ಪೇರಲೆ ಎಲೆಯಿಂದ ಆದಾಯ ಗಳಿಸುತ್ತಿರುವ ಧಾರವಾಡ ರೈತರು, ಅದು ಹೇಗೆ?

ಧಾರವಾಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಪೇರಲೆ ಪ್ರಮುಖವಾದ ತೋಟಗಾರಿಕಾ ಬೆಳೆ. ಜಿಲ್ಲೆಯಲ್ಲಿ ಬೆಳೆಯುವ ಈ ಬೆಳೆ ಸಾವಿರಾರು ರೈತರ ಆದಾಯದ ಮೂಲ. ಜಿಲ್ಲೆಯಲ್ಲಿ ಬೆಳೆಯಲಾದ ಉತ್ತಮ ಗುಣಮಟ್ಟದ ಪೇರಲೆಗೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಬೇಡಿಕೆ ಇದೆ.

ಪೇರಲೆ ಎಲೆಯಿಂದ ಆದಾಯ ಗಳಿಸುತ್ತಿರುವ ಧಾರವಾಡ ರೈತರು, ಅದು ಹೇಗೆ?
ಪೇರಲೆ ಗಿಡ
Follow us
TV9 Web
| Updated By: sandhya thejappa

Updated on:Jan 03, 2022 | 2:56 PM

ಧಾರವಾಡ: ರೈತರು ಕೇವಲ ಸಾಂಪ್ರದಾಯಿಕ ಶೈಲಿಯಲ್ಲಿ ಕೃಷಿ ಮಾಡುತ್ತಿದ್ದರೆ ಸಾಲದು. ಹೊಸ ಹೊಸ ಪ್ರಯೋಗಗಳನ್ನೂ ಮಾಡುತ್ತಿರಬೇಕು. ಬದಲಾದ ಕಾಲಘಟ್ಟದಲ್ಲಿ ಹೆಚ್ಚಿನ ಆದಾಯ ಗಳಿಸಬೇಕಾದರೆ ಹೊಸ ಬಗೆಯ ಸಾಹಸಕ್ಕೆ ಕೈ ಹಾಕಲೇಬೇಕು. ಈ ಮಾತಿಗೆ ಪೂರಕವಾಗಿ ಧಾರವಾಡದ ರೈತರು ಸಾಧಿಸಿದ್ದಾರೆ. ಪೇರಲೆ ಬೆಳೆಯುತ್ತಿದ್ದ ರೈತರು ಇದುವರೆಗೂ ಹಣ್ಣನ್ನಷ್ಟೇ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಅದರ ಎಲೆಗಳಿಂದಲೂ ಆದಾಯ ಪಡೆಯಲು ಶುರು ಮಾಡಿದ್ದಾರೆ.

ಪೇರಲೆ ಎಲೆ ಆದಾಯದ ಮೂಲ ಧಾರವಾಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಪೇರಲೆ ಪ್ರಮುಖವಾದ ತೋಟಗಾರಿಕಾ ಬೆಳೆ. ಜಿಲ್ಲೆಯಲ್ಲಿ ಬೆಳೆಯುವ ಈ ಬೆಳೆ ಸಾವಿರಾರು ರೈತರ ಆದಾಯದ ಮೂಲ. ಜಿಲ್ಲೆಯಲ್ಲಿ ಬೆಳೆಯಲಾದ ಉತ್ತಮ ಗುಣಮಟ್ಟದ ಪೇರಲೆಗೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ ಮಾರುಕಟ್ಟೆಯಲ್ಲಿ ಪೇರಲೆ ಹಣ್ಣಿಗೆ ಸರಿಯಾದ ದರ ಸಿಗದೇ ಇದ್ದಾಗ ರೈತರು ನಷ್ಟ ಅನುಭವಿಸುವುದು ಖಚಿತ. ಇನ್ನು ಉತ್ತಮ ಇಳುವರಿ ಬಂದಿದ್ದರೂ ಅಕಾಲಿಕ ಮಳೆ, ಅತಿವೃಷ್ಠಿಯಿಂದಾಗಿ ಪೇರಲೆ ಹಣ್ಣು ಕೊಳೆತು ಹೋಗುತ್ತವೆ. ಈ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ರೈತರು ಸಂಕಷ್ಟಕ್ಕೆ ಸಿಲುಕುವುತ್ತಾರೆ. ಹೀಗಾಗಿ ಧಾರವಾಡದ ರೈತರು ಕೇವಲ ಪೇರಲೆ ಹಣ್ಣಿನ ಮೇಲೆ ಅವಲಂಬಿತರಾಗದೇ ಅದರ ಎಲೆಯಿಂದಲೂ ಆದಾಯ ಗಳಿಸಲು ಶುರು ಮಾಡಿದ್ದಾರೆ.

ಪೇರಲೆ ಹಣ್ಣಿನಲ್ಲಿರುವ ಅನೇಕ ಅಂಶಗಳು ಅದರ ಎಲೆಯಲ್ಲಿಯೂ ಇವೆ. ಹೀಗಾಗಿ ಇದೀಗ ಪೇರಲೆ ಎಲೆಯನ್ನು ಒಣಗಿಸಿ, ಅದನ್ನು ಪುಡಿ ಮಾಡಿ ಲಾಭ ಪಡೆಯುವ ಹೊಸ ಆದಾಯದ ಮೂಲ ಕಂಡುಕೊಂಡಿದ್ದಾರೆ. ಅದರಲ್ಲೂ ಸಾವಯವ ಕೃಷಿಕರು ಈ ಬಗೆಯ ಆದಾಯದ ಮೂಲವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಏಕೆಂದರೆ ಸಾವಯವ ವಿಧಾನದಲ್ಲಿ ಬೆಳೆದ ಪೇರಲೆ ಎಲೆಗಳಲ್ಲಿ ರಾಸಾಯನಿಕದ ಅಂಶ ಇರಲ್ಲ. ಹೀಗಾಗಿ ಜನರು ಕೂಡ ಪೇರಲೆ ಪುಡಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.

ಅನೇಕ ಪೋಷಕಾಂಶಗಳಿಂದ ಕೂಡಿರುವ ಪೇರಲೆ ಎಲೆ ಪೇರಲ ಎಲೆಯಲ್ಲಿ ಅನೇಕ ಪೋಷಕಾಂಶಗಳು ಇವೆ. ಅದರಲ್ಲೂ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳನ್ನು ನಿಯಂತ್ರಿಸುವ ಔಷಧ ಗುಣ ಈ ಎಲೆಗಳಲ್ಲಿ ಇವೆ. ಇದರ ಬಗ್ಗೆ ವಿವಿಧ ಕಡೆಗಳಲ್ಲಿ ಮಾಹಿತಿ ಸಂಗ್ರಹಿಸಿರುವ ರೈತರು ಸೊಂಪಾಗಿ ಬೆಳೆದಿರುವ ಎಲೆಗಳನ್ನು ಕತ್ತರಿಸಿ, ಎಂಟರಿಂದ ಹತ್ತು ದಿನಗಳ ಕಾಲ ನೆರಳಲ್ಲಿ ಒಣಗಿಸಿ, ಬಳಿಕ ಪುಡಿ ಮಾಡುತ್ತಾರೆ. ಈ ಪುಡಿಯಲ್ಲಿ ಬಿ-6, ಇ, ಕೆ ಸೇರಿದಂತೆ ವಿವಿಧ ಬಗೆಯ ವಿಟಮಿನ್ಗಳಿವೆ.

ಇನ್ನು ಇದರಲ್ಲಿ ಪ್ರೋಟಿನ್, ಪೊಟ್ಯಾಸಿಯಂ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಸಾಕಷ್ಟು ಪ್ರಮಾಣದಲ್ಲಿ ಇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ವಿಟಾಮಿನ್ ಸಿ ಶೇ. 380 ರಷ್ಟು ಇದೆ. ಈ ಪುಡಿಯನ್ನು ಸೇವಿಸುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದಲ್ಲದೆ ದೇಹದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೇ ಹೃದಯ ಸಂಬಂಧಿ, ಕ್ಯಾನ್ಸರ್ ರೋಗವನ್ನು ತಡೆಯಬಹುದು. ಜೀರ್ಣ ಪ್ರಕ್ರಿಯೆಯೂ ಹೆಚ್ಚಾಗುವುದಲ್ಲದೇ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ.

ಉತ್ತಮ ಬೆಲೆಗೆ ಪುಡಿ ಮಾರಾಟ; ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕೆ ಪುಡಿ ಮಾಡಿದ ಬಳಿಕ 50, 100 ಗ್ರಾಂ ಡಬ್ಬಿಯಲ್ಲಿ ಶೇಖರಿಸಿ, ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬೇಕೆಂದರೆ ಕೇಜಿಗಟ್ಟಲೇ ಕೂಡ ನೀಡಲಾಗುತ್ತಿದೆ. ಇದೀಗ ಕೇಜಿಗೆ 1,000 ದಿಂದ 1,200 ರೂಪಾಯಿ ದರ ನೀಡಿ ಅನೇಕರು ಈ ಪುಡಿಯನ್ನು ಖರೀದಿಸುತ್ತಿದ್ದಾರೆ. ಪುಡಿಯನ್ನು ನೀರಿನ ಜೊತೆ ಸೇವಿಸಬಹುದು. ಚಹಾ ಪುಡಿಯೊಂದಿಗೆ ಮಿಶ್ರಣ ಮಾಡಿ, ಚಹಾದೊಂದಿಗೆ ಸೇವಿಸಬಹುದು. ಹೀಗಾಗಿ ಬೆಂಗಳೂರು, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಿಗೆ ಸಾಗಾಟವಾಗುತ್ತಿದೆ.

ತೋಟಗಾರಿಕಾ ಇಲಾಖೆಯಿಂದಲೂ ರೈತರಿಗೆ ಮಾಹಿತಿ ಅನೇಕ ರೈತರು ಈಗಾಗಲೇ ಪುಡಿಯ ಮಾರಾಟ ಆರಂಭಿಸಿದ್ದು, ಪುಡಿ ಮಾಡಲು ಆಸಕ್ತಿ ತೋರುತ್ತಿರುವ ಮತ್ತಷ್ಟು ರೈತರ ನೆರವಿಗೆ ತೋಟಗಾರಿಕಾ ಇಲಾಖೆ ಮುಂದೆ ಬಂದಿದೆ. ತೋಟಗಾರಿಕಾ ಇಲಾಖೆಯೂ ಇದಕ್ಕೆ ಸಾಥ್ ನೀಡುತ್ತಿದೆ. ಆಸಕ್ತಿ ತೋರಿಸುವ ರೈತರ ಜಮೀನುಗಳಿಗೆ ಹೋಗಿ ಸ್ವತಃ ಅಧಿಕಾರಿಗಳೇ ಮಾಹಿತಿಯನ್ನು ನೀಡುತ್ತಿದ್ದಾರೆ. ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆ ಮಾತನಾಡಿದ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಯೋಗಿ, ಪೇರಲೆ ಎಲೆಯಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶ ಇರುತ್ತದೆ. ಹೀಗಾಗಿ ಈ ಎಲೆಯ ಪುಡಿಯನ್ನು ಸೇವಿಸುವುದರಿಂದ ಸಾಕಷ್ಟು ಅನುಕೂಲತೆಗಳಿವೆ. ರೈತರು ಕೂಡ ಪೇರಲೆ ಎಲೆಯಿಂದ ಮತ್ತೊಂದು ಆದಾಯದ ಮೂಲಕವನ್ನು ಕಂಡುಕೊಳ್ಳಬಹುದು. ಇಲಾಖೆ ವತಿಯಿಂದಲೂ ರೈತರಿಗೆ ಬೇಕಾಗಿರುವ ಎಲ್ಲ ಮಾಹಿತಿ ಹಾಗೂ ಸಹಾಯವನ್ನು ನೀಡಲಾಗುತ್ತಿದೆ ಅಂತಾ ತಿಳಿಸಿದ್ದಾರೆ.

ನಮ್ಮ ತಂದೆ ಪುಡಿ ಮಾಡುವುದನ್ನು ಆರಂಭಿಸಿದರು. ನಾವು ಕೂಡ ಮುಂದುವರೆಸಿದ್ದೇವೆ. ಈ ಪುಡಿಯಲ್ಲಿನ ವಿಶೇಷ ಪೋಷಕಾಂಶ ಹಾಗೂ ಔಷಧೀಯ ಗುಣಗಳು ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಅದರಲ್ಲೂ ಬಿಪಿ ಮತ್ತು ಮಧುಮೇಯ ಕಾಯಿಲೆಗೆ ಈ ಪುಡಿ ರಾಮಬಾಣ. ಅನೇಕರು ನಮ್ಮ ಬಳಿ ಪುಡಿ ಒಯ್ದು ಪರೀಕ್ಷೆ ಮಾಡಿದ್ದಾರೆ. ಅವರಿಗೆ ಸಕ್ಕರೆ ಕಾಯಿಗೆ ಹಾಗೂ ರಕ್ತದೊತ್ತಡದ ಸಮಸ್ಯೆ ಕಡಿಮೆಯಾಗಿದೆ ಅಂತ ರೈತ ರಾಜೇಶ ವಿಭೂತಿ ಅಭಿಪ್ರಾಯಪಟ್ಟರು.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಮೇಕೆದಾಟು ಜಲಾಶಯ ನಿರ್ಮಾಣ ವಿವಾದ; ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ಅಯ್ಯಪ್ಪ ಸ್ವಾಮಿ ಭಕ್ತರಿಂದ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ; ಇಲ್ಲಿದೆ ವಿಡಿಯೋ

Published On - 12:37 pm, Mon, 3 January 22