ಲಕ್ಷಾಂತರ ರೂ ಸಾಲದ ಹೊರೆ, ಕೈಕೊಟ್ಟ ಸರಕಾರಿ ಪಿಂಚಣಿ ಯೋಜನೆ! ಮನ ನೊಂದ ಶಿಕ್ಷಕ ಆತ್ಮಹತ್ಯೆ

|

Updated on: Feb 24, 2023 | 6:43 AM

ಮೃತ ಶಿಕ್ಷಕ ಶಂಕ್ರಪ್ಪ ಎರಡು ಡೆತ್ ನೋಟ್ ಬರೆದಿಟ್ಟಿದ್ದರು ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಆ ಡೆತ್​ ನೋಟ್ ನಲ್ಲಿ ತನ್ನ 27 ಲಕ್ಷ ರೂ ಸಾಲದ ಬಗ್ಗೆ, ಕೌಟುಂಬಿಕ ಸಮಸ್ಯೆ ಬಗ್ಗೆ ಬರೆದಿದ್ದಾರಂತೆ. ಇನ್ನೊಂದರಲ್ಲಿ ಸರಕಾರ ಪಿಂಚಣಿ ಬಗ್ಗೆ ಸ್ಪಂದಿಸುತ್ತಿಲ್ಲ. ಮುಂದೆ ಜೀವನ ನಡೆಸುವುದು ಹೇಗೆ? ಎಂದು ಆತಂಕ ವ್ಯಕ್ತಪಡಿಸಿದ್ದರಂತೆ

ಲಕ್ಷಾಂತರ ರೂ ಸಾಲದ ಹೊರೆ, ಕೈಕೊಟ್ಟ ಸರಕಾರಿ ಪಿಂಚಣಿ ಯೋಜನೆ! ಮನ ನೊಂದ ಶಿಕ್ಷಕ ಆತ್ಮಹತ್ಯೆ
ಕೈಕೊಟ್ಟ ಸರಕಾರಿ ಪಿಂಚಣಿ ಯೋಜನೆ! ಮನ ನೊಂದ ಶಿಕ್ಷಕ ಆತ್ಮಹತ್ಯೆ
Follow us on

ಆತ ಅನುದಾನಿತ ಪ್ರೌಢ ಶಾಲಾ ಶಿಕ್ಷಕ. ಪಿಂಚಣಿ ಯೋಜನೆ (National Pension System -NPS) ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಡೆಯ ವಿರುದ್ಧ ತೀವ್ರ ಬೇಸರಗೊಂಡಿದ್ದ. ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಶಿಕ್ಷಕರು ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ. ಆದರೆ ಈ ಮಧ್ಯೆ, ಮರಳಿ ಮನೆಗೆ ಬರುವುದರ ಬದಲು ಆತ್ಮಹತ್ಯೆಯ ದಾರಿ ಹಿಡಿದ. ಪಿಂಚಣಿ ಯೋಜನೆ ಮರು ಜಾರಿ ಹೋರಾಟಕ್ಕೆ ಸರಕಾರ ಸ್ಪಂದಿಸಲಿಲ್ಲ, ಇದೇ ಕಾರಣಕ್ಕೆ ಆ ಶಿಕ್ಷಕ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಈ ಮಧ್ಯೆ, ರಾಜ್ಯ ರಾಜಧಾನಿಯಲ್ಲೇ (Bangalore) ಶಿಕ್ಷಕ (Bagalkot Teacher) ಸಾವನ್ನಪ್ಪಿದ್ರೂ ಯಾರಿಗೂ ಗೊತ್ತಾಗದಂತೆ ಶವಪರೀಕ್ಷೆ ಕಾರ್ಯವನ್ನು ಮುಗಿಸಿ, ಪೊಲೀಸರು ಕೈತೊಳೆದುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ರೇಲ್ವೆ ಪೊಲೀಸರ ವರ್ತನೆ ವಿರುದ್ಧ ಮೃತ ಶಿಕ್ಷಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬಸ್ಥರಿಲ್ಲದೇ ಶವಪರೀಕ್ಷೆ ಮಾಡಿ ಮುಗಿಸಿಬಿಟ್ಟಿದ್ದಾರೆಂದು ಆರೋಪಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಶಿಕ್ಷಕ ಬೆಂಗಳೂರಲ್ಲಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇದು. ಶಿಕ್ಷಕನ ಸಾವು ಕಂಡು ಕಣ್ಣೀರಾದ ಕುಟುಂಬಸ್ಥರು. ಮುಗಿಲು ಮುಟ್ಟಿದ ಮೃತ ಶಿಕ್ಷಕನ ಪತ್ನಿಯ ಆಕ್ರಂದನ. ಮೃತ ಶಿಕ್ಷಕನ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ತಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ , ನ್ಯಾಯಕ್ಕಾಗಿ ಮನವಿ. ಮೃತ ಶಿಕ್ಷಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲ್.

ಅಂದಹಾಗೆ ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬಾಗಲಕೋಟೆ ಜಿಲ್ಲಾಡಳಿತ ಭವನದ ಆವರಣ. ಮೇಲಿನ ಫೋಟೊದಲ್ಲಿರುವ ವ್ಯಕ್ತಿಯ ಹೆಸರು ಶಂಕ್ರಪ್ಪ ಬೋರಡ್ಡಿ. ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಿವಾಸಿ. 43 ವರ್ಷದ ಶಂಕ್ರಪ್ಪ ಅವರು ರಾಯಚೂರು ಜಿಲ್ಲೆಯ ಸಿಂಧನೂರು ಭಾಗದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸ್ತಿದ್ರು.

ಆದರೆ ಶಿಕ್ಷಕ ಶಂಕ್ರಪ್ಪ ಅವರು ಬುಧವಾರ ಮಧ್ಯಾಹ್ನ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಶಿಕ್ಷಕ ಶಂಕ್ರಪ್ಪ ಕಳೆದ ಮಂಗಳವಾರ, ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಅನುದಾನಿತ ಶಾಲಾ ಶಿಕ್ಷಕರು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು‌. ಮರಳಿ ಮನೆಗೆ ಬರುವ ಬದಲು ರೈಲು ಹಳಿಗೆ ಬಿದ್ದು ಜೀವ ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಬೆಂಗಳೂರಿಗೆ ತಲುಪುವುದರ ಒಳಗಾಗಿ ಮೆಜೆಸ್ಟಿಕ್ ರೈಲ್ವೆ ಪೊಲೀಸರು ಶವ ಪರೀಕ್ಷೆ ಕಾರ್ಯ ಮಾಡಿ ಮುಗಿಸಿಬಿಟ್ಟಿದ್ದಾರಂತೆ.

ಪೊಲೀಸರ ಈ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮೃತ ಶಿಕ್ಷಕನ ಕುಟುಂಬಸ್ಥರು, ಕುಟುಂಬ ಸದಸ್ಯರಿಲ್ಲದೇ ಶವ ಪರೀಕ್ಷೆ ಯಾಕೆ ಮಾಡಿದ್ದೀರಿ ಎಂದು ಪೊಲೀಸರ ಜೊತೆ ವಾಗ್ವಾದ ಮಾಡಿ ಅಂಬುಲೆನ್ಸ್ ವಾಹನದಲ್ಲಿ ಮೃತ ಶಂಕ್ರಪ್ಪ ಅವ್ರ ಶವ ತಂದು, ಬಾಗಲಕೋಟೆ ಜಿಲ್ಲಾಡಳಿತ ಆವರಣದಲ್ಲಿಡಲು ಮುಂದಾಗಿದ್ರು.

ನಂತರ ಬಾಗಲಕೋಟೆ ಪೊಲೀಸರ ಮನವೊಲಿಕೆಯಿಂದ ಮೃತ ಶಿಕ್ಷಕರ ಸಂಬಂಧಿಕರು, ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಶವ ತಗೆದುಕೊಂಡು ಹೋದ್ರು. ಪಿಂಚಣಿ ಯೋಜನೆ ಬಗ್ಗೆ ಸರಕಾರದ ನಿರ್ಲಕ್ಷ್ಯದಿಂದ ಬೇಸತ್ತು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎಂದು ಮೃತ ಶಿಕ್ಷಕನ ಪತ್ನಿ ಲಕ್ಷ್ಮೀ ಬೋರಡ್ಡಿ ಮತ್ತು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇನ್ನ ಮೃತ ಶಿಕ್ಷಕ ಶಂಕ್ರಪ್ಪ ಅವರು ಸಾವಿಗೂ ಮುಂಚೆ ಎರಡು ಡೆತ್ ನೋಟ್ ಬರೆದಿಟ್ಟಿದ್ದರು ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಆ ಡೆತ್​ ನೋಟ್ ನಲ್ಲಿ ತನ್ನ 27 ಲಕ್ಷ ರೂಪಾಯಿ ಸಾಲದ ಬಗ್ಗೆ ಕೌಟುಂಬಿಕ ಸಮಸ್ಯೆ ಬಗ್ಗೆ ಬರೆದಿದ್ದಾರಂತೆ. ಇನ್ನೊಂದರಲ್ಲಿ ಮೈ ತುಂಬಾ ಸಾಲ ಆಗಿದೆ, ಸರಕಾರ ಪಿಂಚಣಿ ಬಗ್ಗೆ ಸ್ಪಂದಿಸುತ್ತಿಲ್ಲ. ಮುಂದೆ ಜೀವನ ನಡೆಸುವುದು ಹೇಗೆ? ನನಗಾದ ಸ್ಥಿತಿ ಬೇರೆ ಯಾವ ಶಿಕ್ಷಕನಿಗೂ ಬರಬಾರದು ಎಂದೆಲ್ಲಾ ಬರೆದಿದ್ದಾರಂತೆ. ಶಿಕ್ಷಕ ಶಂಕ್ರಪ್ಪನ ಈ ಡೆತ್​​ ನೋಟ್ ಅನ್ನು ಓದಿರುವ ಕುಟುಂಬಸ್ಥರು ಹೀಗೆ ಹೇಳುತ್ತಿದ್ದಾರೆ.

ಆದರೆ ಡೆತ್​ ನೋಟ್ ಮಾತ್ರ ಬೆಂಗಳೂರು ಮೆಜೆಸ್ಟಿಕ್ ರೇಲ್ವೆ ಪೊಲೀಸರು ಇವರ ಕೈಗೆ ಕೊಟ್ಟಿಲ್ಲ. ಇದು ಸರಕಾರಕ್ಕೆ ಮುಜುಗರವಾಗುತ್ತೆ ಅಂತ ಶವವನ್ನು ಬೆಂಗಳೂರಿಂದ ತರಾತುರಿಯಲ್ಲಿ ಸಾಗಿಸಿದ್ದಾರಂತೆ. ಮೃತ ಶಿಕ್ಷಕ ಶಂಕ್ರಪ್ಪ ಅವರ ಶವ ಬಾಗಲಕೋಟೆ ಡಿಸಿ ಕಚೇರಿಗೆ ಆಗಮಿಸುತ್ತಿದ್ದಂತೆ, ಸ್ಥಳಕ್ಕಾಗಮಿಸಿದ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್ ಪಾಟಿಲ್, ಮೃತ ಶಿಕ್ಷಕನ ಸಂಬಂಧಿಗಳಿಗೆ ಸಾಂತ್ವನ ಹೇಳಿದ್ರು.

ಮೃತ ಶಂಕ್ರಪ್ಪನ ಕಟುಂಬಕ್ಕೆ ಸರ್ಕಾರ ಯೋಗ್ಯ ಪರಿಹಾರ ನೀಡಬೇಕು. ಅಲ್ಲದೇ ಮೃತ ಶಿಕ್ಷಕನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಅವರು ಆಗ್ರಹಿಸಿದ್ರು. ಬೆಂಗಳೂರಿನಲ್ಲಿ 140 ದಿನಗಳಿಂದ ಧರಣಿ ಕೂತಿರುವ ಅನುದಾನಿತ ಶಾಲಾ ಶಿಕ್ಷಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ರಾಷ್ಟ್ರ ನಿರ್ಮಾಣ ಮಾಡುವ ಶಿಕ್ಷಕರ ಬಗ್ಗೆ ಕಾಳಜಿ ವಹಿಸಿ ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಪರಿಷತ್ ಮಾಜಿ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅವರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಒಬ್ಬ ಶಿಕ್ಷಕ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಮೃತ ಶಿಕ್ಷಕನ ಕುಟುಂಬಸ್ಥರಿಗೆ ತಿಳಿಯದಂತೆ ಎಲ್ಲ ಕಾರ್ಯ ಮಾಡಿ ಮುಗಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ಮೃತ ಶಿಕ್ಷಕನ ಸಾವಿನ ಸತ್ಯಾಸತ್ಯತೆ ಬಯಲಿಗೆ ಬರಬೇಕಿದೆ.

ವರದಿ: ರವೀ ಮೂಕಿ, ಟಿವಿ9, ಬಾಗಲಕೋಟೆ