ದಯಾಮರಣಕ್ಕಾಗಿ ಪೊಲೀಸರ ಪತ್ರ: ಪ್ರಚಾರಕ್ಕಾಗಿ ಮಾಡಿರಬೇಕು, ನಗಬೇಕು ಅಷ್ಟೇ; ಹೆಚ್ಕೆ ಪಾಟೀಲ್
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸುಮಾರು ಮೂರು ವರ್ಷಗಳಿಂದ ಪತಿ-ಪತ್ನಿ ಯಾವುದೆ ಅಂತರ್ ಜಿಲ್ಲಾ ವರ್ಗಾವಣೆಯಾಗಿಲ್ಲ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೊಲೀಸ್ ಸಿಬ್ಬಂದಿ ದಯಾಮರಣ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಹೆಚ್ಕೆ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಬಾಗಲಕೋಟೆ, ಫೆಬ್ರವರಿ 24: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಪೊಲೀಸ್ (Karnataka Police) ಸಿಬ್ಬಂದಿ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ಯಾರಾದರೂ ಹೀಗೆ ಮಾಡಿರಬಹುದು. ದಯಾಮರಣ (Euthanasia) ಅಂದರೆ ನಗಬೇಕು ಅಷ್ಟೆ ಎಂದು ಕಾನೂನು ಸಚಿವ ಹೆಚ್ಕೆ ಪಾಟೀಲ್ (HK Patil) ಹೇಳಿದರು. ಬದಾಮಿ (Badami) ತಾಲೂಕು ಹೂಲಗೇರಿ ಗ್ರಾಮದಲ್ಲಿ ಇಂದು (ಫೆ.24) ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಮಹಾಯೋಗಿ ವೇಮನ ಮತ್ತು ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾನೆ ಕಾರ್ಯಮದಲ್ಲಿ ಭಾಗಿಯಾಗಿ, ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೇಕೆ ಪತ್ರ ಬರಿಬೇಕು? ಗೃಹ ಸಚಿವರ ಬಳಿ ಹೋಗಿದ್ದರೆ, ವರ್ಗಾವಣೆ ಕೆಲಸ ಆಗುತ್ತಿತ್ತು. ಇನ್ನು ಈ ಬಗ್ಗೆ ಅಧಿವೇಶನದಲ್ಲೂ ಯಾರು ಪ್ರಸ್ತಾಪ ಮಾಡಿಲ್ಲ ಎಂದರು.
ಅಭ್ಯರ್ಥಿಗಳ ಪಟ್ಟಿ 10 ದಿನದಲ್ಲಿ ಬಹಿರಂಗ
ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಇನ್ನೂ 10-15 ದಿನದೊಳಗಾಗಿ ಪಟ್ಟಿ ಹೊರ ಬೀಳುತ್ತದೆ ಎಂದು ತಿಳಿಸಿದರು.
ಧಾರ್ಮಿಕ ದತ್ತಿ ಕಾಯ್ದೆ ತಿದ್ದುಪಡಿ ವಿಧಾನ ಪರಿಷತ್ನಲ್ಲಿ ತಿರಸ್ಕೃತವಾದ ವಿಚಾರವಾಗಿ ಮಾತನಾಡಿದ ಅವರು, ಆ ವಿಧೇಯಕ ಹಿಂದೂ ದೇವಸ್ಥಾನಗಳಿಗೆ ಮಾರಕವಾಗಿಲ್ಲ. ಇದ್ದ ಕಾನೂನನ್ನೇ ತಿದ್ದುಪಡಿ ಮಾಡುತ್ತಿದ್ದೇವೆ. ಏನು ತಿದ್ದುಪಡಿ ಮಾಡಿದ್ದೇವೆ ಅಂತ ಮುಜರಾಯಿ ಸಚಿವರು ಹೇಳುತ್ತಾರೆ. ಆದರೆ ಬಿಜೆಪಿಯವರು ಕಾನೂನನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಅನವಶ್ಯಕವಾಗಿ ಅಪಪ್ರಚಾರ ಮಾಡಲು ಈ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಒಂದು ನಯಾಪೈಸೆ ಹುಂಡಿ ಹಣವನ್ನು ಸರಕಾರ ಬಳಸಲ್ಲ
ಕಾಂಗ್ರೆಸ್ನವರು ದೇವರ ಹುಂಡಿಗೆ ಕೈ ಹಾಕಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೇವರ ಹುಂಡಿಗೆ ನಾವು ಕೈ ಹಾಕಿಲ್ಲ. ನಾವೇನು ಇಟ್ಟಿಗೆ ಕೊಟ್ಟು ದುಡ್ಡು ಕೇಳುವುದಿಲ್ಲ. ಹುಂಡಿ ದುಡ್ಡನ್ನು ಸರಕಾರ ತೆಗೆದುಕೊಳ್ಳುತ್ತಾ? ಒಂದು ನಯಾಪೈಸೆ ಹುಂಡಿ ಹಣವನ್ನು ಸರಕಾರ ಪಡೆಯುವುದಿಲ್ಲ. ಸರಕಾರಕ್ಕೆ ಆ ಹಣದ ಮೇಲೆ ಅಪೇಕ್ಷೆ ಇಲ್ಲ. ಹುಂಡಿ ದುಡ್ಡು ಸರಕಾರದ ಯಾವ ಖಾತೆಗೂ ಜಮಾ ಆಗುವುದಿಲ್ಲ. ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದರ ಅರ್ಥ ಏನು ಅಂತ ವಿಜಯೇಂದ್ರ ಅವರಿಗೆ ಹೇಳಬೇಕಾ? ಅಥವಾ ಪೂಜಾರಿ ಅವರಿಗೆ ಹೇಳಬೇಕಾ? ಅಥವಾ ಅಶೋಕ ಅವರಿಗೆ ಹೇಳಬೇಕಾ? ಯಾಕೆ ದೇವರ ಹೆಸರಿನಲ್ಲಿ ಅನವಶ್ಯಕ ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಯಾಮರಣ ಕೋರಿ ರಾಷ್ಟ್ರಪತಿ ಮತ್ತು ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ
ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಿದ್ದರಾಮಯ್ಯ ಸರ್ಕಾರದಲ್ಲಿ ಹಣವಿಲ್ಲ ಎಂಬ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಗೆ ಸಂಬಂಧಿಸಿದಂತೆ ಯಾವ ಶಾಸಕರು ಸಂಬಳವಿಲ್ಲದೆ ಇದ್ದಾರೆ ಹೇಳಿ?ಮಾಜಿ ಶಾಸಕರು ಪಿಂಚಣಿ ಪಡೆಯುದ್ದಾರೆ. ಇನ್ನು ಸಿದ್ರಾಮುಲ್ಲಾಖಾನ್ ಎಂಬ ಪದಬಳಕೆ ವಿಚಾರವಾಗಿ ಮಾತನಾಡಿದ ಅವರು, ಅಗೌರವದ ವಾತಾವರಣ ಸೃಷ್ಟಿಸ್ತಿದ್ದಾರೆ. ಅದು ನಿಮ್ಮ ಮೈಮೇಲೆ ಬರುತ್ತದೆ ಎಂಬ ಎಚ್ಚರಿಕೆ ಇರಲಿ. ಸಾರ್ವಜನಿಕ ಬದುಕಿನಲ್ಲಿರುವವರು ಇಂಥ ಭಾಷೆ ಬಳಸಬಾರದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ನಿಂದ ಹೊರ ಹೋಗುವ ನಾಯಕರು ಬಹಳ ಜನರಿದ್ದಾರೆ. ಅವರನ್ನು ಹಿಡಿದಿಟ್ಟುಕೊಳ್ಳೋಕೆ ಕಾಂಗ್ರೆಸ್ ಹೆಣಗಾಡುತ್ತಿದೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರನ್ನು ಹಿಡಿದಿಟ್ಟುಕೊಳ್ಳೋದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವ್ಯಕ್ತಿ ಅನಿವಾರ್ಯವಲ್ಲ. ಯಾರು ಜಾತ್ಯಾತೀತ ತತ್ವದ ಮೇಲೆ ವಿಶ್ವಾಸ ಇಟ್ಕೊಂಡಿರುವುದಿಲ್ಲ, ಬಡವರ ಕಾರ್ಯಕ್ರಮದ ಬಗ್ಗೆ ಒಲವು ಇರುವುದಿಲ್ಲ, ಅಂತವರು ಕಾಂಗ್ರೆಸ್ನಲ್ಲಿ ಉಳಿಯಲಿ ಅಥವಾ ಹೋಗಲಿ. ನಾವು ಬಡವರ ಕಾರ್ಯ ಮಾಡುವವರು, ಬಡವರಿಗೆ ವಿಶೇಷ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.
ದೆಹಲಿಯಲ್ಲಿ ರೈತರ ಹೋರಾಟ ಮತ್ತು ಸಾವು ವಿಚಾರವಾಗಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಲ್ಲಿ ರೈತರ ಬಗ್ಗೆ ಅಲಕ್ಷ್ಯ, ಆರ್ಥಿಕ ವ್ಯವಸ್ಥೆ ಮೇಲೆ ಕೊಡಲಿ ಪೆಟ್ಟು ಕೊಟ್ಟಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಏನು ಮಾಡಿದೆ ಇವತ್ತು, ಎಮ್ಎಸ್ಪಿ ಸಹಿತ ಉಳಿಸಿಕೊಳ್ಳಲಿಲ್ಲ. ಬೆಳೆದ ಬೆಳೆಗೆ ಆರ್ಥಿಕ ವ್ಯವಸ್ಥೆ ತೆಗೆದುಕೊಂಡು ಬನ್ನಿ. ಸ್ವಾಮಿನಾಥನ್ ಫೋಟೋ ಹಿಡಿದುಕೊಂಡು, ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಕೊಟ್ಟು, ಅವರನ್ನ ಹೊಗಳಿ, ಕೊಂಡಾಡಿರುವ ಬಿಜೆಪಿಗೆ ಮುಖಂಡರಿಗೆ ಎಲ್ಲಿದೆ ರೈತರ ಬಗ್ಗೆ ಕಳಕಳಿ. ಸ್ವಾಮಿನಾಥನ್ ಅವರು ಹೇಳಿರುವ ವಿಚಾರದ ಸಮೀಪವಾದರು ಅವರು ಬರಬೇಕಲ್ಲವಾ? ಆ ಕಾರಣಕ್ಕೆ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರ ರೈತರ ಬೆಳೆದ ಎಲ್ಲಾ ಬೆಳೆಗೆ, ಮಿನಿಮಮ್ ಸಪೋರ್ಟ್ ಪ್ರೈಸ್ ಕೊಡಬೇಕು. ಅದನ್ನು ಘೋಷಿಸಬೇಕು ಮಾಡಬೇಕು, ಪ್ರತಿ ವರ್ಷ ನಡೆಸಿಕೊಂಡು ಹೋಗುವ ಶಾಸನಬದ್ಧ ರೂಪ ಸಿಗಬೇಕು. ಅದನ್ನ ಮಾಡಿ ಅಂತ ವಿಧಾನ ಸಭೆಯಲ್ಲಿ ಆಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹೂಲಗೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಿದ್ದರು. ಮತ್ತು ಸ್ಥಳೀಯ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆಟಿ ಪಾಟೀಲ್ ಸಾಥ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Sat, 24 February 24