ಬಾಗಲಕೋಟೆ: ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಕ್ಕೆ ಯುವಕರಿಂದ ಯುವತಿ ಮೇಲೆ ಹಲ್ಲೆ; ಮೂವರು ಅರೆಸ್ಟ್

| Updated By: ಆಯೇಷಾ ಬಾನು

Updated on: Mar 08, 2024 | 11:52 AM

ಬಾಗಲಕೋಟೆ ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ತನ್ನ ಸ್ನೇಹಿತೆಯರೊಂದಿಗೆ ಬಸ್​ಗಾಗಿ ಕಾದು ನಿಂತಿದ್ದ ಯುವತಿ ಮೇಲೆ ಯುವಕರು ಹಲ್ಲೆ ನಡೆಸಿದ್ದಾರೆ. ಕಾಲೇಜಿಗೆ ಹೋಗಲು ನಿಂತಿದ್ದಾಗ ಮೂವರು ಯುವಕರು ಯುವತಿಯರ ಫೋಟೋ ಕ್ಲಿಕ್ಕಿಸಿ ಮೊಬೈಲ್ ನಂಬರ್ ನೀಡುವಂತೆ ಪೀಡಿಸಿದ್ದಾರೆ. ಈ ವೇಳೆ ಯುವತಿ ನಂಬರ್ ನೀಡಲು ನಿರಾಕರಿಸಿದಕ್ಕೆ ಯುವಕರು ಹಲ್ಲೆ ಮಾಡಿದ್ದು ಯುವತಿ ಆಸ್ಪತ್ರೆ ಸೇರಿದ್ದಾಳೆ. ಹಾಗೂ ಯುವಕರು ಜೈಲು ಸೇರಿದ್ದಾರೆ.

ಬಾಗಲಕೋಟೆ: ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಕ್ಕೆ ಯುವಕರಿಂದ ಯುವತಿ ಮೇಲೆ ಹಲ್ಲೆ; ಮೂವರು ಅರೆಸ್ಟ್
ಮೊಬೈಲ್ ನಂಬರ್ ಕೊಡಲು ನಿರಾಕರಿಸಿದಕ್ಕೆ ಯುವಕರಿಂದ ಯುವತಿ ಮೇಲೆ ಹಲ್ಲೆ
Follow us on

ಬಾಗಲಕೋಟೆ, ಮಾರ್ಚ್​.08: ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು (Student) ಚುಡಾಯಿಸಿ, ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ (Assault) ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯ ರಬಕವಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿನಿ (ಸ್ವಾತಿ ನಡಕಟ್ಟಿ) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಅನ್ವರ್ ಮಕಾಂದಾರ್, ಆಯನ್ ಪಟೇಲ್, ಜಾವೀದ್ ಅಲಿಹ್ಮದ್ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಯುವತಿ ಸ್ವಾತಿ ತನ್ನ ಸ್ನೇಹಿತೆಯರಾದ ಸಾಕ್ಷಿ, ಕವಿತಾ ಜೊತೆ ಕಾಲೇಜಿಗೆ ತೆರಳಲು ಬಸ್​ಗಾಗಿ ಕಾಯುತ್ತಿದ್ದಳು. ಈ ವೇಳೆ ಬಂದ ಯುವಕರು ಯುವತಿಯನ್ನು ಚುಡಾಯಿಸಿದ್ದಾರೆ. ಹಾಗೂ ಹಲ್ಲೆ ಮಾಡಿದ್ದಾರೆ. ಬಸ್​ಗಾಗಿ ಕಾದು ನಿಂತಿದ್ದ ವಿದ್ಯಾರ್ಥಿನಿಯರ ಫೋಟೋ ಕ್ಲಿಕ್ಕಿಸಿ, ಬಳಿಕ ಅವರ ಬಳಿ ತೆರಳಿ ಮೊಬೈಲ್ ನಂಬರ್ ನೀಡುವಂತೆ ಪೀಡಿಸಿದ್ದಾರೆ. ನಂಬರ್ ಕೊಡಲು ನಿರಾಕರಿಸಿದ್ದಕ್ಕೆ ಸ್ವಾತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಘಟನೆ ಸಂಬಂಧ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆ ಪ್ರತಿಭಟನೆ ನಡೆಸಿದೆ. ಸದ್ಯ ಚುಡಾಯಿಸಿದ ಯುವಕರನ್ನು ತೇರದಾಳ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜಲಕ್ಷಾಮ: ನೀರು ದುರ್ಬಳಕೆ ಮಾಡಿದರೆ 5 ಸಾವಿರ ದಂಡ

ಹುಚ್ಚು ನಾಯಿ ದಾಳಿ, 10 ಜನ ಆಸ್ಪತ್ರೆ ಪಾಲು

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ. ನಿನ್ನೆ ಮುಂಜಾನೆಯಿಂದಲೂ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ ನಾಯಿ, ಓರ್ವ ವೃದ್ಧೆ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಇನ್ನು ನಾಯಿ ಹಿಡಿಯುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗ್ತಿಲ್ಲ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

ಧಗಧಗಿಸಿದ ಬಟ್ಟೆ ತುಂಬಿದ್ದ ಲಾರಿ

ಬಟ್ಟೆ ತುಂಬಿದ ಲಾರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ದಾಬಸ್ ಪೇಟೆ ಬಳಿ ಘಟನೆ ನಡೆದಿದೆ. ಸೆನ್ಸಾರ್ ಲಾಕ್ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿದೆ ಅಂತಾ ಹೇಳಲಾಗಿದೆ. ಲಾರಿ ಚಾಲಕನ ಜೊತೆ ಸೇರಿ ಸ್ಥಳೀಯರು ಕೂಡಲೇ ಬೆಂಕಿ ನಂದಿಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ