ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ಇಂದು ಕೂಡ ಮುಂದುವರೆಯಲಿದೆ ಮುಧೋಳ ಬಂದ್, ನ.19ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ

ಉಸ್ತುವಾರಿ ಸಚಿವರ ಭರವಸೆ ಈಡೇರದ ಹಿನ್ನೆಲೆ ಇಂದು ಕೂಡ ಮುಧೋಳ ಬಂದ್ ಮುಂದುವರಿಸಲು ರೈತರು ತೀರ್ಮಾನಿಸಿದ್ದಾರೆ. ಮುಧೋಳ ತಾಲೂಕಿನಲ್ಲಿ ನ.19ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.

ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ಇಂದು ಕೂಡ ಮುಂದುವರೆಯಲಿದೆ ಮುಧೋಳ ಬಂದ್, ನ.19ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ
ಮುಧೋಳ ಬಂದ್
Updated By: ಆಯೇಷಾ ಬಾನು

Updated on: Nov 17, 2022 | 8:56 AM

ಬಾಗಲಕೋಟೆ: ಕಬ್ಬು ಬೆಳೆಗೆ(Sugarcane) ಸೂಕ್ತ ಬೆಲೆ ನಿಗದಿಗೆ ಒತ್ತಾಯಿಸಿ ರೈತರು(Farmers) ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆ ನ.16 ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಬಂದ್ ನಡೆಸಲಾಗಿದ್ದು ಇಂದು ಕೂಡ ಅದು ಮುಂದುವರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆ ಈಡೇರಿಸದ ಹಿನ್ನೆಲೆ ಇಂದು ಕೂಡ ಮುಧೋಳ ಬಂದ್ ಮುಂದುವರಿಸಲು ತೀರ್ಮಾನಿಸಲಾಗಿದೆ. ತುರ್ತು ವಾಹನಗಳು, ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದ್ದು ಮುಧೋಳ ತಾಲೂಕಿನಲ್ಲಿ ಸಾರಿಗೆ ಸಂಚಾರದಲ್ಲಿ ಅಡಚಣೆ ಸಾಧ್ಯತೆ ಇದೆ. ಮುಧೋಳ ತಾಲೂಕಿನಲ್ಲಿ ನ.19ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿದೆ.

ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ, ಒಂದು ತಿಂಗಳಿಂದ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಟನ್​​​​ ಕಬ್ಬಿಗೆ ಕನಿಷ್ಟ 2900 ರೂಪಾಯಿ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ರೆ ಕಾರ್ಖಾನೆಗಳು ₹2800 ರೂ ನೀಡುವುದಾಗಿ ಒಪ್ಪಿಕೊಂಡಿವೆ. ಹೀಗಾಗಿ ನ 15ರಂದು ಮುಧೋಳ ನಗರದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ಧರಣಿ ನಡೆಸಲಾಯಿತು. ಕಾರ್ಖಾನೆಗೆ ಮುತ್ತಿಗೆ ಹಾಕಲಾಯಿತು. ಈ ವೇಳೆ ಕಲ್ಲು ತೂರಾಟ, ಕಚೇರಿ, ವಾಹನಗಳ ಧ್ವಂಸವೂ ನಡೆದಿದೆ. ಇದೆಲ್ಲದ್ದರಿಂದ ಎಚ್ಚೆತ್ತಿದ್ದ ಜನಪ್ರತಿನಿಧಿಗಳು ಸಭೆ ನಡೆಸಿದ್ರು. ಸಕ್ಕರೆ ಸಚಿವ ಶಂಕರಪಾಟಿಲ್‌ ಮುನೇನಕೊಪ್ಪ, ಉಸ್ತುವಾರಿ ಸಚಿವ ಸಿಸಿ ಪಾಟಿಲ್, ಸಚಿವ ಗೋವಿಂದ ಕಾರಜೋಳ ಅವರು, ರೈತರು, ಅಧಿಕಾರಿಗಳು, ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜತೆ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ್ರು. ಆದ್ರೆ, ಆ ಸಭೆಯೂ ಫಲಪ್ರದವಾಗಲಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ರೈತ ಸಂಘ ನ.16ರಂದು ಬಾಗಲಕೋಟೆ ಜಿಲ್ಲೆ ಮುಧೋಳ ಟೌನ್​ ಬಂದ್​ಗೆ ಕರೆ ನೀಡದರು. ಅದರಂತೆಯೇ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಬಹುತೇಕ ಬಂದ್ ಆಗಿತ್ತು.

ಆದ್ರೆ ನವೆಂಬರ್ 16ರಂದು ಕೂಡ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಈಡೇರದ ಹಿನ್ನೆಲೆ ಇಂದು ಕೂಡ ಬಂದ್ ಮುಂದುವರೆಯಲಿದೆ. ನಿನ್ನೆಯಂತೆ ಇಂದು ಕೂಡ ಮುಧೋಳ ಟೌನ್ ಬಂದ್ ಆಗಲಿದೆ. ಆದ್ರೆ ಶಾಲಾ ಬಸ್, ಹಾಲು ಸರಬರಾಜು ವಾಹನ, ಪತ್ರಿಕೆ ವಾಹನ, ಆಂಬುಲೆನ್ಸ್ ಓಡಾಟಕ್ಕೆ ಯಾವುದೇ ತೊಂದರೆ ಇರುವುದಿಲ್ಲ.

Published On - 8:18 am, Thu, 17 November 22