
ಬಾಗಲಕೋಟೆ, ಡಿಸೆಂಬರ್ 27: ಬಿಜೆಪಿ ವಿರುದ್ಧ ಮತಗಳ್ಳತನ ಆರೋಪ ಹೊರಿಸಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ನಡುವೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಮುರಡಿ ಗ್ರಾಮದ ಮತಪಟ್ಟಿಯಲ್ಲಿಯೂ ಅಕ್ರಮದ ಆರೋಪ ಕೇಳಿಬಂದಿದೆ. ಅಪ್ರಾಪ್ತರು ಮತ್ತು ಬೇರೆ ಊರಿನವರ ಹೆಸರು ವೋಟರ್ ಲಿಸ್ಟ್ನಲ್ಲಿದೆ ಎನ್ನಲಾಗಿದೆ.
ಗ್ರಾಮದ ಮತಪಟ್ಟಿಯಲ್ಲಿ 18 ವರ್ಷದೊಳಗಿನ 6 ಅಪ್ರಾಪ್ತರ ಹೆಸರು ಕಂಡುಬಂದಿದೆ. ಶರಣಪ್ಪ ಗೋಣಿ, ಯಲ್ಲಾಲಿಂಗ ಬನ್ನಿ, ಭೀಮಪ್ಪ ಬನ್ನಿ, ಪ್ರದೀಪ ಬನ್ನಿ, ಮಂಜುನಾಥ ಬನ್ನಿ, ಮಹಾಂತೇಶ ಗೋಣಿ ಎಂಬ 15 ರಿಂದ 17 ವರ್ಷ ವಯೋಮಾನದವರ ಹೆಸರುಗಳು ಪಟ್ಟಿಯಲ್ಲಿವೆ. ಜೊತೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯ 6 ಜನರ ಹೆಸರು ಕೂಡ ಮುರಡಿ ಗ್ರಾಮದ ಮತದಾರರ ಪಟ್ಟಿಯಲ್ಲಿರೋದು ಗೊತ್ತಾಗಿದೆ. ಹುಲಿಗೆವ್ವ, ರಂಗಪ್ಪ, ಶಾಂತಪ್ಪ ಶಾಂತಗೇರಿ, ಪಡಿಯಪ್ಪ, ರಂಗಪ್ಪ ಶಾಂತಗೇರಿ, ಶಾಂತವ್ವ ಶಾಂತಗೇರಿ ಹೆಸರು ಲಿಸ್ಟ್ನಲ್ಲಿ ಪತ್ತೆಯಾಗಿದೆ. ಇವರ ಹೆಸರು ಕುಷ್ಟಗಿಯಲ್ಲೂ ಇದ್ದು, ಅಲ್ಲಿ ಡಿಲೀಟ್ ಆಗದೆ ಇಲ್ಲಿ ಸೇರ್ಪಡೆ ಆಗಿದ್ದೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಇದನ್ನೂ ಓದಿ: ನೆಹರು, ಇಂದಿರಾ ಗಾಂಧಿ, ಸೋನಿಯಾ ಗಾಂಧಿಯಿಂದಲೂ ಮತಗಳ್ಳತನ; ಅಮಿತ್ ಶಾ ವಾಗ್ದಾಳಿ
ನಕಲಿ ಜನ್ಮ ದಾಖಲಾತಿ ಸೃಷ್ಟಿಸಿ ಮತಪಟ್ಟಿಗೆ ಕೆಲವರ ಹೆಸರು ಸೇರ್ಪಡೆ ಮಾಡಲಾಗಿದೆ ಎಂದು ಹುನಗುಂದ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾವಕ್ಕ ಮಗ ಶಿವಾನಂದ ಬನ್ನಿ ಮೇಲೆ ಶಂಕೆ ವ್ಯಕ್ತವಾಗಿದೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಮುಂದೆ ನಡೆಯಲಿರುವ ಕಾರಣ ಅಕ್ರಮ ನಡೆಸಿರುವ ಅನುಮಾನ ಇದೆ. ಈ ಬಗ್ಗೆ ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಇಳಕಲ್ ತಹಶೀಲ್ದಾರ್ ಸ್ಥಳೀಯರು ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.