ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾರಿಗೊಳಿಸಿದ್ದ ಸೋಲಾರ್ ವಿದ್ಯುತ್ ಯೋಜನೆಯ ತನಿಖೆ ನಡೆಸಲು ಎಸಿಬಿಗೆ ಸೂಚನೆ ನೀಡಿದ ರಾಜ್ಯಪಾಲರು; ವಿಶ್ರಾಂತ ಕುಲಪತಿಗೆ ಢವಢವ
ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಅಂತಾ ಜಾರಿಗೊಳಿಸಿದ್ದ ಸೋಲಾರ್ ವಿದ್ಯುತ್ ಯೋಜನೆಯಿಂದ ಇದುವರೆಗೂ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಯಾಗಿಲ್ಲ.
ಧಾರವಾಡ: ಯಾವುದೇ ಯೋಜನೆ ಇರಲಿ ಅದರ ಸಾಧಕ-ಬಾಧಕಗಳ ಬಗ್ಗೆ ಮೊದಲಿಗೆ ಯೋಚಿಸಬೇಕು. ಆ ಯೋಜನೆಯ ಅವಶ್ಯಕತೆ ಎಷ್ಟರಮಟ್ಟಿಗೆ ಇದೆ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಆ ಯೋಜನೆಯಿಂದ ಲಾಭವಾಗುತ್ತದೆ. ಇಲ್ಲವಾದಲ್ಲಿ ಸಾರ್ವಜನಿಕರ ಹಣ ಪೋಲಾಗಿ ಹೋಗುತ್ತದೆ. ಹೀಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಜಾರಿಗೊಳಿಸಿದ್ದ ಯೋಜನೆಯೊಂದು ಹೇಗೆಲ್ಲಾ ಉಪಯೋಗಕ್ಕೆ ಬಾರದಂತಾಗುತ್ತದೆ ಅನ್ನುವುದಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾರಿಗೊಳಿಸಿದ್ದ ಯೋಜನೆಯೇ ಸಾಕ್ಷಿಯಾಗಿದೆ.
ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ ಅಂತಾ ಜಾರಿಗೊಳಿಸಿದ್ದ ಸೋಲಾರ್ ವಿದ್ಯುತ್ ಯೋಜನೆಯಿಂದ ಇದುವರೆಗೂ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಯಾಗಿಲ್ಲ. ಇದರಲ್ಲಿ ಅಕ್ರಮ ನಡೆದಿದೆ ಅಂತಾ ಆರೋಪಿಸಿ ಕೆಲವರು ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆಯ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಿಂದ ಕವಿವಿಯ ವಿಶ್ರಾಂತ ಕುಲಪತಿ ಡಾ. ಎಚ್ಬಿ ವಾಲೀಕಾರ್ ಸೇರಿ ಅನೇಕರಿಗೆ ಢವಢವ ಶುರುವಾಗಿದೆ.
ಏನಿದು ಸೋಲಾರ್ ಫಲಕ ಅಳವಡಿಕೆ ಯೋಜನೆ? ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಚೇರಿ ಮೇಲೆ 2014 ರಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿತ್ತು. ಇದಕ್ಕಾಗಿ ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿ ಹಾಕಲಾಗಿತ್ತು. ಈ ಫಲಕಗಳನ್ನು ಅಳವಡಿಸಲು ಕಾರಣವೂ ಇತ್ತು. ಪ್ರತಿ ತಿಂಗಳು ವಿಶ್ವವಿದ್ಯಾಲಯ ಸುಮಾರು ಹತ್ತು ಲಕ್ಷ ರೂಪಾಯಿಯಷ್ಟು ಬಿಲ್ಲನ್ನು ವಿದ್ಯುತ್ ಬಿಲ್ಗಾಗಿ ಖರ್ಚು ಮಾಡುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿ, ಆ ಮೂಲಕ ಇಡೀ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಪೂರೈಸಲು ಈ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಆದರೆ ಈ ಫಲಕಗಳನ್ನು ಅಳವಡಿಸಿ ಏಳು ವರ್ಷಗಳೇ ಉರುಳಿದರೂ ಇದುವರೆಗೂ ಇದರಿಂದ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ಆಗಿಲ್ಲ. ಇದೇ ಕಾರಣಕ್ಕೆ ಈ ಯೋಜನೆಯಲ್ಲಿ ಅಕ್ರಮ ನಡೆದಿದೆ ಅಂತಾ ಅನೇಕರು ಆರೋಪಿಸಿ, ವಿವಿಧ ಕಡೆಗಳಲ್ಲಿ ದೂರು ಕೂಡ ನೀಡಿದ್ದರು. ಈ ಹಿನ್ನೆಲೆ ಇದರಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿದ್ದಾರೆ. 7 ವರ್ಷಗಳ ಹಿಂದೆ ನಡೆದ ಈ ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದು, ನಿವೃತ್ತರಾಗಿರುವ ಕುಲಪತಿ ಡಾ. ಎಚ್ ಬಿ ವಾಲೀಕಾರ್ ಸೇರಿದಂತೆ ಮೂವರಲ್ಲಿ ತಳಮಳ ಶುರುವಾಗಿದೆ.
ಡಾ ಎಚ್ ಬಿ ವಾಲೀಕಾರ್ ವೇಳೆಯಲ್ಲಿ ನಡೆದಿದ್ದ ಕಾಮಗಾರಿ 2014ರಲ್ಲಿ ಪ್ರೊ. ಎಚ್ ಬಿ ವಾಲೀಕಾರ್ ಕುಲಪತಿಯಾಗಿದ್ದ ಸಂದರ್ಭದಲ್ಲಿ ಕವಿವಿ ಆವರಣದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. 1,05,99,000 ರೂ. ವೆಚ್ಚದಲ್ಲಿ 10 ವರ್ಷಗಳ ಗ್ಯಾರಂಟಿಯೊಂದಿಗೆ ಟೆಕ್ಮಾರ್ಕ್ ಎಂಬ ಕಂಪನಿಗೆ 100 ಕಿಲೋ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ನಿರ್ಮಿಸಲು ವಿವಿಧ ಷರತ್ತುಗಳೊಂದಿಗೆ ಗುತ್ತಿಗೆ ನೀಡಲಾಗಿತ್ತು. 2020ರ ವರೆಗೆ ಒಂದು ಮೆಗಾವ್ಯಾಟ್ ಉತ್ಪಾದನೆಯಾಗಿರಲಿಲ್ಲ. ಆದರೂ ಕಂಪನಿಗೆ ಪೂರ್ಣ ಹಣ ಪಾವತಿ ಮಾಡಲಾಗಿತ್ತು. 2014ರ ಫೆಬ್ರವರಿಯಲ್ಲಿ 36.92 ಲಕ್ಷ ರೂ. ಮುಂಗಡ ಹಣ ಪಾವತಿಸಲಾಗಿತ್ತು. ಸೌರ ವಿದ್ಯುತ್ ಘಟಕದ ನಿರ್ವಹಣೆಯನ್ನು ಪ್ರಾಯೋಗಿಕವಾಗಿ ಪರೀಕ್ಷಿಸದೇ, ವಿದ್ಯುತ್ ಉತ್ಪಾದಿಸದಿದ್ದರೂ ಬಾಕಿ ಹಣ 69.07 ಲಕ್ಷ ರೂ. ಪಾವತಿಸಲಾಗಿತ್ತು. ವಿಶ್ವವಿದ್ಯಾಲಯದ ಅನುದಾನ ಸದ್ಬಳಕೆ ಮಾಡದೇ ಭ್ರಷ್ಟಾಚಾರ ಎಸಗಲಾಗಿದೆ ಎಂದು ಆರೋಪಿಸಿ, ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರು ಕಾನೂನು ಸಮರ ಸಾರಿದ್ದರು.
ವಿಶ್ವವಿದ್ಯಾಲಯದಲ್ಲಿ ನಡೆದ ಹಣಕಾಸಿನ ಅವ್ಯವಹಾರವನ್ನು ಹೊರಗೆ ತಂದು ತಪ್ಪಿತಸ್ಥರಿಗೆ ಶಾಸ್ತಿ ಮಾಡಲು ಉದ್ದೇಶಿಸಿದ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸದಸ್ಯರಾದ ಈರೇಶ ಅಂಚಟಗೇರಿ ಹಾಗೂ ಕೆ ಎಸ್ ಜಯಂತ್ ಅವರು 2020ರ ಡಿ. 30ರಂದು ಎಸಿಬಿಗೆ ದೂರು ನೀಡಿದ್ದರು. ಅಂದಿನ ಕುಲಪತಿ ಪ್ರೊ. ಎಚ್ ಬಿ ವಾಲೀಕಾರ, ನಿವೃತ್ತ ಕುಲಸಚಿವೆ ಡಾ. ಸಿಎಸ್ ಕಣಗಲಿ ಹಾಗೂ ನಿವೃತ್ತ ರೆಸಿಡೆಂಟ್ ಇಂಜಿನಿಯರ್ ಬಗಲಿ ವಿರುದ್ಧ ತನಿಖೆಗೆ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದೀಗ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಎಸಿಬಿ ತನಿಖೆ ನಡೆಸಲು ಅನುಮತಿ ನೀಡಿ ಆದೇಶಿಸಿದ್ದಾರೆ. ಇದರಿಂದಾಗಿ ಅನೇಕರಿಗೆ ತಳಮಳ ಶುರುವಾಗಿದೆ.
ಅನೇಕ ಬಾರಿ ದೂರು ನೀಡಿದ್ದರೂ ಗಮನ ಹರಿಸದ ಹಾಲಿ ಕುಲಪತಿ ಹಲವಾರು ಬಾರಿ ಅನೇಕರು ಈ ಅವ್ಯವಹಾರದ ಬಗ್ಗೆ ದನಿ ಎತ್ತಿದ್ದರು. ಈಗಿನ ಕುಲಪತಿ ಡಾ. ಕೆ ಬಿ ಗುಡಸಿ ಅವರಿಗೆ ದೂರನ್ನು ಕೂಡ ನೀಡಿದ್ದರು. ಕೆಲ ತಿಂಗಳ ಹಿಂದೆ ಸಿಂಡಿಕೇಟ್ ಮಾಜಿ ಸದಸ್ಯ ಕೆಎಸ್ ಜಯಂತ್ ವಿದ್ಯುತ್ ಉತ್ಪಾದನೆಯಾದ ಕುರಿತು ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಕೇಳಿದ್ದರು. ಈ ಸೋಲಾರ್ ಘಟಕದಿಂದ ಸಮರ್ಪಕ ವಿದ್ಯುತ್ ಉತ್ಪಾದನೆಯಾಗಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಾಲಿ ಕುಲಪತಿ ಪ್ರೊ ಕೆ ಬಿ ಗುಡಸಿ ಅವರನ್ನು ಒತ್ತಾಯಿಸಿದ್ದರು. ಅವರು ನಿರ್ಲಕ್ಷ್ಯ ವಹಿಸಿದ್ದರಿಂದ ಸಿಂಡಿಕೇಟ್ ಸದಸ್ಯರು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ರಾಜ್ಯಪಾಲರಿಗೂ ದೂರು ನೀಡಿದ್ದರು. ಇದೆಲ್ಲದರ ಪರಿಣಾಮ ಇದೀಗ ಎಸಿಬಿಗೆ ತನಿಖೆ ನಡೆಸಲು ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ತನಿಖೆ ಶುರು ಮಾಡಿದ ಎಸಿಬಿ ಇಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಎಸಿಬಿ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ವಿವಿ ಕಚೇರಿಗೆ ತೆರಳಿ ಸೋಲಾರ್ ಪ್ಯಾನೆಲ್ಗಳ ಮಾಹಿತಿಯನ್ನು ಪಡೆದಿರುವ ಅಧಿಕಾರಿಗಳು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಮಹಾಂತೇಶ ಜಿದ್ದಿ ನೇತ್ರತ್ವದ ತಂಡ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿವಿಧ ಮಾಹಿತಿಯನ್ನು ಕಲೆ ಹಾಕಿದೆ. ಮುಂದಿನ ದಿನಗಳಲ್ಲಿ ಹಲವಾರು ಬಾರಿ ಭೇಟಿ ನೀಡಿ, ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ.
ಇಷ್ಟೊಂದು ಹಣ ಖರ್ಚು ಮಾಡಿ ಯೋಜನೆ ಜಾರಿ ಮಾಡಿದ್ದು ಯಾಕೆ? ಕೋಟಿ ರೂಪಾಯಿ ಖರ್ಚು ಮಾಡಿ ಈ ಯೋಜನೆ ಜಾರಿ ಮಾಡಿದ್ದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ನೀಡುವುದಲ್ಲದೇ ಹೆಚ್ಚಿನ ವಿದ್ಯುತ್ನ ಹೆಸ್ಕಾಂಗೆ ಮಾರಾಟ ಮಾಡಿ, ವಿಶ್ವವಿದ್ಯಾಲಯಕ್ಕೆ ಆರ್ಥಿಕವಾಗಿ ಅನುಕೂಲ ಮಾಡಿಕೊಡಲು. ಆದರೆ ಇಷ್ಟು ವರ್ಷಗಳಾದರೂ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಯಾಗಿಲ್ಲ ಅಂದರೆ ಹೇಗೆ? ಹೀಗಾಗಿ ಇದರಲ್ಲಿ ಅಕ್ರಮ ನಡೆದಿದೆ ಅನ್ನೋದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಇದೇ ಕಾರಣಕ್ಕೆ ವಿಶ್ವವಿದ್ಯಾಲಯ ಉಳಿಸಿ ಸಮಿತಿ ವತಿಯಿಂದ ನಾನು ಮತ್ತು ಜಯಂತ್ ಕೆಎಸ್ ಸೇರಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದರ ಫಲವಾಗಿ ಇದೀಗ ರಾಜ್ಯಪಾಲರು ಎಸಿಬಿ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದರಿಂದಾಗಿ ಸಮಾಧಾನವಾಗಿದೆ. ಆದಷ್ಟು ಬೇಗನೇ ಅಧಿಕಾರಿಗಳು ತನಿಖೆ ನಡೆಸಿ, ಇದರಲ್ಲಿ ಆಗಿರಬಹುದಾದ ಆಕ್ರಮವನ್ನು ಬಯಲಿಗೆ ಎಳೆಯಬೇಕು ಅಂತ ಹು-ಧಾ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಹೇಳಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿವಿಯ ಕುಲಪತಿ ಡಾ. ಕೆಬಿ ಗುಡಸಿ, ಎಸಿಬಿ ತನಿಖೆಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅಧಿಕಾರಿಗಳು ಈಗಾಗಲೇ ಅನೇಕ ಮಾಹಿತಿಗಳನ್ನು ಕೇಳಿದ್ದಾರೆ. ಅವರಿಗೆ ಎಲ್ಲ ರೀತಿಯ ಮಾಹಿತಿ ಒದಗಿಸಿದ್ದೇವೆ. ಮತ್ತೆ ಹೆಚ್ಚಿನ ಮಾಹಿತಿ ಕೇಳಿದರೆ ಅವುಗಳನ್ನು ಕೂಡ ನೀಡಲಾಗುತ್ತದೆ. ತನಿಖಾ ಅಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಅಂತಾ ಹೇಳಿದ್ದಾರೆ.
ವರದಿ: ನರಸಿಂಹಮೂರ್ತಿ ಪ್ಯಾಟಿ
ಇದನ್ನೂ ಓದಿ
Published On - 2:09 pm, Sun, 2 January 22