ಉಗ್ರ ನಾಸಿರ್ನನ್ನು ಎಸ್ಕೆಫ್ ಮಾಡಿಸಲು ಫಾತಿಮಾ ತಡರಾತ್ರಿ ಪ್ಲಾನ್: ಫೋನ್ನಲ್ಲಿ ಗಂಟೆಗಟ್ಟಲೇ ಮಾತುಕತೆ
ಉಗ್ರ ನಾಸಿರ್ಗೆ ಸಹಾಯ ಮಾಡುತ್ತಿದ್ದ ಮೂವರನ್ನ ಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಬಳಿ ದೊರೆತ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಅಂಶಗಳು ಬಹಿರಂಗಗೊಂಡಿವೆ. ಎನ್ಐಎ ವಿಚಾರಣೆ ವೇಳೆ ಏನೆಲ್ಲ ಅಂಶಗಳು ಬಹಿರಂಗಗೊಂಡಿವೆ? ಇಲ್ಲಿದೆ ವಿವರ

ಬೆಂಗಳೂರು, ಜುಲೈ 13: ಉಗ್ರ ನಾಸಿರ್ಗೆ (Nasir) ಸಹಾಯ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ. ಮೂವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಆರು ದಿನ ಕಸ್ಟಡಿಗೆ ಪಡೆಯಲಾಗಿದೆ. 4ನೇ ದಿನದ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಾಗಿವೆ. ತಲೆ ಮರೆಸಿಕೊಂಡಿರುವ ಜುನೈದ್ ಮತ್ತು ಈತನ ತಾಯಿ ಫಾತಿಮಾ ತಡರಾತ್ರಿ ಫೋನ್ನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಿದ್ದರು ಎಂಬವುದು ತನಿಖೆ ವೇಳೆ ಗೊತ್ತಾಗಿದೆ.
ದಕ್ಷಿಣ ಭಾರತದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣಗಳ ಉಗ್ರ ಜುನೈದ್ ಸದ್ಯ ಗಲ್ಫ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಈತನಿಗಾಗಿ ಎನ್ಐಎ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಇದರ ನಡುವೆ ಜೈಲಿನಲ್ಲಿರುವ ಉಗ್ರ ನಾಸಿರ್ಗೆ ಸಹಾಯ ಮಾಡುತ್ತಿದ್ದ ಮೂವರನ್ನು ಎನ್ಐಎ ಬಂಧಿಸಿದೆ. ಡಾ ನಾಗರಾಜ್, ASI ಚಾನ್ ಪಾಷಾ, ಜುನೈದ್ ತಾಯಿ ಫಾತಿಮಾಳನ್ನು ಬಂಧಿಸಲಾಗಿದೆ. ಆರು ದಿನಗಳ ಹಿಂದೆ ಫಾತಿಮಾ ಮನೆ ಮೇಲೆ ದಾಳಿ ಮಾಡಿದ್ದಾಗ ಅಲ್ಲಿ ಸಿಕ್ಕ ಮೊಬೈಲ್ ಫೋನ್, ಹಣ, ಕಾಗದ ಪತ್ರಗಳನ್ನು ಎನ್ಐಎ ವಶಕ್ಕೆ ಪಡೆದಿದೆ. ವಶ ಪಡಿಸಿಕೊಂಡ ಮೊಬೈಲ್ ಸಿಡಿಆರ್ ತೆಗೆಸಿದ್ದ ಎನ್ಐಎಗೆ ಮಾಹಿತಿಯೊಂದು ಸಿಕ್ಕಿದೆ.
ಫಾತಿಮಾ ಪುತ್ರ ಜುನೈದ್ನ ಜೊತೆಗೆ ತಡರಾತ್ರಿ ಎರಡು ಗಂಟೆ ಸುಮಾರಿಗೆ ಕರೆ ಮಾಡಿ ಸುಮಾರು 40 ನಿಮಿಷ ಮಾತನಾಡಿದ್ದಾಳೆ. ಜುನೈದ್ ಹೇಳುತ್ತಿದ್ದ ಪ್ಲಾನ್ಗಳನ್ನು ಫಾತಿಮಾ ಎಎಸ್ಐ ಚಾನ್ ಪಾಷಾನಿಗೆ ಹೇಳುತ್ತಿದ್ದಳು. ಚಾನ್ ಪಾಷಾ, ವೈದ್ಯ ನಾಗರಾಜ್ ಮೂಲಕ ನಾಸಿರ್ಗೆ ತಿಳಿಸುತ್ತಿದ್ದನು. ಈ ಮಾಹಿತಿ ನಾಸಿರ್ಗೆ ತಿಳಿಸಲು ಲಕ್ಷ ಲಕ್ಷ ಹಣವನ್ನು ಚಾನ್ ಪಾಷಾ ಮತ್ತು ನಾಗರಾಜ್ ಪಡೆದಿದ್ದರು ಎಂಬುವುದು ತನಿಖೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟ ಮಾಸ್ಟರ್ ಮೈಂಡ್ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!
ಉಗ್ರ ನಾಸಿರ್ ಪರಾರಿಯಾಗಲು ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, 2023 ರಲ್ಲಿ ಸಿಸಿಬಿ ಪೊಲೀಸರು ಮಾಡಿದ್ದ ದಾಳಿ ಇದೆಲ್ಲವನ್ನು ಹಾಳು ಮಾಡಿತ್ತು. ಉಗ್ರ ನಾಸಿರ್ ಪರಾರಿಯಾಗಲು ತಯಾರು ಮಾಡಿದ್ದ ಜೀವಂತ ಗ್ರೆನೇಡ್ ಜಪ್ತಿ ಮಾಡಿ, ಐವರನ್ನು ಸಿಸಿಬಿ ಬಂಧಿಸಿತ್ತು. ತನಿಖೆಯ ಮುಂದುವರೆದ ಭಾಗದಲ್ಲಿ ಎನ್ಐಎ ಎಂಟ್ರಿಯಾಗಿ ಸದ್ಯ ಮೂವರು ಮೀಡಿಯೇಟರ್ಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಿದೆ. ಇನ್ನೂ ಎರಡು ದಿನ ಮೂವರೂ ಎನ್ಐಎ ಕಸ್ಟಡಿಯಲ್ಲಿ ಇರಲಿದ್ದು ಇನ್ನೂ ಏನೆಲ್ಲ ಪ್ಲಾನ್ ಮಾಡಿಕೊಂಡಿದ್ದರು ಎಂಬುವುದು ಎನ್ಐಎ ಪತ್ತೆ ಹಚ್ಚಲಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 pm, Sun, 13 July 25








