ಬಿಜೆಪಿಯಲ್ಲಿ ಮತ್ತೆ ಸಕ್ರಿಯವಾದ ಭಿನ್ನರ ಬಣ: ಹುಟ್ಟು ಹಬ್ಬದ ನೆಪದಲ್ಲಿ ಶಕ್ತಿ ಪ್ರದರ್ಶನ, ಭಾರೀ ರಣತಂತ್ರ
ಕರ್ನಾಟಕದ ಬಿಜೆಪಿಯಲ್ಲಿನ ಬಂಡಾಯ ಬಣವು ದಾವಣಗೆರೆಯಲ್ಲಿ ಒಟ್ಟುಗೂಡಿ ತಮ್ಮ ಶಕ್ತಿ ಪ್ರದರ್ಶಿಸಿದೆ. ರಮೇಶ್ ಜಾರಕಿಹೊಳಿ ಮತ್ತು ಜಿಎಂ ಸಿದ್ದೇಶ್ವರ್ ನೇತೃತ್ವದ ಈ ಬಣವು ರೇಣುಕಾಚಾರ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದೆ. ಏನತನ್ಮಧ್ಯೆ, ಈ ಬೆಳವಣಿಗೆಗೆ ಪ್ರತಿಕ್ರಿಯಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಿರಾಕರಿಸಿದ್ದಾರೆ.

ಬೆಂಗಳೂರು, ಜುಲೈ 9: ಕರ್ನಾಟಕ ಬಿಜೆಪಿಯ (BJP) ಬಂಡಾಯ ಬಣ ಮತ್ತೆ ವರಸೆ ಶುರು ಮಾಡಿದೆ. ಎರಡು ದಿನ ಹಿಂದಷ್ಟೇ ಗೋಕಾಕ್ನಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಜೊತೆಗೆ ಜಾತ್ರೆಯಲ್ಲಿ ಸುತ್ತಾಡಿ, ಮನೆಯಲ್ಲಿ ರಹಸ್ಯ ತಂತ್ರ ಹೆಣೆದಿದ್ದ ತಂಡ ಈಗ ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ದಾವಣಗೆರೆಯಲ್ಲಿ ಮತ್ತೆ ಒಟ್ಟಾಗಿದೆ. ತಾರಕಕ್ಕೇರಿದ್ದ ದಾವಣಗೆರೆ ಬಿಜೆಪಿ ಬಣ ಬಡಿದಾಟಕ್ಕೆ ಮುಲಾಮು ಹಚ್ಚಲು ನಾಯಕರು ಯತ್ನಿಸಿದ್ದರು. ಆದರೆ, ದಾವಣಗೆರೆಯಲ್ಲಿ ಬಂಡಾಯಗಾರರ ಶಕ್ತಿ ಪ್ರದರ್ಶನ ನೋಡಿದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಭೆ ಯಶಸ್ವಿಯಾದಂತೆ ಕಾಣಿಸುತ್ತಿಲ್ಲ. ಮಾಜಿ ಸಂಸದ ಸಿದ್ದೇಶ್ವರ್ ಹುಟ್ಟುಹಬ್ಬದ ನಿಮಿತ್ತ ಮಂಗಳವಾರ ಬಂಡಾಯ ಬಣದಲ್ಲಿರುವ ನಾಯಕರೆಲ್ಲರೂ ಒಟ್ಟಾಗಿ ದಾವಣಗೆರೆಯಲ್ಲಿ ಸೇರಿದ್ದಾರೆ. ವೇದಿಕೆಯಲ್ಲಿ ಮಾತನಾಡಿದ ಜಿ.ಎಂ ಸಿದ್ದೇಶ್ವರ್, ಹಳೇ ಕಥೆ ಮೆಲುಕು ಹಾಕುವ ಮೂಲಕ ಪಕ್ಷ ಸಂಘಟನೆಯಲ್ಲಿ ತಮ್ಮದು ಪಾತ್ರ ಇದೆ ಎಂಬುದನ್ನು ನೆನಪಿಸಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಪರೋಕ್ಷವಾಗಿ ಕುಟುಕಿದರು.
ಅರವಿಂದ್ ಲಿಂಬಾವಳಿಯಂತೂ ಯಡಿಯೂರಪ್ಪ ವಿರುದ್ಧ ನೇರವಾಗಿಯೇ ಬೇಸರ ಹೊರಹಾಕಿದರು. ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಿದ್ದರು. ಮತ್ಯಾಕೆ ಬಂದರೋ, ಅದನ್ನ ಸಿದ್ದೇಶ್ವರ್ ಅವರೇ ಹೇಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಕುಮಾರ್ ಬಂಗಾರಪ್ಪ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಸಿದ್ದೇಶ್ವರ್ ಪತ್ನಿ ಸೋಲಿಗೆ ರೇಣುಕಾಚಾರ್ಯರೇ ಕಾರಣ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಸಿದ್ದೇಶ್ವರ್ ಬಣ ಬಿಗಿ ಪಟ್ಟು
ಹೀಗೇ ಒಂದು ಬಣ ರೇಣುಕಾಚಾರ್ಯ ವಿರುದ್ಧ ಕ್ರಮ ಆಗಲೇಬೇಕು ಅಂತ ಪಟ್ಟು ಹಿಡಿದು ಕುಳಿತಿದೆ. ಪ್ರಲ್ಹಾದ್ ಜೋಶಿ ಬಳಿ ಮಾತುಕತೆ ನಡೆಸಿದ ವೇಳೆಯೂ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಸಿದ್ದೇಶ್ವರ್ ಟೀಮ್ ಬೇಡಿಕೆ ಇಟ್ಟಿದೆ. ಹೀಗಾಗಿ ಸಿದ್ದೇಶ್ವರ್, ರೇಣುಕಾಚಾರ್ಯ ಜತೆಯಾಗಿ ಕೂರಿಸಿ ಮಾತುಕತೆ ಮಾಡಲು ಜೋಶಿ ಒಲವು ಹೊಂದಿದ್ದಾರೆ. ಹೀಗಿದ್ದರೂ ಸಿದ್ದೇಶ್ವರ್ ಮಾತ್ರ ಮೊದಲು ರೇಣುಕಾಚಾರ್ಯ ವಿರುದ್ಧ ಕ್ರಮ ಆಗಲೇಬೇಕು ಅಂತಿದ್ದಾರೆ.
ಒಂದು ಕಡೆ ದಾವಣಗೆರೆಯಲ್ಲಿ ಬಂಡಾಯ ನಾಯಕರು ಶಕ್ತಿ ಪ್ರದರ್ಶನ ಮಾಡುತ್ತಿದ್ದರೆ, ಅತ್ತ ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರಿನ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಬೆಳವಣಿಗೆ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ರೇಣುಕಾಚಾರ್ಯ ಮಾತ್ರ ವಿಜಯೇಂದ್ರ ಅವರನ್ನೇ ರಾಜ್ಯಧ್ಯಕ್ಷರಾಗಿ ಮುಂದುವರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಕೆಲ ಬಿಜೆಪಿ ನಾಯಕರು ಯಾಕೆ ಅತೃಪ್ತರೋ ಗೊತ್ತಿಲ್ಲ, ಸೈದ್ಧಾಂತಿಕವಾಗಿ ನಾವೆಲ್ಲ ತೃಪ್ತರು: ಸಿಟಿ ರವಿ
ರಾಜ್ಯದಲ್ಲಿ ಬಿಜೆಪಿ ಬಂಡಾಯ ಬಣ ವಿಜಯೇಂದ್ರ ಹಾಗೂ ತಂಡವನ್ನ ಹಣಿಯಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಡುವ ಮೂಲಕ, ವಿಜಯೇಂದ್ರಗೆ ಚೆಕ್ ಮೇಟ್ ಇಡಲು ಸಜ್ಜಾಗಿದೆ. ಮುಂದಿನ ಬೆಳವಣಿಗೆಗಳು ಹೇಗಿರಲಿವೆ ಎಂಬುದನ್ನು ಕಾದುನೋಡಬೇಕಿದೆ.







