IND vs ENG: ಬೆನ್ ಡಕೆಟ್ ವಿಕೆಟ್ ಉರುಳಿಸಿದ ಸಿರಾಜ್ಗೆ ಬೀಳುತ್ತಾ ದಂಡ? ವಿಡಿಯೋ
Mohammed Siraj's Lords Celebration: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನ, ಭಾರತದ ವೇಗಿ ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಪಡೆದಿದ್ದಾರೆ. ಆದರೆ, ಅವರ ಆಕ್ರಮಣಕಾರಿ ಸಂಭ್ರಮಾಚರಣೆ ಐಸಿಸಿ ನಿಯಮಗಳನ್ನು ಉಲ್ಲಂಘಿಸಿರಬಹುದು. ಹೀಗಾಗಿ ಮ್ಯಾಚ್ ರಿಫೇರಿಯಿಂದ ದಂಡ ವಿಧಿಸುವ ಸಾಧ್ಯತೆಯಿದೆ. ಸಿರಾಜ್ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭವಾಗಿದೆ. ಮೊದಲ ಸೆಷನ್ನಲ್ಲಿ ಟೀಂ ಇಂಡಿಯಾ ವೇಗಿಗಳು ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ವೇಗಿ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ನ ಇಬ್ಬರು ಆಟಗಾರರ ವಿಕೆಟ್ ಕಬಳಿಸಿ ಅಪಾಯಕಾರಿಯಾಗಿ ಕಾಣಿಸುತ್ತಿದ್ದಾರೆ. ಆದರೆ ಸಿರಾಜ್ ಮೊದಲ ವಿಕೆಟ್ ಉರುಳಿಸಿದ ಬಳಿಕ ಮಾಡಿದ ಆಕ್ರಮಣಕಾರಿ ಸಂಭ್ರಮಾಚರಣೆ ಅವರಿಗೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ. ಏಕೆಂದರೆ ಸಿರಾಜ್ ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ಬ್ಯಾಟ್ಸ್‌ಮನ್ ಮುಖದ ಸಮೀಪ ಹೋಗಿ ಸಂಭ್ರಮಾಚರಣೆ ಮಾಡಿದ್ದು, ಮ್ಯಾಚ್ ರಿಫೇರಿ ಸಿರಾಜ್ಗೆ ದಂಡ ವಿಧಿಸುವ ಸಾಧ್ಯತೆಗಳಿವೆ.
ವಾಸ್ತವವಾಗಿ ಮೂರನೇ ದಿನದ ಆಟ ಮುಗಿಯುವ ಮೊದಲು ಭಾರತ ಮತ್ತು ಇಂಗ್ಲೆಂಡ್ ಆಟಗಾರರ ನಡುವೆ ವಾಗ್ವಾದ ನಡೆದು ಅದರ ಪರಿಣಾಮ ನಾಲ್ಕನೇ ದಿನವೂ ಕಂಡುಬಂದಿತು. ಸಿರಾಜ್ ಡಕೆಟ್ ವಿಕೆಟ್ ಪಡೆದ ತಕ್ಷಣ ಅವರ ಕಡೆಗೆ ತೆರಳಿ ಆಕ್ರಮಣಕಾರಿಯಾಗಿ ಆಚರಿಸಲು ಪ್ರಾರಂಭಿಸಿದರು. ಈ ದೃಶ್ಯವನ್ನು ನೋಡಿದ ಅಭಿಮಾನಿಗಳು ಶನಿವಾರ ನಡೆದ ವಿವಾದವನ್ನು ನೆನಪಿಸಿಕೊಂಡರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.