ಬಾಗಲಕೋಟೆ, ಫೆಬ್ರವರಿ 24: ವೃದ್ಧನ ಶವ ಸಾಗಿಸಲು ಡೋಲಿ (ಶವ ಸಾಗಿಸುವ ಪೆಟ್ಟಿಗೆ) ಮತ್ತು ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಮೃತ ಪುತ್ರನ ಮೇಲೆ ಹಲ್ಲೆ (attack) ಮಾಡಿರುವಂತಹ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿಯಲ್ಲಿ ನಡೆದಿದೆ. ಹುಸೇನಸಾಬ್ ಹುದ್ದಾರ (90) ವಯೋಸಹಜ ಸಾವನ್ನಪ್ಪಿರುವ ವೃದ್ದ. ಶವ ಸಾಗಿಸಲು ಡೋಲಿ ಕೇಳಲು ಮಸೀದಿಗೆ ಪುತ್ರ ವಜೀರ್ ಹೋಗಿದ್ದಾರೆ. ಡೋಲಿ ಕೊಡಲ್ಲ, ಶವಸಂಸ್ಕಾರಕ್ಕೆ ಜಾಗಕೊಡಲ್ಲವೆಂದು ಮುಖಂಡರು ಹೇಳಿದ್ದಾರೆ. ಸಮುದಾಯದ ಯಾವುದೇ ಧಾರ್ಮಿಕ ಕಾರ್ಯಕ್ಕೆ ನೀವು ಬರುವುದಿಲ್ಲ. ನಿಮಗ್ಯಾಕೆ ಡೋಲಿ, ಸ್ಮಶಾನದಲ್ಲಿ ಜಾಗ ಕೊಡಬೇಕೆಂದು ನಿರಾಕರಣೆ ಮಾಡಿದ್ದಾರೆ.
ಈ ವೇಳೆ ವೃದ್ಧನ ಪುತ್ರ ವಜೀರ್ನನ್ನು ವಿರೋಧಿ ಬಣದ ಮುಸ್ಲಿಮರು ಥಳಿಸಿದ್ದಾರೆ. ಮಹಾಲಿಂಗಪುರದ ಖಾಸಗಿ ಮದರಸಾದ ಮ್ಯಾನೇಜರ್ ನಜೀರ್ ಮೇಲೆ ಲಾಲಾಭಕ್ಷಿ ತೇರದಾಳ ಮತ್ತಿತರರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಹುಸೇನ್ ಕುಟುಂಬಸ್ಥರು ಮನೆಯಲ್ಲೇ ಶವವಿಟ್ಟುಕೊಂಡು ಕೂತಿದ್ದಾರೆ. ಇಷ್ಟೆಲ್ಲಾ ಗಲಾಟೆಯಾದರೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ.
ಇದನ್ನೂ ಓದಿ: ಮಸೀದಿಯಲ್ಲಿ ಮಹಿಳೆ ನಮಾಜ್ ಮಾಡಿದ್ದ ಆರೋಪ: ಇಡೀ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ
ಬರಿ ಕೆಲಸಕ್ಕೆ ಹೋದರೆ ಸಾಲದು ಸಮುದಾಯದ ಕಾರ್ಯದಲ್ಲೂ ಸಕ್ರೀಯರಾಗಿರಬೇಕೆಂದು ಹಿರಿಯರು ವಾದ ಮಾಡಿದ್ದಾರೆ. ನಾನು ಮುಖ್ಯವಾದ ಯಾವುದೇ ಧಾರ್ಮಿಕ ಕಾರ್ಯ ಇದ್ದಾಗ ಹಾಜರಾಗಿದ್ದೇನೆ ಎಂದು ವಜೀರ್ ಕೂಡ ವಾದ ಮಾಡಿದ್ದಾರೆ.
ಟಿವಿ9 ವರದಿ ಫಲಶೃತಿ ಹಿನ್ನೆಲೆ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿದ್ದಾರೆ. ಟಿವಿ9 ವರದಿ ಗಮನಿಸಿದ ಬಾಗಲಕೋಟೆ ಎಸ್ಪಿ ಅಮರನಾಥರೆಡ್ಡಿ ಕೂಡಲೇ ಮುಧೋಳ ಪೊಲೀಸರಿಗೆ ಸ್ಥಳಕ್ಕೆ ತೆರಳಲು ಸೂಚನೆ ನೀಡಿದ್ದಾರೆ. ಸೂಚನೆ ಮೇರೆಗೆ ರನ್ನಬೆಳಗಲಿ ಗ್ರಾಮಕ್ಕೆ ತೆರಳಿದ ಮುಧೋಳ ಪೊಲೀಸರು ಮುಸ್ಲಿಂ ಹಿರಿಯರ ಜೊತೆ ಮಾತನಾಡಿದ್ದು, ಮನವೊಲಿಕೆ ಜೊತೆಗೆ ಅಡ್ಡಿಪಡಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದಯಾಮರಣಕ್ಕಾಗಿ ಪೊಲೀಸರ ಪತ್ರ: ಪ್ರಚಾರಕ್ಕಾಗಿ ಮಾಡಿರಬೇಕು, ನಗಬೇಕು ಅಷ್ಟೇ; ಹೆಚ್ಕೆ ಪಾಟೀಲ್
ಸದ್ಯ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಹಿರಿಯರು ಒಪ್ಪಿಗೆ ಕೊಟ್ಟಿದ್ದಾರೆ. ಮೃತನ ಮನೆ ಹಾಗೂ ಸ್ಮಶಾನದ ಕಡೆ ಮುಧೋಳ ಪೊಲೀಸರು ಭದ್ರತೆ ನೀಡಿದ್ದಾರೆ. ಈ ಮೊದಲು ಡೋಲಿ ಕೊಡದ ಹಿನ್ನೆಲೆ ಮಹಾಲಿಂಗಪುರ ಪಟ್ಟಣಕ್ಕೆ ಹೋಗಿ ಡೋಲಿ ತರಲಾಗಿತ್ತು. ಊರ ಡೋಲಿ ಕೇಳದೆ ಪರಸ್ಥಳದಿಂದ ತಂದ ಡೋಲಿಯಲ್ಲೇ ಶವ ಸಾಗಿಸಲು ಸಿದ್ದತೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:04 pm, Sat, 24 February 24