ಹೃದಯಾಘಾತದ ಆತಂಕದಿಂದ ಜಯದೇವ ಆಸ್ಪತ್ರೆಯತ್ತ ಜನರ ದೌಡು, ಒಪಿಡಿ ಫುಲ್! ಹೃದ್ರೋಗಿಗಳಿಗೆ ಸಮಸ್ಯೆ
ಹೃದಯಾಘಾತದ ಆತಂಕ ಇನ್ನೂ ಕಡಿಮೆ ಆಗಿಲ್ಲ. ಸರಣಿ ಹೃದಯಾಘಾತ ಪ್ರಕರಣಗಳ ನಂತರ ಜನ ಮತ್ತಷ್ಟು ಹೆದರಿ ಹೋಗಿದ್ದಾರೆ. ಕೆಲವರು ಆತಂಕದಿಂದ ಹೃದಯದ ಆರೋಗ್ಯ ತಪಾಸಣೆಗೆ ಮುಂದಾಗಿರುವ ಕಾರಣ ಜಯದೇವ ಆಸ್ಪತ್ರೆ ಒಪಿಡಿ ಹೌಸ್ಫುಲ್ ಆಗಿದೆ. ಇದರಿಂದಾಗಿ ನಿಜವಾಗಿ ಹೃದಯ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದವರಿಗೆ ಸಮಸ್ಯೆ ಶುರುವಾಗಿದೆ.

ಬೆಂಗಳೂರು, ಜುಲೈ 9: ಸಾಲು ಸಾಲು ಹೃದಯಾಘಾತದ (Heart Attack) ಪ್ರಕರಣಗಳಿಂದ ಜನ ಕಂಗೆಟ್ಟು ಹೋಗಿದ್ದಾರೆ. ಹೃದಯದ ಆರೋಗ್ಯ ಹೇಗಿದೆ ಎಂಬ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಕಾರಣದಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ (Jayadeva Hospital) ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಳೆದೊಂದು ವಾರದಿಂದ 2 ಸಾವಿರಕ್ಕೂ ಅಧಿಕ ಜನ ನಿತ್ಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಪ್ರತಿ ದಿನ 700 ರಿಂದ 1 ಸಾವಿರ ಜನ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದರು. ಇದೀಗ 2 ಸಾವಿರಕ್ಕೂ ಅಧಿಕ ಜನ ಬರುತ್ತಿದ್ದಾರೆ.
ಹೃದ್ರೋಗಿಗಳಿಗೆ ಸಮಸ್ಯೆ ಶುರು: 4 ಹೆಚ್ಚುವರಿ ಕೌಂಟರ್ ಆರಂಭ
ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದರಿಂದ ನಿಜವಾದ ರೋಗಿಗಳಿಗೆ ಸಮಸ್ಯೆ ಶುರುವಾಗಿದೆ. ಸ್ಟೆಂಟ್ ಹಾಕಿಸಿಕೊಂಡ ರೋಗಿಗಳು ಸರದಿಯಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಚೆಕ್ ಅಪ್ ಮಾಡಿಸಿಕೊಳ್ಳಬೇಕಿರುವ ರೋಗಿಗಳು ಕಾಯುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜಯದೇವ ಆಸ್ಪತ್ರೆ ಆಡಳಿತ 4 ಹೆಚ್ಚುವರಿ ಕೌಂಟರ್ ತೆರೆದಿದೆ. ಅಷ್ಟೇ ಅಲ್ಲ ವೈದ್ಯರಿಗೆ, ಸಿಬ್ಬಂದಿಗಳಿಗೆ 1 ಗಂಟೆ ಮುಂಚಿತವಾಗಿ ಬರಲು ತಿಳಿಸಿದೆ. ಜೊತೆಗೆ ಆಸ್ಪತ್ರೆ ಒಪಿಡಿ 9 ಗಂಟೆ ಬದಲಾಗಿ 8 ಗಂಟೆಗೆ ತೆರೆಯುತ್ತಿದೆ.
15 ವರ್ಷದ ಮಕ್ಕಳಿಗೆ ಹೃದಯ ಪರೀಕ್ಷೆ!
ಮಕ್ಕಳಲ್ಲೂ ಹೃದಯಾಘಾತ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ 15 ವರ್ಷದ ಮಕ್ಕಳಿಗೆ ಹೃದಯ ತಪಾಸಣೆಗೆ ಆರೋಗ್ಯ ಇಲಾಖೆ ಸೂಚಿಸಿದೆ. ಪ್ರಿಸ್ಕೂಲ್ನಲ್ಲಿ ಕೆಲ ಹಾರ್ಟ್ ಹೋಲ್ಸ್ ಕಂಡುಬರುತ್ತದೆ. 12 ರಿಂದ 14 ವರ್ಷದೊಳಗೆ ಮಕ್ಕಳಿಗೆ ಹೈಪರ್ ಟ್ರೋಫಿಯಾ ಸಮಸ್ಯೆ ಇರುತ್ತದೆ. ಹೀಗಾಗಿ ಮೊದಲೇ ಹೃದಯ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ರವೀಂದ್ರನಾಥ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲವೆಂದ ಗುಂಡೂರಾವ್: ಅಧಿಸೂಚಿತ ಖಾಯಿಲೆ ಎಂದು ಘೋಷಣೆ
ಶಾಲಾ ಪಠ್ಯದಲ್ಲಿ ಹೃದಯ ಆರೋಗ್ಯದ ಬಗ್ಗೆ ಮಾಹಿತಿ ಅಳವಡಿಸುವ ಚಿಂತನೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳೂ ತಿಳಿಸಿವೆ. ಸದಾ ಕೆಲಸದ ಒತ್ತಡದಲ್ಲಿ ಇರುವ ಟೆಕ್ಕಿಗಳಿಗೆ ವಾರ್ಷಿಕವಾಗಿ ಹೃದಯದ ಆರೋಗ್ಯ ತಪಾಸಣೆಗೆ ತಜ್ಞರು ಸೂಚಿಸಿದ್ದಾರೆ.







