ಬೆಳೆ ಹಾನಿ, ಬರ; ಬಾಗಲಕೋಟೆ ಜಿಲ್ಲೆಯಲ್ಲಿ ಒಂದೂವರೆ ವರ್ಷದಲ್ಲಿ 24 ರೈತರು ಆತ್ಮಹತ್ಯೆಗೆ ಶರಣು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 10, 2024 | 7:46 PM

ಕೃಷಿಯನ್ನು ಪ್ರಕೃತಿಯೊಂದಿಗಿನ‌ ಜೂಜಾಟ ಎಂದು ಕರೆಯುತ್ತಾರೆ. ಅತಿಯಾಗಿ ಮಳೆ ಸುರಿದರೂ ರೈತನಿಗೆ ಕಷ್ಟ, ಮಳೆಯಾಗದಿದ್ದರೂ ರೈತನಿಗೆ ಬಲು ಸಂಕಟ. ಎಲ್ಲ ಮಳೆ-ಬೆಳೆ ಚೆನ್ನಾಗಿ ಬಂದು ಕೊನೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿ ಪರದಾಟ. ಇದರಿಂದ ರೈತ ಪದೇ ಪದೇ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬರುತ್ತದೆ. ಅದರಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 24 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಬೆಳೆ ಹಾನಿ, ಬರ; ಬಾಗಲಕೋಟೆ ಜಿಲ್ಲೆಯಲ್ಲಿ ಒಂದೂವರೆ ವರ್ಷದಲ್ಲಿ 24 ರೈತರು ಆತ್ಮಹತ್ಯೆಗೆ ಶರಣು
ಬಾಗಲಕೋಟೆ ಜಿಲ್ಲೆಯಲ್ಲಿ ಒಂದೂವರೆ ವರ್ಷದಲ್ಲಿ 24 ರೈತರು ಆತ್ಮಹತ್ಯೆಗೆ ಶರಣು
Follow us on

ಬಾಗಲಕೋಟೆ, ಜು.10: ಕಳೆದ ವರ್ಷ ಭೀಕರ ಬರದಿಂದ ಕಂಗೆಟ್ಟ ರೈತರು ತಲೆ‌ ಮೇಲೆ ಕೈ ಹೊತ್ತು ಕೂತಿದ್ದರು. ಈ ವರ್ಷ ಉತ್ತಮ ಮಳೆ ಆಗಿದೆ, ರೈತರು(Farmers)ಬಿತ್ತನೆ ಮಾಡಿದ್ದಾರೆ. ಅಲ್ಲೋ ಇಲ್ಲೋ ಕೆಲವೊಂದು ಕಡೆ ಅತಿಯಾದ ಮಳೆಯಿಂದ ಬೆಳೆ ಹಾಳಾಗಿದ್ದನ್ನು ಬಿಟ್ಟರೆ, ಬಹುತೇಕ ಕಡೆ ಉತ್ತಮವಾದ ಮಳೆ ಆಗಿರುವುದರಿಂದ ರೈತರು ಸಂಭ್ರಮದಲ್ಲಿದ್ದಾರೆ. ಆದರೆ, ಸಂಭ್ರಮದ ಮಧ್ಯೆ ರೈತರು ಆತಂಕ ಪಡುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಹೌದು, ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಬರೋಬ್ಬರಿ 24 ರೈತರು ಸಾಲ ಭಾದೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರೈತರು ಬೆಳೆದಂತಹ ಬೆಳೆಗೆ ಸರಿಯಾಗಿ ಬೆಲೆ ಸಿಗದೇ ಇರುವಂತದ್ದು, ಬಿತ್ತಿದ ಬೆಳೆ ಕೈಗೆ ಬಾರದಿರುವ ಹಿನ್ನೆಲೆಯಲ್ಲಿ ಸಾಲದ ಸುಳಿಗೆ ಸಿಲುಕಿದ್ದಾರೆ. ಸಾಲ ತೀರಿಸಲಾಗದ ಪರಿಸ್ಥಿತಿಯಲ್ಲಿ ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ರೈತರು ಪಡೆಯುವಂತಹ ಬೆಳೆ ಸಾಲದ ಪ್ರಮಾಣ ಕೂಡ ದ್ವಿಗುಣವಾಗಿದೆ. ಜೊತೆಗೆ ಬ್ಯಾಂಕ್​ಗಳಲ್ಲಿ ಸಾಲ ಪಡೆಯುವ ರೈತರ ಸಂಖ್ಯೆ ಹಾಗೂ ಸಾಲದ ಮೊತ್ತ ಗಣನೀಯ ಏರಿಕೆ ಕಂಡಿದೆ. 2017-18 ರಲ್ಲಿ 3‌ ಲಕ್ಷದ 2,000 ರೈತರು, 3,948 ಕೋಟಿ ರೂಪಾಯಿ ಬೆಳೆ ಸಾಲ ಪಡೆದಿದ್ದರು. ಆರು ವರ್ಷದಲ್ಲಿ ಬೆಳೆ ಸಾಲ ಪಡೆದ ರೈತರ ಸಂಖ್ಯೆ ನಾಲ್ಕು ಲಕ್ಷದ 53 ಸಾವಿರಕ್ಕೆ ಏರಿಕೆಯಾಗಿದ್ದು, 2024 ರಲ್ಲಿ 6,028 ಕೋಟಿ ಸಾಲ ಪಡೆದಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ದಲ್ಲಾಳಿಗಳ ಕಾಟದಿಂದ ಬೇಸತ್ತು ವಿಷಸೇವಿಸಿ ನಾಲ್ವರು ರೈತರು ಆತ್ಮಹತ್ಯೆಗೆ ಯತ್ನ

ಈ ಬಗ್ಗೆ ಮಾತಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ ಹೂಗಾರ, ‘ವರ್ಷದಿಂದ ವರ್ಷಕ್ಕೆ ಬೆಳೆ ಸಾಲ ನೀಡುವ ಪ್ರಮಾಣ ಏರಿಕೆಯಾಗುತ್ತಾ ಹೋಗುತ್ತಿದೆ. ಜೊತೆಗೆ ರೈತರ ಪ್ರಮಾಣವು ಹೆಚ್ಚಾಗುತ್ತಿದೆ. ಅದಕ್ಕೆ ಅನುಗುಣವಾಗಿ ಸಾಲದ ಮೊತ್ತವು ಏರಿಕೆಯಾಗಿದೆ. ಆದರೆ, ರೈತರಲ್ಲಿ ವಿನಂತಿ ಮಾಡುವುದೆನೆಂದರೆ ‘ಯಾವುದೇ ರೈತರು ಕೂಡ ಸಾಲದಿಂದ ಧೃತಿಗೆಡಬೇಕಾಗಿಲ್ಲ. ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಬೇಡಿ. ಏನೇ ಇದ್ದರೂ ಬ್ಯಾಂಕ್ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ‌ಒಂದು ಕಡೆ‌‌ ಬೆಳೆ ಸಾಲದ ಮೊತ್ತ ದುಪ್ಪಟ್ಟಾಗುತ್ತಿದೆ. ಜೊತೆಗೆ ರೈತರ ಆತ್ಮಹತ್ಯೆ ಸಂಖ್ಯೆ ಇಂದುವರೆಗೆ ವರ್ಷದಲ್ಲಿ ಎರಡು ಡಜನ್ ಆಗಿದ್ದು ವಿಪರ್ಯಾಸದ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:42 pm, Wed, 10 July 24