ಬಾಗಲಕೋಟೆ, ಸೆಪ್ಟೆಂಬರ್ 20: ಈಗ ಎಲ್ಲ ಕಡೆ ಬರದ ಛಾಯೆ. ಅದರಲ್ಲೂ ಆ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಸರಕಾರ ಘೋಷಣೆ ಮಾಡಿದೆ. ನೀರಿಲ್ಲದೆ ಅಂತರ್ಜಲ ಕುಸಿದಿದೆ. ಭೂಮಿ ಬರಡು ಭೂಮಿಯಾಗಿವೆ. ಇಂತ ಸ್ಥಿತಿಯಲ್ಲಿಯೇ ಕೆಲ ರೈತರು (farmers) ಅಲ್ಪ ಸ್ವಲ್ಪ ಬೆಳೆ ಬೆಳೆದಿದ್ದಾರೆ. ಆ ಬೆಳೆಗೆ ಈಗ ಕಾಡು ಹಂದಿಗಳ ಕಾಟ ಶುರುವಾಗಿದೆ. ಬರದಿಂದ ಕಂಗೆಟ್ಟ ರೈತರಿಗೆ ವರಾಹ ಕೂಡ ಶನಿಯಾಗಿ ಕಾಡುತ್ತಿದ್ದಾನೆ. ರಾತ್ರಿಯಿಡೀ ಹಂದಿ ಕಾಯುವುದೆ ಕೆಲಸವಾಗಿದ್ದು, ಇದರಿಂದ ತಪ್ಪಿಸಿ ಎಂದು ರೈತರು ಮನವಿ ಮಾಡುತ್ತಿದ್ದಾರೆ.
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಗ್ರಾಮದ ವ್ಯಾಪ್ತಿಯಲ್ಲಿ ಇದೀಗ ಎಲ್ಲ ಕಡೆ ಬರ ನರ್ತನ ಶುರುವಾಗಿದೆ. ಮಳೆಯಿಲ್ಲದೆ, ಬೆಳೆಯಿಲ್ಲದೆ ಭೂಮಿ ಬರಡಾಗಿ ರೈತರು ಕಂಗಾಲಾಗಿದ್ದಾರೆ. ಆದರೆ ಇದೇ ಬೆನ್ನಲ್ಲೇ ನೀರಲಕೇರಿ ಗ್ರಾಮದ ರೈತರಿಗೆ ಕಾಡು ಹಂದಿಗಳ ಕಾಟ ಶುರುವಾಗಿದೆ. ಊರ ಸುತ್ತ ಇರುವ ಗುಡ್ಡದಿಂದ ರಾತ್ರಿ ಹಿಂಡು ಹಿಂಡಾಗಿ ಕಾಡು ಹಂದಿಗಳು ಹೊಲಕ್ಕೆ ದಾಳಿ ಮಾಡುತ್ತಿವೆ. ಗೋವಿನ ಜೋಳಕ್ಕೆ ನುಗ್ಗಿ ತಿಂದು ತೇಗುತ್ತಿವೆ. ಜೊತೆಗೆ ಗೋವಿನಜೋಳ ನೆಲಕ್ಕುರುಳಿ ಕೂಡ ಹಾಳಾಗುತ್ತಿದೆ. ಬರದ ಮಧ್ಯೆ ಅಲ್ಲೋ ಇಲ್ಲೋ ಅಲ್ಪ ಸ್ವಲ್ಪ ಬರುತ್ತಿರುವ ಬೋರ್ವೆಲ್ ನೀರಿನಿಂದ ಬೆಳೆದ ಗೋವಿನಜೋಳ ಕಾಡು ಹಂದಿ ಪಾಲಾಗುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಡಿಸಿಎಂ ಸ್ಥಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ; ಹೇಳಿದ್ದಿಷ್ಟು
ನೀರಲಕೇರಿ ಗ್ರಾಮದಲ್ಲಿ ಬೆಳೆದ ಮೆಣಸಿನ ಬೆಳೆ, ಸಜ್ಜೆ ಎಲ್ಲವೂ ಮಳೆಯಿಲ್ಲದೆ ಹಾಳಾಗಿದೆ. ಗೋವಿನಜೋಳ ಕೆಲವೊಂದು ಕಡೆ ಅಲ್ಪ ಸ್ವಲ್ಪ ನೀರು ಬರುವ ಬೋರ್ವೆಲ್ ಮೂಲಕ ಬೆಳೆಯಲಾಗಿದೆ. ಆದರೆ ಅದಕ್ಕೆ ಕಾಡು ಹಂದಿಗಳ ಕಾಟ ಜೋರಾಗಿದ್ದು, ಇಡೀ ರಾತ್ರಿ ರೈತರು ನಿದ್ದೆಯಿಲ್ಲದೆ ಕಾಡು ಹಂದಿ ಕಾಯುತ್ತಿದ್ದಾರೆ. ರೈತರ ಕಾವಲು ಮಧ್ಯೆಯೂ ದಾಳಿ ಮಾಡುವ ಕಾಡುಮಿಕಗಳು ರೈತರ ನೆಮ್ಮದಿ ಕೆಡಿಸಿವೆ. ಕಬ್ಬು ಗೋವಿನಜೋಳ ಎಲ್ಲವನ್ನೂ ಹಾಳು ಮಾಡುತ್ತಿವೆ.
ಇದನ್ನೂ ಓದಿ: ಬಾಗಲಕೋಟೆ: ಹಾಸ್ಟೆಲ್ನಿಂದ ಕಾಣೆಯಾಗಿದ್ದ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಶವ ರೈಲ್ವೆ ಬ್ರಿಡ್ಜ್ ಕೆಳಗೆ ಪತ್ತೆ
ಕಾಡು ಹಂದಿಗಳಿಗೆ ಏನಾದರೂ ತೊಂದರೆ ಮಾಡಿದರೆ ಅರಣ್ಯ ಇಲಾಖೆಯವರು ಕೇಸ್ ಹಾಕ್ತಾರೆ. ಅವರೇ ಖುದ್ದಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ನಮ್ಮ ಹೊಲಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಬೇಕು. ಕಾಡು ಹಂದಿಗಳ ಕಾಟ ತಪ್ಪಿಸಬೇಕು ಅಂತಿದ್ದಾರೆ.
ಬರದ ಮಧ್ಯೆ ರೈತರಿಗೆ ಕಾಡು ಹಂದಿಗಳ ಕಾಟ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:12 pm, Wed, 20 September 23