ನ್ಯಾಯ ಕಾಪಾಡಬೇಕಿದ್ದ ಇಲಾಖೆಯಲ್ಲೇ ಭ್ರಷ್ಟಚಾರ.. ಆರೋಪಿಯನ್ನ ಬಂಧಿಸದೆ ಪೊಲೀಸರ ನಿರ್ಲಕ್ಷ್ಯ
ಅಕ್ರಮಗಳನ್ನು ಬೇಧಿಸಿ ನ್ಯಾಯ ಕಾಪಾಡಬೇಕಿದ್ದ ಪೊಲೀಸ್ ಇಲಾಖೆಯಲ್ಲೇ ಭ್ರಷ್ಟಚಾರ ನಡೆದಿದೆ. ತುಮಕೂರು ಎಸ್ಪಿ ಕಚೇರಿಯ ಎಫ್ಡಿಎ ಪೊಲೀಸ್ ಇಲಾಖೆಗೆ ಉಂಡೆನಾಮ ತಿಕ್ಕಿದ್ದಾರೆ. ಇಷ್ಟಾದ್ರೂ ಆಕೆಯನ್ನ ಬಂಧಿಸದ ಜಿಲ್ಲಾ ಪೊಲೀಸರ ನಿರ್ಲಕ್ಷ್ಯಕ್ಕೆ ತುಮಕೂರು ನ್ಯಾಯಾಲಯ ಛೀಮಾರಿ ಹಾಕಿದೆ.
ತುಮಕೂರು ಪೊಲೀಸ್ ಸಿಬ್ಬಂದಿ ಪ್ರವಾಸ ಭತ್ಯೆಯಲ್ಲಿ ವಂಚನೆ ಮಾಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಅಲ್ದೆ, ಆರೋಪಿ ರಕ್ಷಣೆಗೆ ಪೊಲೀಸ್ ಇಲಾಖೆ ನಿಂತಿರೋದು ಬೆಳಕಿಗೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎಫ್ಡಿಎ ಎಸ್.ಟಿ.ಯಶಸ್ವಿನಿ, 2020ರ ಜನವರಿಯಲ್ಲಿ ತುಮಕೂರು ಖಜಾನೆಗೆ ಹೆಚ್ಚುವರಿ ಪೊಲೀಸ್ ಭತ್ಯೆ ಬಿಲ್ ಸಲ್ಲಿಸಿ 20 ಲಕ್ಷದ 50 ಸಾವಿರ ರೂಪಾಯಿ ವಂಚಿಸಿದ್ರು. ಕಳೆದ ಎರಡೂವರೆ ವರ್ಷಗಳಿಂದ ಈ ವಂಚನೆ ನಡೆದಿರೋದು ಬೆಳಕಿಗೆ ಬಂದಿತ್ತು.
ಆರೋಪಿಯನ್ನ ಬಂಧಿಸದೆ ಪೊಲೀಸರ ನಿರ್ಲಕ್ಷ್ಯ ಈ ಆರೋಪದ ಕುರಿತು ಹೊಸ ಬಡಾವಣೆ ಠಾಣೆಯಲ್ಲಿ 5 ತಿಂಗಳ ಹಿಂದೆ ಮೊಕದ್ದಮೆ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿರೋ ಯಶಸ್ವಿನಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ತಿರಸ್ಕರಿಸಿದೆ. ಆದ್ರೂ, ಈವರೆಗೆ ಆರೋಪಿಯನ್ನ ಬಂಧಿಸದ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಿಡಿದೆ.
ಎಸ್ಪಿ ಕಚೇರಿಯಲ್ಲಿ ಅಕ್ರಮ ನಡೆಸಿದವರನ್ನೆ ಬಂಧಿಸದಿದ್ದರೆ, ಜನ ಸಾಮಾನ್ಯರಿಗೆ ಹೇಗೆ ರಕ್ಷಣೆ ಕೊಡ್ತೀರಿ ಅಂತಾ ನ್ಯಾಯಾಲಯ ಪ್ರಶ್ನಿಸಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆಯಿದೆ. ತನಿಖಾ ಹಂತದಲ್ಲೇ ಜಾಮೀನು ನೀಡಿದರೆ ತನಿಖೆಗೆ ಸಹಕಾರ ನೀಡಲ್ಲ. ಹೀಗಾಗಿ ಆರೋಪಿಯನ್ನ ಶೀಘ್ರ ಬಂಧಿಸಲು ಆದೇಶಿಸಿದೆ. ಸದ್ಯ ಪೊಲೀಸರು ಯಶಸ್ವಿನಿಯನ್ನ ಹುಡುಕಲು ಯತ್ನಿಸುತ್ತಿದ್ದಾರೆ. ಇದರ ನಡುವೆ ತುಮಕೂರಿನಲ್ಲಿ ಹಾಡಹಗಲೇ ಕಳ್ಳನೊಬ್ಬ ಹಣದ ಬ್ಯಾಗ್ಗಳನ್ನ ಕದ್ದೊಯ್ಯುತ್ತಿರೋದು ಪೊಲೀಸರಿಗೆ ತಲೆನೋವಾಗಿದೆ.
ಎಸ್ಪಿ ಕಚೇರಿಯಲ್ಲಿ ನಡೆದಿರೋ ಪೊಲೀಸರ ಪ್ರವಾಸಿ ಭತ್ಯೆಯ ಬಿಲ್ ತಯಾರಿಕೆಗೆ ಇತರ ಅಧಿಕಾರಿಗಳ ಸಹಕಾರವಿದೆ ಅನ್ನೋ ಸಂಶಯ ದಟ್ಟವಾಗಿದೆ. ಪ್ರಕರಣ ಮಾಧ್ಯಮಗಳಿಗೆ ಗೊತ್ತಾಗದಂತೆ ಪೊಲೀಸರು ಸಾಕಷ್ಟು ಜಾಗ್ರತೆ ವಹಿಸಿರೋದು ಕೂಡ ಕಂಡುಬಂದಿದೆ. ಹೀಗಾಗಿ ಪೊಲೀಸ್ ಇಲಾಖೆ ಕುರಿತು ಜನರಿಗೆ ಅನುಮಾನಗಳು ಶುರುವಾಗಿರೋದು ಮಾತ್ರ ಸುಳ್ಳಲ್ಲ.