Election Effect: ಕಟ್ಟಡ ಕಾಮಗಾರಿಗೆ ಬಾರದ ಕಾರ್ಮಿಕರು; ಸಾಲ ಮಾಡಿ ಪೇಚೆಗೆ ಸಿಲುಕಿದ ಗುತ್ತಿಗೆದಾರರು
ಇಷ್ಟು ದಿನ ರಾಜ್ಯದ ಮೂಲೆ ಮೂಲೆಯಲ್ಲೂ ಚುನಾವಣಾ ಜಾತ್ರೆ ಸಂಭ್ರಮ ನಡೆದಿತ್ತು. ಈಗ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದೆ. ಆದರೆ ಕಳೆದ ಒಂದು ತಿಂಗಳಿಂದ ಶುರುವಾದ ಚುನಾವಣೆ ಜಾತ್ರೆ, ಕಾಮಗಾರಿಗಳ ಮೇಲೆ ಬಾರಿ ಹೊಡೆತ ಕೊಟ್ಟಿದೆ. ಪ್ರಭಲ ಪಕ್ಷಗಳ ಸಮಾವೇಶದ ಕಾಸಿಗೆ ಕಾರ್ಮಿಕರು ಕೆಲಸದ ಕಡೆ ತಿರುಗಿ ನೋಡಿಲ್ಲ. ಇದರಿಂದ ಕಾಮಗಾರಿಗಳು ಬಾಕಿ ಉಳಿದಿದ್ದು, ಸಾಲ ಮಾಡಿ ಕೆಲಸ ಹಿಡಿದ ಗುತ್ತಿಗೆದಾರರು ಪೇಚಿಗೆ ಸಿಲುಕಿದ್ದಾರೆ.

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ(Karnataka Assembly Election) ಕಾವು ಜೋರಾಗಿದ್ದು, ಪ್ರಚಾರ, ಸಭೆ, ಸಮಾವೇಶಕ್ಕಾಗಿ ಪಕ್ಷಗಳ ಆಮಿಷಕ್ಕೆ ಒಳಗಾಗಿ ಕೆಲಸಕ್ಕೆ ಬಾರದ ಕಾರ್ಮಿಕರು. ಈ ಹಿನ್ನೆಲೆ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು. ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆಯಲ್ಲಿ. ಹೌದು ಚುನಾವಣೆ ಕಣ ರಂಗೇರಿದೆ. ಆದರೆ, ತಿಂಗಳುಗಟ್ಟಲೆ ನಡೆದ ಚುನಾವಣಾ ಜಾತ್ರೆ ಕಾಮಗಾರಿಗಳಿಗೆ ಬಾರಿ ಹೊಡೆತ ನೀಡಿದೆ. ರಾಜಕೀಯ ಪಕ್ಷದ ನಾಯಕರು ಸಭೆ, ಪ್ರಚಾರ, ಸಮಾವೇಶಗಳಿಗೆ 500, 600 ಹಣ ಕೊಡುತ್ತಿದ್ದಾರೆ. ಇನ್ನು ಎಣ್ಣೆ ಹೊಡೆಯುವವರಿಗೆ ಅದು ವ್ಯವಸ್ಥೆ ಮಾಡುತ್ತಿದ್ದಾರೆ. ಕಟ್ಟಡ ಕಾಮಗಾರಿಗೆ ಬರುತ್ತಿದ್ದ ಕಾರ್ಮಿಕರು ರಾಜಕೀಯ ಪಕ್ಷಗಳ ಹಣದ ಹಿಂದೆ ಬಿದ್ದಿದ್ದಾರೆ. ಇದರಿಂದ ಕಟ್ಟಡ ಕಾಮಗಾರಿಗಳಿಗೆ ಕಾರ್ಮಿಕರು ಇಲ್ಲದಂತಾಗಿದೆ. ಬಡ್ಡಿ ಸಾಲ ತಂದು ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಆಗದೇ ಪರದಾಡುವಂತಾಗಿದೆ.
ಕಟ್ಟಡ ಕಾಮಗಾರಿ ಕಾರ್ಮಿಕರಿಗೆ ದಿನಕ್ಕೆ ಐದು ನೂರು ಕೂಲಿ ಕೊಡುತ್ತಾರೆ. ಆದರೆ ಚುನಾವಣಾ ಹಬ್ಬದ ಈ ವೇಳೆ ಕೇವಲ ಎರಡು ತಾಸು ಪ್ರಚಾರ ಹಾಗೂ ಎರಡು ತಾಸು ಸಭೆ ಸಮಾವೇಶಕ್ಕೆ ಹೋದರೆ ಐದುನೂರು ಜೊತೆಗೆ ಊಟ ಎಣ್ಣೆ ಬೇರೆ. ಇದರಿಂದ ದಿನವಿಡೀ ಐದುನೂರು ಕೂಲಿಗಾಗಿ ಕಾರ್ಮಿಕರು ಈ ಸಮಯದಲ್ಲಿ ಸಿಗುತ್ತಿಲ್ಲ. ಇದರಿಂದ ಬಾಗಲಕೋಟೆ ನಗರದ ಪ್ರತಿಶತ 60 ರಷ್ಟು ಕಾಮಗಾರಿಗಳು ಸ್ಥಗಿತಗೊಂಡರೆ, ಉಳಿದ 40 ಪ್ರತಿಶತ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಕಾಮಗಾರಿ ವಿಳಂಭವಾಗುತ್ತಿರುವ ಹಿನ್ನೆಲೆ ಗುತ್ತಿಗೆದಾರರು ಮಾಲೀಕರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ಕೈಗೆ ಸಿಕ್ಕ ಕೆಲವೇ ಕೆಲ ಕಾರ್ಮಿಕರಿಂದ ಹೆಚ್ಚಿನ ಅವಧಿ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಒಂದು ಕಡೆ ಅಬ್ಬರದಿಂದ ಸಾಗಿದ ಚುನಾವಣಾ ಪ್ರಚಾರ ಕ್ಲೈಮ್ಯಾಕ್ಷ್ ಹಂತಕ್ಕೆ ಬಂದಿದೆ. ಆದರೆ ಚುನಾವಣೆ ಆಮಿಷ ಕಾಮಗಾರಿಗಳ ಮೇಲೆ ಪರಿಣಾಮ ಬೀರಿದ್ದು ಮಾತ್ರ ವಿಪರ್ಯಾಸ.
ವರದಿ: ರವಿಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Tue, 9 May 23




