ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ಬಂದಿಲ್ಲ! ಮತ್ಯಾಕೆ? ವಿವರಿಸಿದ ಡಿಸಿಎಂ ಡಿಕೆ ಶಿವಕುಮಾರ್
ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಕೇಂದ್ರದ ವಿವಿಧ ಸಚಿವರೊಂದಿಗೆ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಸಂಪುಟ ಪುನರ್ ರಚನೆ ಅಥವಾ ಕಾಂಗ್ರೆಸ್ ಭಿನ್ನಾಭಿಪ್ರಾಯಗಳ ಕುರಿತು ಚರ್ಚೆಗೆ ದೆಹಲಿಗೆ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದು, ನೀರಾವರಿ ಯೋಜನೆಗಳ ಬಗ್ಗೆ ನಡೆದ ಚರ್ಚೆಯ ವಿವರ ಬಹಿರಂಗಪಡಿಸಿದ್ದಾರೆ.

ನವದೆಹಲಿ, ಜುಲೈ 9: ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬಂದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಕೇಂದ್ರದ ವಿವಿಧ ಸಚಿವರ ಜತೆ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಮಾತುಕತೆ ನಡೆಸಿದ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು. ಅಭಿವೃದ್ಧಿ ಯೋಜನೆಗಳ ಸಲುವಾಗಿ ಚರ್ಚಿಸಲು ನಾವು ಬಂದಿದ್ದೇವೆ. ರಾಹುಲ್ ಗಾಂಧಿ (Rahul Gandhi) ಅವರ ಭೇಟಿಗೂ ಸಮಯ ಕೋರಿದ್ದೇನೆ. ನಾಳೆ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಡಿಸಿಎಂ ಹಾಗೂ ಸಿಎಂ ದೆಹಲಿ ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಭಿನ್ನಮತ, ಸಂಪುಟ ಪುನರ್ ರಚನೆ ವಿಚಾರವಾಗಿ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಬಹುದು ಎಂದು ವರದಿಯಾಗಿತ್ತು. ಆದರೆ, ಇದೀಗ ಡಿಕೆ ಶಿವಕುಮಾರ್ ಅವರು ಆ ವರದಿಗಳನ್ನು ತಳ್ಳಿಹಾಕಿದ್ದಾರೆ.
ಸಂಪುಟ ಪುನರ್ ರಚನೆ ಕುರಿತು ಚರ್ಚಿಸಲು ನಾವು ದೆಹಲಿಗೆ ಬಂದಿಲ್ಲ. ಮೈಸೂರು ದಸರಾದಲ್ಲಿ ಏರ್ ಶೋ ಆಯೋಜನೆ ಬಗ್ಗೆ ಮನವಿ ಮಾಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಕೇಂದ್ರ ಸಚಿವರ ಜತೆ ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕೇಂದ್ರ ಜಲಶಕ್ತಿ, ಪರಿಸರ ಹಾಗೂ ಅರಣ್ಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಅರಣ್ಯ ಪ್ರದೇಶದ ಜಾಗ ಸ್ವಾಧೀನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸರ್ಕಾರ ತಕರಾರು ಹಾಕಿದೆ. ಗೋವಾ ತಕರಾರಿನ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೇಕೆದಾಟು ಯೋಜನೆ, ಕೃಷ್ಣ ನದಿ ನೀರು ವಿಚಾರವಾಗಿಯೂ ಚರ್ಚೆ ನಡೆದಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದರು.
ಎತ್ತಿನಹೊಳೆ ಯೋಜನೆಗೆ ಅನುದಾನ ಕೇಳಿದ್ದೇನೆ: ಡಿಕೆಶಿ
ಎತ್ತಿನಹೊಳೆ ಯೋಜನೆಗೆ ಅನುದಾನ ನೀಡುವಂತೆ ಕೇಂದ್ರ ಸಚಿವರ ಬಳಿ ಕೇಳಿದ್ದೇವೆ. ಇತರ ನೀರಾವರಿ ಯೋಜನೆಗಳಿಗೆ ನೀಡಬೇಕಿದ್ದ ಅನುದಾನಕ್ಕೆ ಮನವಿ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಂಗಳವಾರ ಭೇಟಿ ಮಾಡಿದ್ದೆ. ಅದೇ ರೀತಿ ಜಲಶಕ್ತಿ ಸಚಿವರನ್ನೂ ಭೇಟಿ ಮಾಡಿದ್ದೆ. ವಿ ಸೋಮಣ್ಣ ಕೂಡ ಜೊತೆಯಲ್ಲಿ ಇದ್ದರು. ಆ ನಂತರ ಪ್ರಲ್ಹಾದ್ ಜೋಶಿಯವರನ್ನು ಭೇಟಿಯಾಗಿದ್ದೇನೆ. ಅರಣ್ಯ ಹಾಗೂ ಪರಿಸರ ಸಚಿವರ ಬಳಿ, ಎತ್ತಿನಹೊಳೆ ಯೋಜನೆಯ ಮಾಹಿತಿ ನೀಡಿದ್ದೇನೆ. ತುಮಕೂರು ಹಾಗೂ ಹಾಸನ ಭಾಗದಲ್ಲಿ ಕೆಲಸ ನಿಂತಿತ್ತು. ಕಂದಾಯ ಭೂಮಿ ನಮ್ಮದು ಎಂದು ಹೇಳಿದ್ದರು. ಅದಕ್ಕೆ ಪರ್ಯಾಯ ವಾಗಿ ಭೂಮಿ ನೀಡಲಾಗಿದೆ. ಹೀಗಾಗಿ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದೆವು. ಆದರೆ ಮಾಡಿರಲಿಲ್ಲ. ಈಗ ಮತ್ತೆ ಮನವಿ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಳಸ, ಮಹದಾಯಿ ಬಗ್ಗೆಯೂ ಚರ್ಚೆ: ಡಿಕೆ ಶಿವಕುಮಾರ್
ಕಳಸ, ಮಹದಾಯಿ ಯೋಜನೆ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ನಾವು ಟೆಂಡರ್ ಕರೆದಿದ್ದೇವೆ. ಆಂಧ್ರ ಮತ್ತು ಗೋವಾದವರು ಶೊಕಾಸ್ ನೋಟಿಸ್ ನೀಡಿದ್ದಾರೆ. 2023 ರಲ್ಲಿ ನೋಟಿಸ್ ನೀಡಿದ್ದರು. ಅವರು ಯಾರು ನಮ್ಮ ರಾಜ್ಯಕ್ಕೆ ನೋಟಿಸ್ ನೀಡಲು? ನೀವು ಕೇಂದ್ರದವರು ಬೇಕಿದ್ದರೆ ಹೇಳಿ, ಹೇಗೆ ಎಲ್ಲಿ ಮಾಡಬೇಕು ಎಂಬುದಾಗಿ. ಅದರಂತೆಯೇ ಮಾಡುತ್ತೇವೆ ಎಂದಿರುವಿದಾಗಿ ಡಿಸಿಎಂ ತಿಳಿಸಿದರು.
ಕಳಸ, ಮಹದಾಯಿ ಯೋಜನೆ ವಿಚಾರವಾಗಿ ಕಾನೂನು ತಂಡದ ಜತೆಗೂ ಸಮಾಲೋಚನೆ ನಡೆಸಿದ್ದೇನೆ. ನಮ್ಮ ಸಿಎಂ ಗಮನಕ್ಕೆ ತರಲಾಗುತ್ತದೆ. ಸದ್ಯ ಟೆಂಡರ್ ಕರೆಯಲಾಗಿದೆ, ಕೆಲಸ ಆರಂಭಿಸಲಾಗುತ್ತದೆ. ಕಳಸ ಬಂಡೂರಿ ಕುಡಿಯುವ ನೀರಿನ ಯೋಜನೆ. ಅವರಿಗೆ ತೊಂದರೆ ಆಗಲ್ಲ. ನಮಗೆ ತೊಂದರೆ ನೀಡಬೇಡಿ ಎಂದಿದ್ದೇವೆ. ಇನ್ನು ಒಂದು ವಾರದಲ್ಲಿ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಮನಗರದ ಎಲ್ಲ ಶಾಸಕರಂತೆ ನಾನೂ ಸಹ ಶಿವಕುಮಾರ್ ಸಿಎಂ ಆಗುವುದನ್ನು ಬಯಸುತ್ತೇನೆ: ಯೋಗೇಶ್ವರ್
ಮೇಕೆದಾಟು ಯೋಜನೆ ಬಗ್ಗೆ ಈಗಾಗಲೇ ವರದಿ ನೀಡಬೇಕಿದೆ. ತಮಿಳುನಾಡಿಗೆ ಸಮಸ್ಯೆ ಆಗುತ್ತದೆಯೋ ಇಲ್ಲವೋ ಎಂದು ವರದಿ ಸಲ್ಲಿಸಬೇಕಿದೆ. ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಅದರ ಪ್ರಕಾರ ನಾವು ಮುಂದುವರಿಯುತ್ತಿದ್ದೇವೆ. ನಮಗಿಂತ ಹೆಚ್ಚು ನೀರು ತಮಿಳುನಾಡಿಗೆ ಹೋಗಲಿದ್ದು, ಅವರಿಗೇ ಸಹಾಯ ಆಗಲಿದೆ ಎಂಬುದಾಗಿ ಹೇಳಿದ್ದೆವೆ ಎಂದು ಅವರು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೂ ಅನುದಾನ ಕೇಳಿದ್ದೆವೆ. ಕೇಂದ್ರದವರು 5300 ಕೋಟಿ ರೂ. ಕೊಡುತ್ತೇವೆ ಎಂದಿದ್ದರು, ಆದರೆ ಇದುವರೆಗೂ ಬಂದಿಲ್ಲ. ಹಣ ಬರುವ ವರೆಗೂ ನನಗೆ ಗ್ಯಾರಂಟಿ ಇಲ್ಲ. ಕಾಂಗ್ರೆಸ್ ಸರ್ಕಾರ ಎಂದು ಕೊಡಲು ಮನಸು ಮಾಡುತ್ತಿಲ್ಲವೋ ಏನೋ ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.