ಬಾಗಲಕೋಟೆ: ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಪ್ರತಿಭಟನೆ (Farmers Protest) ಮಾಡುತ್ತಿದ್ದು, ಇಂದು (ನ.15) ಮುಧೋಳ (Mudol) ಬಂದ್ಗೆ ಕರೆ ಕೊಟ್ಟಿದ್ದರು. ರೈತರ ಪ್ರತಿಭಟನೆಗೆ ಸರ್ಕಾರ ಮಣಿಯದಿದ್ದಕ್ಕೆ ರೈತರು ನಾಳೆಯೂ (ನ.16) ಮುಧೋಳ ಬಂದ್ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ನ.19ರ ಮಧ್ಯರಾತ್ರಿವರೆಗೂ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ನವೆಂಬರ್ 14ರಂದು ಸರ್ಕಾರ ಪ್ರತಿಭಟನಾಕರರ ಹೋರಾಟಕ್ಕೆ ಮಣಿದು ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಹೀಗಾಗಿ ರಾಜ್ಯ ರೈತ ಸಂಘ ಮುಧೋಳ ಬಂದ್ಗೆ ಕರೆ ಕೊಟ್ಟಿತ್ತು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿಸಿ ಪಾಟೀಲ್ ಇಂದು ಮಧ್ಯಾಹ್ನ ಅಥವಾ ಸಂಜೆಯೊಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೊಂದಿಗೆ ಚರ್ಚಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು. ಆದರೆ ಸಚಿವರಿಂದ ಪ್ರತಿಕ್ರಿಯೆ ಬರದ ಹಿನ್ನೆಲೆ ರೈತರು ಇಂದು ಬೀದಿಗೆ ಇಳಿದಿದ್ದರು.
ಇಂದು ಮುಧೋಳ ನಗರ ಸಂಪೂರ್ಣ ಸ್ಥಬ್ದವಾಗಿದ್ದು, ರೈತರು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ಮಾತನಾಡಿ ಸಂಜೆಯೊಳಗೆ 2900 ಬೆಲೆ ಘೋಷಣೆ ಮಾಡಬೇಕು, ಇಲ್ಲದಿದ್ದರೆ ಪ್ರತಿಭಟನೆ ಉಗ್ರಸ್ವರೂಪಕ್ಕೆ ತಿರುಗುತ್ತದೆ. ನಾವು ಯಾವುದೇ 144 ಸೆಕ್ಷನ್ಗೂ ಅಂಜೋದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ನಾಳೆಯೂ ಮುಧೋಳ ಬಂದ್
ರೈತರು ನಾಳೆಯೂ (ನ.16) ಮುಧೋಳ ಬಂದ್ಗೆ ಕರೆ ನೀಡಿದ್ದಾರೆ. ಈ ವೇಳೆ ತುರ್ತು ವಾಹನಗಳು, ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ. ಶಾಲಾ ಬಸ್, ಹಾಲು ಸರಬರಾಜು ವಾಹನ, ಪತ್ರಿಕೆ ವಾಹನ, ಆಂಬುಲೆನ್ಸ್ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ನಾಳೆ ಎಂದಿನಂತೆ ಸರ್ಕಾರಿ, ಖಾಸಗಿ ಬಸ್ ಸಂಚರಿಸುವಂತಿಲ್ಲ.
ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ, ವಿಜಯಪುರ ಜಿಲ್ಲೆಗಳಿಂದ ಲೋಕಾಪುರ ಮಾರ್ಗವಾಗಿ ಮುಧೋಳ, ಜಮಖಂಡಿ ಕಡೆಗೆ ಹೋಗಿ ಬರುವ ಪ್ರಯಾಣಿಕರಿಗೆ ನಾಳೆಯೂ ಬಂದ್ ಬಿಸಿ ತಟ್ಟಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 pm, Wed, 16 November 22