆ ಮಾಡಬೇಕು ಎನ್ನುತ್ತಾರೆ. ಮುಂಗಾರು ಮಳೆ ಬಹುತೇಕ ರೈತರಿಗೆ ವರದಾನವಾಗಿದ್ದರೆ, ಕೆಲ ರೈತರಿಗೆ ಸಂಕಷ್ಟ ತಂದೊಡ್ಡಿದ್ದು ಮರುಬಿತ್ತನೆ ಹಾದಿ ಹಿಡಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ