ಬರದ ಛಾಯೆ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ: ಬೆಳೆದ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 22, 2023 | 8:48 PM

Bagalkote News: ಬಾಗಲಕೋಟೆ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಬರದಿಂದ ಕಂಗೆಟ್ಟ ರೈತರಿಗೆ ಒಂದೊಂದೆ‌ ಕಾಟಗಳು ಶುರುವಾಗಿವೆ. ಬರದ ಮಧ್ಯೆ ಬೋರ್ವೆಲ್‌ ಮೂಲಕ ಬೆಳೆದ ಕಬ್ಬು ರೈತರಿಗೆ ಆಸರೆಯಾಗುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಕಬ್ಬಿಗೆ ಕಂಟಕ‌ ಶುರುವಾಗಿದೆ. ಬೋರ್ವೆಲ್‌ ಮೂಲಕ ಬೆಳೆದ‌ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ ಶುರುವಾಗಿದೆ.

ಬರದ ಛಾಯೆ ಮಧ್ಯೆ ರೈತರಿಗೆ ಮತ್ತೊಂದು ಸಂಕಷ್ಟ: ಬೆಳೆದ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ
ಕಬ್ಬು, ಹುರಿಮಲ್ಲಿಗೆ ಕಾಯಿಲೆ
Follow us on

ಬಾಗಲಕೋಟೆ, ಸೆಪ್ಟೆಂಬರ್​ 22: ಆ ಇಡೀ ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದೆ. ಮಳೆಯಿಲ್ಲದೇ ಅನ್ನದಾತ ಕಂಗಾಲಾಗಿದ್ದಾನೆ. ಬರದ ಛಾಯೆ ಮಧ್ಯೆ ರೈತರ (farmers) ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ ಕಾಟ ಶುರುವಾಗಿದೆ. ಆಳೆತ್ತರ ಬೆಳೆದ ಕಬ್ಬು ನಿಂತಲ್ಲೇ ಒಣಗಿ ರೈತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಬರದ ಮಧ್ಯೆ ಕಬ್ಬಿಗೆ ಬಂದ ಕಾಯಿಲೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ. ಬಾಗಲಕೋಟೆ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಬರದಿಂದ ಕಂಗೆಟ್ಟ ರೈತರಿಗೆ ಒಂದೊಂದೆ‌ ಕಾಟಗಳು ಶುರುವಾಗಿವೆ.

ಬರದ ಮಧ್ಯೆ ಬೋರ್ವೆಲ್‌ ಮೂಲಕ ಬೆಳೆದ ಕಬ್ಬು ರೈತರಿಗೆ ಆಸರೆಯಾಗುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಕಬ್ಬಿಗೆ ಕಂಟಕ‌ ಶುರುವಾಗಿದೆ. ಬೋರ್ವೆಲ್‌ ಮೂಲಕ ಬೆಳೆದ‌ ಕಬ್ಬಿಗೆ ಹುರಿಮಲ್ಲಿಗೆ ಕಾಯಿಲೆ ಶುರುವಾಗಿದೆ. ಇದರಿಂದ ಕಬ್ಬಿನ ರವದಿ ಎಲ್ಲವೂ ಒಣಗಿ ಬೇರು ಸಮೇತ ಕೊಳೆಯುತ್ತಿದೆ. ಬೆಳವಣಿಗೆ ಕುಂಠಿತವಾಗಿ ಹೆಚ್ಚಿನ ಗಣಿಕೆ ಹಿಡಿಯದೆ ಕಬ್ಬು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಸ್ಥಳಕ್ಕೆ‌ ಬಂದು ಅಧಿಕಾರಿಗಳು ವೀಕ್ಷಣೆ ಮಾಡುತ್ತಿಲ್ಲ. ಈ ಕಸ ಕಾಯಿಲೆಗೆ ಔಷಧಿ ಪರಿಹಾರ ಮಾರ್ಗ ‌ಹೇಳುತ್ತಿಲ್ಲ , ಮೊದಲೇ ಬರದಿಂದ ರೈತರು ನೊಂದಿದ್ದೇವೆ. ಕಬ್ಬು ಆಸರೆಯಾಗುತ್ತದೆ ಎಂದರೆ ಕಾಯಿಲೆ‌ ಕಾಟ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹೂವು ಬೆಳೆಗಾರಿಗೂ ತಟ್ಟಿದ ಬರದ ಬಿಸಿ: ಮಳೆ ಇಲ್ಲದೇ ಇಳುವರಿ ಕಡಿಮೆ, ರೋಗಕ್ಕೆ ತುತ್ತಾದ ಚೆಂಡು ಹೂವು

ಜಿಲ್ಲೆಯಲ್ಲಿ 1,20,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. 25% ಪ್ರದೇಶದ ಕಬ್ಬಿಗೆ ಈ ಕಾಯಿಲೆ ಕಾಟ ಶುರುವಾಗಿದೆ. ಇದು ಕೇವಲ ಇದೊಂದೆ ಗ್ರಾಮವಲ್ಲ, ಜಿಲ್ಲೆಯ ಬಹುತೇಕ ರೈತರ ಕಬ್ಬು ಇದೇ ಸ್ಥಿತಿ ಎದುರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಳೆ‌ ಕೊರತೆ. ಮಳೆ ಕಡಿಮೆಯಾದಂತೆಲ್ಲ ಹುರಿಮಲ್ಲಿಗೆ ಕಸ ಹೆಚ್ಚು ಬೆಳೆಯುತ್ತದೆ. ಈ ಕಸ ಪರಾವಲಂಭಿ ಕಸ ಆಗಿರೋದರಿಂದ ಕಬ್ಬಿನ ಬೇರಿನ ಮೇಲೆ ಇದು ಬೆಳೆಯುತ್ತದೆ.

ಕಬ್ಬಿನ ಬೇರಿನ ಮೇಲೆ ಬೆಳೆಯೋದರಿಂದ‌ ಕಬ್ಬಿನ ಎಲ್ಲ ಶಕ್ತಿ ಹೀರಿಕೊಂಡು ಬೆಳೆಯುತ್ತದೆ. ಇದರಿಂದ ಕಬ್ಬಿನ‌ ರವದಿ ಶಕ್ತಿಯಿಲ್ಲದೆ ಒಣಗಿ ಕಬ್ಬು ಹಾಳಾಗುತ್ತದೆ. ಈ ಕಸ ಹತೋಟಿ ಮಾಡಬೇಕಂದರೆ ನಾಟಿ ‌ಮಾಡುವಾಗ ಮೈಕೊರಾಜ ಜೈವಿಕ ಗೊಬ್ಬರ ಬಳಸಿ ನಾಟಿ ಮಾಡಬೇಕು. ಮೂರು ವರ್ಷ ಕಬ್ಬು ಬೆಳೆದ‌ ಮೇಲೆ ಬೆಳೆ ಬದಲಾವಣೆ ಮಾಡಬೇಕು. ಪರ್ಯಾಯ ಬೆಳೆ ಬೆಳೆಯಬೇಕು ಅದರಲ್ಲೂ ಹತ್ತಿ ಬೆಳೆಯುವ ಮೂಲಕ ಇದನ್ನು ನಿಯಂತ್ರಣ ಮಾಡಬಹುದು.

ಇದನ್ನೂ ಓದಿ: ಬರಗಾಲದಿಂದ ಕಂಗೆಟ್ಟ ರೈತರಿಗೆ ಕಾಡು ಹಂದಿ ಹಾವಳಿ: ಗೋವಿನಜೋಳ ನಾಶ, ಅರಣ್ಯ ಇಲಾಖೆಗೆ ಮನವಿ

ಹತ್ತಿ ಬೇರು ಈ ಕಸ ಬೆಳೆಯೋದಕ್ಕೆ ಅವಕಾಶ ಕೊಡೋದಿಲ್ಲ. ಈ ಕಸದ ಬೀಜ ಇಪ್ಪತ್ತು ವರ್ಷ ಬೀಜ ಇರುತ್ತದೆ. ಆದ್ದರಿಂದ ಇದಕ್ಕೆ ಒಂದೇ ಪರಿಹಾರ ಅಂದರೆ ಪರ್ಯಾಯ ಬೆಳೆ. ಆದಷ್ಟು ಪರ್ಯಾಯ ಬೆಳೆಯನ್ನು ಬೆಳೆಯುವ ಮೂಲಕ ರೈತರು ಇದರ ನಿಯಂತ್ರಣ ಮಾಡಬಹುದು.

ರೈತರು ಸ್ಥಳಕ್ಕೆ ಕೃಷಿ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಾವು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಇತರೆ ಸಿಬ್ಬಂದಿ ಕಳಿಸಿ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಅಂತಿದ್ದಾರೆ. ಬರದಿಂದ ಕಂಗೆಟ್ಟ ರೈತರಿಗೆ ಕಬ್ಬಿಗೆ ಬಂದ ಹುರಿಮಲ್ಲಿಗೆ ಕಸ ಕಾಯಿಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.