ಬಾಗಲಕೋಟೆ: ಮಿನಿ ವಿಧಾನಸೌಧ ಮಾದರಿಯಲ್ಲಿ ನಿರ್ಮಾಣವಾಗಿ ತಲೆ ಎತ್ತಿ ನಿಂತಿರುವ ಗ್ರಾಮ ಸ್ವರಾಜ್ಯ ಸೌಧ. ಹೈಟೆಕ್ ಕಟ್ಟಡ ಹೈ ಪೈ ಕೊಠಡಿಗಳು. ವಿವಿಧ ಇಲಾಖೆ ಸರಕಾರಿ ಸೇವೆಗಳು, ಮುಂದೆ ಸುಂದರ ಉದ್ಯಾನವನ. ಇದು ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರು ಗ್ರಾಮ ಪಂಚಾಯಿತಿ ಕಟ್ಟಡದ ದೃಶ್ಯ. ಹೌದು ಒಂದು ಗ್ರಾಮ ಪಂಚಾಯತಿಯನ್ನ ಹೀಗೂ ಮಾಡಬಹುದಾ ಎಂಬುದಕ್ಕೆ ಮಂಟೂರ ಗ್ರಾಮ ಪಂಚಾಯತಿ ಸಾಕ್ಷಿಯಾಗಿದೆ. ಮಿನಿ ವಿಧಾನಸೌಧದ ಮಾದರಿಯಲ್ಲಿ ತಲೆ ಎತ್ತಿ ನಿಂತಿರುವ ಗ್ರಾಮ ಸ್ವರಾಜ್ಯ ಸೌಧದಲ್ಲಿ ಸಾರ್ವಜನಿಕರಿಗೆ ಸರಕಾರದ ವಿವಿಧ ಇಲಾಖೆಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತಿದೆ. ಈ ಮೂಲಕ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯತಿಯಾಗಿ ಹೊರಹೊಮ್ಮಿದೆ. ಇಂತಹ ರಾಜ್ಯದ ಮಾದರಿ ಗ್ರಾಮ ಪಂಚಾಯತಿಯನ್ನ ಸಿಎಂ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.
ಒಂದೇ ಸೂರಿನಡಿಯಲ್ಲಿ ಎಲ್ಲಾ ಸೇವೆಗಳು
ಪೋಸ್ಟ್ ಆಫೀಸ್, ಕೃಷಿ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸಕಾಲ, ಕೆಇಬಿ ಟ್ಯಾಕ್ಸ್ ಆಫೀಸ್, ಡಿಜಿಟಲ್ ಲೈಬ್ರರಿ, ಮಹಿಳಾ ಸಂಘದ ಸಂಜೀವಿನಿ ಶೆಡ್, ಸಭಾಭವನ, ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಗ್ರಾಮೀಣ ಅಭಿವೃದ್ಧಿ ಇಲಾಖೆ ನಡೆದು ಬಂದ ಚಿತ್ರ ಗ್ಯಾಲರಿ, ಗಾಂಧೀಜಿಯ ಪ್ರತಿಮೆ, ವಾಟರ್ ಪಂಟೇನ್, ಹಿರಿಯ ನಾಗರಿಕರ ವಿಶ್ರಾಂತಿ ತಾಣ, ಚಿಕ್ಕಮಕ್ಕಳಿಗೆ ಉದ್ಯಾನವನ, ಗ್ರಾಮಸಭೆ ಕಟ್ಟೆ, ಗೋದಾಮು, ಮಳೆ ನೀರು ಕೊಯ್ಲು, ವೈ ಫೈ, ಸಿಸಿಟಿವಿ ಕಣ್ಗಾವಲು, ಕರ್ನಾಟಕ ಸರ್ಕಾರದ ಲಾಂಛನದ ಪ್ರತಿಮೆ, ಉದ್ಯಾನವನ ನಿರ್ಮಾಣ, ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ.
ಇದನ್ನೂ ಓದಿ:ಭಟ್ಕಳ: ಗ್ರಾಮ ಪಂಚಾಯತಿ ಬಕೆಟ್ ಖರೀದಿಯಲ್ಲಿ ಭಾರಿ ಗೋಲ್ಮಾಲ್; ಅವ್ಯವಹಾರ ಮಾಡಿದ ಪಿಡಿಓಗೆ ಬಿಸಿ ಮುಟ್ಟಿಸಿದ ಸಿಇಓ
ಇಷ್ಟೇ ಅಲ್ಲದೇ ಪುಟ್ಬಾತ್, ಕುಡಿಯುವ ನೀರು, ಹೈಟೆಕ್ ಶೌಚಾಲಯ, ಪ್ರೊಜೆಕ್ಟರ್, ಎಲ್ಇಡಿ ಟಿವಿ, ಎಟಿಎಂ ಸೇವೆ, ಜೆರಾಕ್ಸ್, ಸಹಾಯವಾಣಿ, ದೂರು ಕೌಂಟರ್, ರೆಕಾರ್ಡ್ ರೂಮ್, ತರಬೇತಿ ಕೇಂದ್ರಗಳು ಇದರಲ್ಲಿವೆ. ಇನ್ನು ಈಗಾಗಲೇ ಮಂಟೂರು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಹೆಸರಾಗಿದೆ. ಮಂಟೂರು ಗ್ರಾಮದಲ್ಲಿನ ಈ ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮ ಪಂಚಾಯಿತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ, ರಾಜೀವ್ ಗಾಂಧಿ ಸಶಕ್ತೀಕರಣ, ಶಾಸಕರ ಅನುದಾನ, ವಿಧಾನ ಪರಿಷತ್ ಸದಸ್ಯರುಗಳ ಅನುದಾನ, ಜಿಲ್ಲಾ ಪಂಚಾಯಿತಿ, ತಾಲೂಕ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ಇತರೆ ಅನುದಾನಗಳ ಒಗ್ಗೂಡಿಸುವಿಕೆ ಮೂಲಕ 2 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ.
ಕಟ್ಟಡದಲ್ಲಿ ಗ್ರಾಮ ಮಟ್ಟದ ಎಲ್ಲಾ ಕಾರ್ಯಾಲಯಗಳನ್ನು ಒಗ್ಗೂಡಿಸಿ ಸಾರ್ವಜನಿಕರಿಗೆ ಸೇವೆಯನ್ನ ಒದಗಿಸುವ ಮಹತ್ವಾಕಾಂಕ್ಷೆಯಾಗಿದೆ. ಇನ್ನು ಗ್ರಾಪಂ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರ ಸಹಕಾರ ಪ್ರೋತ್ಸಾಹದ ಮೂಲಕ ಇಂತಹದ್ದೊಂದು ಮಹಾತ್ಕಾರ್ಯ ನಡೆದಿದೆ. ಇದೀಗ ಗ್ರಾಪಂ ಕಟ್ಟಡ ಎಲ್ಲರ ಗಮನ ಸೆಳೆಯುತ್ತಿದೆ. ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಇಂತಹ ಕಾರ್ಯ ಸರಳಸಾಧ್ಯ. ಎಲ್ಲರೂ ಒಟ್ಟಾಗಿ ಇಂತಹ ಮಹತ್ವದ ಕಾರ್ಯ ಮಾಡಿದ್ದು ಇತರ ಪಂಚಾಯತಿಗಳಿಗೆ ಸ್ಪೂರ್ತಿಯಾಗಿದೆ.
ವರದಿ: ರವಿಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Tue, 21 March 23