AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದಲ್ಲಿ ಗೋಲ್ಡ್ ಲೋನ್ ಹೆಸರಲ್ಲಿ 70ಕ್ಕೂ ಹೆಚ್ಚು ಜನರಿಗೆ ಕೊಟ್ಯಂತರ ರೂ ವಂಚನೆ: ಮೂವರ ಬಂಧನ

ಮಂಡ್ಯ ಜಿಲ್ಲೆಯಲ್ಲಿ ಗೋಲ್ಡ್ ಲೋನ್ ಹೆಸರಲ್ಲಿ ಅಮಾಯಕರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಅನಘ ಗೋಲ್ಡ್ ಎಂಬ ಕಂಪನಿ ಮೂಲಕ 70ಕ್ಕೂ ಹೆಚ್ಚು ಜನರನ್ನು ವಂಚಿಸಿ, 3 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಂಚಿಸಲಾಗಿದೆ. ಸದ್ಯ ಮೂವರನ್ನು ಬಂಧಿಸಲಾಗಿದೆ.

ಮಂಡ್ಯದಲ್ಲಿ ಗೋಲ್ಡ್ ಲೋನ್ ಹೆಸರಲ್ಲಿ 70ಕ್ಕೂ ಹೆಚ್ಚು ಜನರಿಗೆ ಕೊಟ್ಯಂತರ ರೂ ವಂಚನೆ: ಮೂವರ ಬಂಧನ
ಜನರಿಗೆ ವಂಚಿಸಿದ ಕಂಪನಿ
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 09, 2025 | 7:51 AM

Share

ಮಂಡ್ಯ, ಜುಲೈ 09: ಮೈಕ್ರೋ ಫೈನಾನ್ಸ್ (Micro finance) ಕಂಪನಿಗಳು ಬಡವರ ಜೀವ ಹಿಂಡುತ್ತಿದ್ದರೆ ಮತ್ತೊಂದೆಡೆ ಗೋಲ್ಡ್ ಲೋನ್ ಹೆಸರಲ್ಲಿ ವಂಚನೆ (Fraud) ಮಾಡುವ ಕಂಪನಿಗಳು ತಲೆ ಎತ್ತಿವೆ. ಕಡಿಮೆ ಬಡ್ಡಿಗೆ ಚಿನ್ನಾಭರಣ ಅಡವಿಟ್ಟಿಸಿಕೊಂಡು ಹೆಚ್ಚಿನ ಸಾಲ ಕೊಡುತ್ತೇವೆ ಅಂತ ಮೋಸ ಮಾಡುವ ದಂಧೆ ಶುರುವಾಗಿದೆ. ಸಂಕಷ್ಟದಲ್ಲಿರುವ ಅಮಾಯಕರನ್ನೇ ಟಾರ್ಗೆಟ್ ಮಾಡಿ ದೋಖಾ ಮಾಡುತ್ತಿದ್ದ ಗ್ಯಾಂಗ್ ಇದೀಗ ಪೊಲೀಸರ ಬಲೆಗೆ ಬಿದ್ದಿದೆ.

ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಜನರ ಜೀವ ಹಿಂಡುತ್ತಿದ್ದು, ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಈಗಾಗಲೇ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಈ ನಡುವೆ ಗೋಲ್ಡ್ ಲೋನ್ ಹೆಸರಿನಲ್ಲಿ ವಂಚನೆ ಮಾಡುವ ದಂಧೆ ಶುರುವಾಗಿದ್ದು, ಅಮಾಯಕರನ್ನೇ ಟಾರ್ಗೆಟ್ ಮಾಡಿ ಮೋಸದ ಜಾಲಕ್ಕೆ ಕೆಡವುತ್ತಿದ್ದಾರೆ. ಜಿಲ್ಲೆಯಲ್ಲಿ ಅನಘ ಗೋಲ್ಡ್ ಎಂಬ ಹೆಸರಿನಲ್ಲಿ ನೂರಾರು ಜನರಿಗೆ ಖದೀಮರು ಟೋಪಿ ಹಾಕಿದ್ದಾರೆ.

ಟೆಲಿಕಾಲರ್ ಮೂಲಕ ಸಂಪರ್ಕ

ಸರ್ಕಾರ ದೃಢೀಕರಣಗೊಳಿಸಿರುವ ಬ್ಯಾಂಕ್‌ಗಳಲ್ಲಿ ಚಿನ್ನಾಭರಣಗಳನ್ನು ಅಡಿವಿಟ್ಟ ಜನರನ್ನು ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತೆ. ಬಳಿಕ ಈ ಗ್ಯಾಂಗ್‌ನವರು ಅಂತಹ ವ್ಯಕ್ತಿಗಳನ್ನು ಟೆಲಿಕಾಲರ್ ಮೂಲಕ ಸಂಪರ್ಕ ಮಾಡಿ, ನೀವು ಅಡವಿಟ್ಟಿರುವ ಚಿನ್ನಾಭರಣಗಳನ್ನು ಬಿಡಿಸಿ ನಾವು ನಿಮಗೆ 40 ರಿಂದ 50 ಪೈಸೆ ಬಡ್ಡಿಗೆ ಹಣ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಇಂತಹ ಮರುಳು ಮಾತುಗಳನ್ನು ನಂಬಿದ ಅಮಾಯಕ ಜನರು ಕಡಿಮೆ ಬಡ್ಡಿ ಆಸೆಗೆ ತಮ್ಮ ಒಡೆವೆಗಳನ್ನು ಬ್ಯಾಂಕ್‌ಗಳಲ್ಲಿ ಬಿಡಿಸಿ ಈ ಅನಘ ಗೋಲ್ಡ್‌ನಲ್ಲಿ ಇಟ್ಟಿದ್ದಾರೆ. ಇದಾದ ಹಲವು ತಿಂಗಳ ಬಳಿಕ ನಿಮ್ಮ ಸಾಲ ತೀರಿಸುತ್ತೇವೆ ನಮ್ಮ ಒಡವೆಗಳನ್ನು ವಾಪಸ್ಸು ಕೊಡಿ ಎಂದು ಜನರು ಕೇಳಿದಾಗ ಇಂದು, ನಾಳೆ, ನಾಡಿದ್ದು ಎಂದು ನೆಪ ಹೇಳಿ ಹಲವು ತಿಂಗಳು ಈ ಅನಘ ಗೋಲ್ಡ್ ಕಂಪನಿ ಆಟವಾಡಿಸಿದೆ. ನಂತರ ಇವರು ವಂಚನೆ ಮಾಡುತ್ತಿರುವುದು ತಿಳಿದ ಹಲವರು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ವಂಚನೆ ಸಂಬಂಧ ದೂರು ನೀಡಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನ: ಕಾವೇರಿ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ

ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ಮಾಡಿದ ಬಳಿಕ ಜಿಲ್ಲೆಯಾದ್ಯಂತ 70ಕ್ಕೂ ಹೆಚ್ಚು ಜನರಿಗೆ ವಂಚಿಸಿರುವುದು ಗೊತ್ತಾಗಿದೆ. ನಂತರ ಅನಘ ಗೋಲ್ಡ್ ಕಂಪನಿಯ ಮಾಲೀಕ ಪ್ರವೀಣ್, ಆತನ ಪತ್ನಿ ಲಕ್ಷ್ಮೀ, ಸಿಬ್ಬಂದಿ ಮಂಜುಳಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ವಂಚನೆ ಮಾಡಿರುವುದು ಧೃಡವಾಗಿದೆ.

ಇದನ್ನೂ ಓದಿ: ಕೆಆರ್​ಎಸ್ ಡ್ಯಾಂ ಬಳಿ ಮನರಂಜನಾ ಪಾರ್ಕ್, ಕಾವೇರಿ ಆರತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಸದ್ಯ ಈ ಅನಘ ಗೋಲ್ಡ್ ಕಂಪನಿಯಿಂದ‌ ಮಂಡ್ಯ ಜಿಲ್ಲೆಯಲ್ಲಿ 70 ಕ್ಕೂ‌ಅಧಿಕ ಜನರು ವಂಚನೆಗೆ ಒಳಗಾಗಿದ್ದು, ಇವರಿಂದ ಮೂರು ಕೋಟಿ ರೂ ಮೌಲ್ಯದ 3 ಕೆಜಿ ಚಿನ್ನಾಭರಣಗಳನ್ನು ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ಮೂವರನ್ನು‌ ಬಂಧಿಸಲಾಗಿದ್ದು, ಬಂಧಿತ ಆರೋಪಿಗಳಿಂದ 500 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿದೆ ಎಸ್​​​ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಒಟ್ಟಾರೆ ಅಮಾಯಕರನ್ನ ಟಾರ್ಗೆಟ್ ಮಾಡಿ ಮೋಸ ಮಾಡುತ್ತಿದ್ದ ವಂಚಕರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:47 am, Wed, 9 July 25