ಬಾಗಲಕೋಟೆ: ರೈತ ಮಾರುತಿ ಸೂರ್ಯವಂಶಿ ಮೊದಲು ಕೇವಲ ಕಬ್ಬು, ಜೋಳ, ಶೇಂಗಾ ಬೆಳೆ ಬೆಳಯುತ್ತಿದ್ದರು. ಕೆಲವೊಂದು ಸಾರಿ ಬೆಳೆ ಚೆನ್ನಾಗಿ ಬಂದರೆ, ಅನೇಕ ಬಾರಿ ಅಕಾಲಿಕ ಮಳೆ, ಅತೀವೃಷ್ಟಿ-ಅನಾವೃಷ್ಟಿ, ಕಾಡುಪ್ರಾಣಿಗಳ ದಾಳಿಯಿಂದ ಬೆಳೆದ ಬೆಳೆ ಕೈ ಸೇರುತ್ತಿರಲಿಲ್ಲ. ಇನ್ನು ಬೆಳೆ ಸಮೃದ್ಧವಾಗಿ ಬೆಳೆದರೂ ದಿಢೀರ್ ಬೆಲೆ ಪಾತಾಳಕ್ಕೆ ಕುಸಿತವಾಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ರೈತ ಮಾರುತಿ ತಾಳೆ ಬೆಳೆಗೆ ಕೈ ಹಾಕಿದ್ದಾರೆ. ಇದು ರೈತನ ಕೈ ಹಿಡಿದಿದ್ದು, ತಾಳೆ ಬೆಳೆಯಲ್ಲಿ ಲಕ್ಷ ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ.
ಸಾಮಾನ್ಯವಾಗಿ ಹೆಚ್ಚಿನ ರೈತರಿಗೆ ತಾಳೆ ಬೆಳೆಯ ಬಗ್ಗೆ ತಿಳಿದಿಲ್ಲ. ಆದರೆ ಬೆಲೆ ಕುಸಿತ, ಅತೀವೃಷ್ಠಿ ಮತ್ತು ಅನಾವೃಷ್ಠಿಯಲ್ಲಿಯೂ ತಾಳೆ ಬೆಳೆ ರೈತನಿಗೆ ಎಷ್ಟೊಂದು ಸಹಕಾರಿ ಎಂಬುದನ್ನು ಮಾರುತಿ ಸೂರ್ಯವಂಶಿ ಅವರು ತೋರಿಸಿಕೊಟ್ಟಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಮಾರುತಿ ಸೂರ್ಯವಂಶಿ ಅವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ 220 ತಾಳೆ ಗಿಡಗಳನ್ನು ಬೆಳೆದಿದ್ದಾರೆ. ಸುಮಾರು 15 ವರ್ಷಗಳ ಆಯಸ್ಸಿನ ಈ ಗಿಡಗಳಿಂದ ತಿಂಗಳಿಗೆ 4-5 ಟನ್ ತಾಳೆ ಹಣ್ಣುಗಳನ್ನು ಬೆಳೆಯುತ್ತಾರೆ.
ಟನ್‌ಗೆ 15-16 ಸಾವಿರ ರೂಪಾಯಿ ಮಾರಾಟ ಮಾಡುತ್ತಾರೆ. ವರ್ಷಕ್ಕೆ 50-55 ಟನ್ ವರೆಗೆ ತಾಳೆಹಣ್ಣುಗಳ ಇಳುವರಿ ಬರುತ್ತದೆ. ಇದರಿಂದ ಏನಿಲ್ಲಂದ್ರೂ 6-7 ಲಕ್ಷ ರೂಪಾಯಿ ವರ್ಷದಲ್ಲಿ ಸರಳವಾಗಿ ಸಿಗುತ್ತದೆ. ಕಡಿಮೆ ಅಂದರೂ 14-15 ಟನ್ ಬಂದ್ರೂ ಎಕರೆಗೆ ಒಂದೂವರೆ ಲಕ್ಷದ ವರೆಗೂ ಉಳಿತಾಯ ಆಗುತ್ತದೆ. ಮೊದಲ ಮೂರು ವರ್ಷ ಯಾವುದೇ ಆದಾಯ ಇರಲ್ಲ. ಬಳಿಕ 30 ವರ್ಷದವರೆಗೂ ಬೆಳೆ ಬರುತ್ತಲೇ ಇರುತ್ತದೆ. ಇದಕ್ಕೆ ನೀರು, ಗೊಬ್ಬರ ಹಾಕಿದರೆ ಅಷ್ಟೇ ಸಾಕು ಎಂದು ತಾಳೆ ಬೆಳೆಗಾರ ಮಾರುತಿ ಸೂರ್ಯವಂಶಿ ಹೇಳಿದ್ದಾರೆ.
ಮಾರುತಿ ಸೂರ್ಯವಂಶಿ ಅವರು ಈ ಹಿಂದೆ ಇದೇ ಜಾಗದಲ್ಲಿ ಕಬ್ಬು, ಶೇಂಗಾ ಬೆಳೆದು ಕೈ ಸುಟ್ಟುಕೊಂಡಿದ್ದರು. ಕಬ್ಬು ಹಾಗೂ ಶೇಂಗಾ ಬೆಳೆಗಳು ಅತೀವೃಷ್ಠಿ, ಅನಾವೃಷ್ಠಿ ಜೊತೆಗೆ ಕಾಡುಪ್ರಾಣಿಗಳಿಂದ ಹಾನಿಯಾಗಿ ನಷ್ಟದಲ್ಲಿಯೇ ಇದ್ದರು. ಹೀಗಾಗಿ ತಾಳೆ ಬೆಳೆದು ಈಗ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಇಲಾಖೆ ಹಾಗೂ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ರೈತರಿಗೆ ಉಚಿತವಾಗಿ ತಾಳೆ ಗಿಡಗಳನ್ನು ನೀಡಲಾಗುತ್ತದೆ. ಅಲ್ಲದೇ ಮೂರು ವರ್ಷದವರೆಗೆ ಗಿಡಗಳ ನಿರ್ವಹಣೆಗೆ ಬೇಕಾದ ಗೊಬ್ಬರವನ್ನು ತೋಟಗಾರಿಕೆ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಂಡ ಸಂಸ್ಥೆ ಪೂರೈಕೆ ಮಾಡುತ್ತದೆ.
ಮೊದಲ ಮೂರು ವರ್ಷ ಯಾವುದೇ ಫಸಲು ಬರಲ್ಲ. ನಾಲ್ಕನೇ ವರ್ಷದಿಂದ ಬೆಳೆ ಬರಲು ಪ್ರಾರಂಭಿಸುತ್ತದೆ. ಇನ್ನು ತೋಟಗಾರಿಕೆ ಜೊತೆ ಒಪ್ಪಂದ ಮಾಡಿಕೊಂಡ ಖಾಸಗಿ ಸಂಸ್ಥೆಯೇ ತಾಳೆ ಖರೀದಿಸುತ್ತದೆ. ಇದರಿಂದ ರೈತರಿಗೆ ಮಾರುಕಟ್ಟೆಯ ಯಾವುದೇ ಸಮಸ್ಯೆ ಇರಲ್ಲ. ಹೀಗಾಗಿ ಇದು ರೈತರಿಗೆ ಹೆಚ್ಚು ಸಹಕಾರಿಯಾಗಿದೆ. ಜೊತೆಗೆ ಇದರಲ್ಲಿ ಇಂಟರ್ ಕ್ರಾಪ್ ಆಗಿ ಬಾಳೆ, ಪಪ್ಪಾಯಿ ಬೆಳೆದರೆ ಅಧಿಕ ಇಳುವರಿ ಪಡೆಯಬಹುದಾಗಿದೆ. ಇನ್ನು ಮಾರುತಿ ಸೂರ್ಯವಂಶಿ ಅವರ ಈ ಏಳಿಗೆ ಕಂಡು ಅಕ್ಕಪಕ್ಕದ ರೈತರು ಸಹ ತಾಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ತಾಳೆ ಬೆಳೆ ರೈತರಿಗೆ ನಷ್ಟ ಮಾಡಲ್ಲ. ಹಾಗಾಗಿ ತಾಳೆ ಬೆಳೆ ಬೆಳೆಯುವುದು ಉತ್ತಮ ಎಂದು ಆಯಿಲ್ ಪಾಮ್ ಸಂಸ್ಥೆ ಸಿಬ್ಬಂದಿ ಶ್ರೀಶೈಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಮಾರುತಿ ಸೂರ್ಯವಂಶಿ ಅವರು ಕಳೆದ 13 ವರ್ಷಗಳಿಂದ ಯಾವುದೇ ನಷ್ಟ ಇಲ್ಲದೇ ಸಾಗಿದ್ದಾರೆ. ಇವರ ಈ ಯಶಸ್ಸಿಗೆ ತಾಳೆ ಬೆಳೆ ಕಾರಣವಾಗಿದ್ದು, ಬೇರೆ ಬೆಳೆ ಬೆಳೆದು ಕೈ ಸುಟ್ಟುಕೊಂಡವರು ತಾಳೆ ಬೆಳೆ ಬೆಳೆದರೆ ಉತ್ತಮ ಎನ್ನುವುದು ರೈತ ಮಾರುತಿ ಅವರ ಆಶಯ.
ವರದಿ: ರವಿ ಮೂಕಿ
ಇದನ್ನೂ ಓದಿ:
ಪೇರಲೆ ಎಲೆಯಿಂದ ಆದಾಯ ಗಳಿಸುತ್ತಿರುವ ಧಾರವಾಡ ರೈತರು, ಅದು ಹೇಗೆ?
ಬರದ ನಾಡಲ್ಲಿ ಶ್ರೀಗಂಧ ಬೆಳೆದ ಸಾಹಸಿ, ಮಿಶ್ರ ಪದ್ಧತಿ ಬೇಸಾಯದಿಂದ ಸುಧಾರಿಸಿತು ರೈತನ ಆದಾಯ
Published On - 2:18 pm, Fri, 14 January 22