ಭಟ್ಕಳ: ಗ್ರಾಮ ಪಂಚಾಯತಿ ಬಕೆಟ್​ ಖರೀದಿಯಲ್ಲಿ ಭಾರಿ ಗೋಲ್​ಮಾಲ್​; ಅವ್ಯವಹಾರ ಮಾಡಿದ ಪಿಡಿಓಗೆ ಬಿಸಿ ಮುಟ್ಟಿಸಿದ ಸಿಇಓ

TV9 Digital Desk

| Edited By: Kiran Hanumant Madar

Updated on:Mar 17, 2023 | 11:26 AM

ಭಟ್ಕಳದ ಪಂಚಾಯಿತಿಯೊಂದರಲ್ಲಿ ನಡೆದಿದ್ದ ಬಕೆಟ್ ಖರೀದಿ ಹಗರಣ ಇಡೀ ಜಿಲ್ಲೆಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಮಾರುಕಟ್ಟೆಯಲ್ಲಿ 400, 500 ರೂಪಾಯಿಗೆ ಸಿಗುವ ಕಸ ತುಂಬುವ ಬಕೆಟ್‌ವೊಂದಕ್ಕೆ ಬರೋಬ್ಬರಿ 950 ರೂಪಾಯಿ ಬಿಲ್ ಹಾಕಿ ಖರೀದಿ ಮಾಡಿದ್ದರು. ಈ ಅವ್ಯವಹಾರ ನಡೆದ ನಾಲ್ಕೈದು ತಿಂಗಳಲ್ಲಿ ಈ ಬಗ್ಗೆ ತನಿಖೆ ನಡೆಸಿರುವ ಜಿಲ್ಲಾ ಪಂಚಾಯತ್ ಸಿಇಓ. ಅವ್ಯವಹಾರ ನಡೆಸಿರುವ ಹೆಚ್ಚುವರಿ ಹಣವನ್ನ ಮರುಪಾವತಿ ಮಾಡುವಂತೆ ಆದೇಶಿಸುವ ಮೂಲಕ ಭ್ರಷ್ಟಾಚಾರ ನಡೆಸಿದ್ದವರಿಗೆ ಶಾಕ್ ನೀಡಿದ್ದಾರೆ.

ಭಟ್ಕಳ: ಗ್ರಾಮ ಪಂಚಾಯತಿ ಬಕೆಟ್​ ಖರೀದಿಯಲ್ಲಿ ಭಾರಿ ಗೋಲ್​ಮಾಲ್​; ಅವ್ಯವಹಾರ ಮಾಡಿದ ಪಿಡಿಓಗೆ ಬಿಸಿ ಮುಟ್ಟಿಸಿದ ಸಿಇಓ
ಭಟ್ಕಳ: ಗ್ರಾಮ ಪಂಚಾಯತಿ ಬಕೆಟ್​ ಖರೀದಿಯಲ್ಲಿ ಭಾರಿ ಗೋಲ್​ಮಾಲ್​; ಅವ್ಯವಹಾರ ಮಾಡಿದ ಪಿಡಿಓಗೆ ಬಿಸಿ ಮುಟ್ಟಿಸಿದ ಸಿಇಓ

ಉತ್ತರ ಕನ್ನಡ: ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿ ಗ್ರಾಮ ಪಂಚಾಯತ್‌ನಲ್ಲಿ ದುಬಾರಿ ವೆಚ್ಚದ ಕಸ ತುಂಬುವ ಬಕೆಟ್‌ಗಳನ್ನ ಖರೀದಿ ಮಾಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಸ್ವಚ್ಛ ಗ್ರಾಮ ಯೋಜನೆಯಡಿ ಪಂಚಾಯತ್ ವ್ಯಾಪ್ತಿಯ ಮನೆಗಳ ಕಸ ವಿಲೇವಾರಿಗೆ ಬಳಸಲು ಕಸದ ಬುಟ್ಟಿಗಳನ್ನ ಖರೀದಿಸಿ, ಅವುಗಳನ್ನ ಆಯ್ದ ಮನೆ, ಹೊಟೇಲ್, ಅಂಗಡಿಗಳಿಗೆ ಹಂಚಲಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ 300 ರಿಂದ 500 ರೂಪಾಯಿಗೆ ಸಿಗುವ ಕಸದ ಬಕೆಟ್‌ಗಳಿಗೆ ಬರೋಬ್ಬರಿ 950 ರೂಪಾಯಿ ನೀಡಿ ಖರೀದಿ ಮಾಡಲಾಗಿತ್ತು. ಇದರ ಖರೀದಿ ಬಿಲ್ ಟಿವಿ9 ಗೆ ಸಿಗುತ್ತಿದ್ದಂತೆ ಪ್ರಕರಣದ ಬೆನ್ನುಹತ್ತಿ ಖರೀದಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ವಿಸ್ತೃತ ವರದಿ ಬಿತ್ತಾರ ಮಾಡಿತ್ತು. ಸುದ್ದಿ ಬಿತ್ತಾರವಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ತನಿಖೆಗೆ ಆದೇಶಿಸಿದ್ದರು. ತನಿಖೆ ಬಳಿಕ ಬಕೆಟ್ ಖರೀದಿಯಲ್ಲಿ ಪಿಡಿಓ ಅಕ್ರಮ ಬೆಳಕಿಗೆ ಬಂದಿದ್ದು, ಹೆಚ್ಚುವರಿಯಾಗಿ ಬಳಕೆ ಮಾಡಿರುವ ಹಣವನ್ನ ಮರುಪಾವತಿ ಮಾಡುವಂತೆ ಇದೀಗ ಆದೇಶ ನೀಡಿದ್ದಾರೆ.

ಇನ್ನು ಶಿರಾಲಿ ಗ್ರಾಮ ಪಂಚಾಯತ್‌ನಿಂದ ಎರಡು ಪ್ರತ್ಯೇಕ ಬಿಲ್‌ಗಳ ಮೂಲಕ 195 ಕಸ ತುಂಬುವ ಬಕೆಟ್‌ಗಳನ್ನ ಖರೀದಿಸಿದ್ದು. ಇದಕ್ಕಾಗಿ 1,85,250 ರೂಪಾಯಿಗಳನ್ನ ವೆಚ್ಚ ಮಾಡಲಾಗಿತ್ತು. ಹೊನ್ನಾವರದ ಕವಲಕ್ಕಿಯಲ್ಲಿರುವ ಶಕ್ತಿ ಎಂಟರ್‌ಪ್ರೈಸಸ್ ಹಾಗೂ ಪವರ್ ಸೊಲ್ಯೂಶನ್ ಹೆಸರಿನ ಸಂಸ್ಥೆ ತೆರಿಗೆ ಸೇರಿ ಬಕೆಟ್‌ವೊಂದಕ್ಕೆ 950 ರೂಪಾಯಿ ದರಕ್ಕೆ ಪೂರೈಕೆ ಮಾಡಿತ್ತು. ಇದು ಮೇಲ್ನೋಟಕ್ಕೆ ಭ್ರಷ್ಟಾಚಾರದ ಸುಳಿವು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿದ ಸಿಇಓ ಹೆಚ್ಚುವರಿಯಾಗಿ ಬಳಕೆಯಾಗಿರುವ ಸುಮಾರು 60 ಸಾವಿರ ರೂಪಾಯಿಗಳನ್ನ ಮರುಪಾವತಿ ಮಾಡುವಂತೆ ಆದೇಶಿಸಿದ್ದಾರೆ. ಇನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಕೇವಲ ಬಕೆಟ್ ಖರೀದಿ ಮಾತ್ರವಲ್ಲದೇ ಬೇರೆ ವಸ್ತುಗಳ ಖರೀದಿಯಲ್ಲೂ ಅವ್ಯವಹಾರ ನಡೆದಿರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಭ್ರಷ್ಟಾಚಾರ ಆರೋಪ; ರಾಜ್ಯದ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬೀಳುತ್ತಾ ಬೀಗ?

ಒಟ್ಟಾರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ಗಾದೆ ಮಾತಿನಂತೆ ಬಕೆಟ್ ಖರೀದಿಯಲ್ಲಿ ಗೋಲ್‌ಮಾಲ್ ನಡೆಸಿದವರಿಗೆ ತಕ್ಕ ಶಾಸ್ತಿ ಆಗಿದ್ದಂತೂ ಸತ್ಯ. ಇದೇ ರೀತಿ ಮುಂದಿನ ದಿನಗಳಲ್ಲೂ ಹದ್ದಿನ ಕಣ್ಣೀಡುವ ಮೂಲಕ ಗ್ರಾಮ ಪಂಚಾಯತ್‌ಗಳು ಭ್ರಷ್ಟಾಚಾರ ಮುಕ್ತವಾಗಿ, ಜನಪರವಾಗಲೀ ಎನ್ನುವುದು ನಮ್ಮ ಆಶಯ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada