ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮೀಯ ರೀತಿ ಸಂಚು! ಎನ್‌ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಲು ಉಗ್ರ ನಾಸೀರ್ಗೆ ನೆರವಾಗಲು ಸಿನಿಮೀಯ ರೀತಿಯಲ್ಲಿ ಸಂಚು ರೂಪಿಸಲಾಗಿದ್ದು, ಜೈಲಿನ ಎಎಸ್ಐ ಚಾಂದ್ ಪಾಷಾನೇ ಮುಖ್ಯ ಸೂತ್ರಧಾರನಾಗಿದ್ದ ಎಂಬ ಸ್ಫೋಟಕ ಅಂಶ ಎನ್‌ಐಎ ತನಿಖೆಯಿಂದ ಬಯಲಾಗಿದೆ. ಉಗ್ರನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವ ವೇಳೆ ಗ್ರೆನೇಡ್ ಸ್ಫೋಟಿಸಿ ಪರಾರಿಯಾಗುವ ಸಂಚು ಹೂಡಲಾಗಿತ್ತು ಎಂಬುದು ತಿಳಿದುಬಂದಿದೆ. ಅದೃಷ್ಟವಶಾತ್, ಬೆಂಗಳೂರು ಸಿಸಿಬಿ ಪೊಲೀಸರಿಂದಾಗಿ ಅದು ವಿಫಲವಾಗಿತ್ತು.

ಬೆಂಗಳೂರು, ಜುಲೈ 10: ಉಗ್ರ ಟಿ ನಾಸೀರ್ ಜೈಲಿನಿಂದ ಪರಾರಿಯಾಗುವಂತೆ ಮಾಡಲು ಜೈಲು ಅಧಿಕಾರಿಗಳ ಜತೆ ಸೇರಿಕೊಂಡು ಉಗ್ರರ ತಂಡ ರೂಪಿಸಿದ್ದ ಭೀಕರ ಸಂಚು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯಿಂದ ಬಹಿರಂಗವಾಗಿದೆ. ಗ್ರೆನೇಡ್ ಸ್ಫೋಟ ಮಾಡಿ ಪರಾರಿಯಾಗಲು ಸಂಚು ಹೂಡಲಾಗಿತ್ತು. ಆದರೆ, ಆ ಯತ್ನವನ್ನು ಬೆಂಗಳೂರಿನ ಸಿಸಿಬಿ ಹಾಗೂ ಎನ್‌ಐಎ ಘಟಕ ವಿಫಲಗೊಳಿಸಿತ್ತು ಎಂಬುದು ತಿಳಿದುಬಂದಿದೆ. ಉಗ್ರ ನಾಸೀರ್ 2009 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದು, ಆತನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಮಾಡಲು ಉಗ್ರರು ಎರಡು ಬಾರಿ ವಿಫಲ ಯತ್ನ ನಡೆಸಿದ್ದರು ಎಂಬುದನ್ನು ಎನ್‌ಐಎ ಪತ್ತೆಮಾಡಿದೆ.
ಸಿನಿಮೀಯ ರೀತಿ ಪರಾರಿ ಮಾಡಿಸಲು ಸಂಚು
ಸಿನಿಮೀಯ ರೀತಿಯಲ್ಲಿ ನಾಸೀರ್ ತಪ್ಪಿಸಿಕೊಳ್ಳಲು ಸಂಚು ಸಿದ್ಧವಾಗಿತ್ತು. ಅದಕ್ಕೆ ಎಎಸ್ಐ ಚಾಂದ್ ಪಾಷಾ ಪ್ರಮುಖ ಸೂತ್ರಧಾರರಾಗಿದ್ದರು. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ಇತ್ತು. ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯಲು ಒಂದು ಜೀಪ್, ಒಬ್ಬ ಇನ್ಸ್ಪೆಕ್ಟರ್ ಅಥವಾ ಪಿಎಸ್ಐ ನಿಯೋಜನೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಮಾರ್ಗ ಮಧ್ಯೆ ಗ್ರೆನೇಡ್ ಸ್ಫೋಟಿಸಿ ಪೊಲೀಸರ ಗಮನ ಬೇರೆಡೆ ಸೆಳೆಯುವಂತೆ ಮಾಡಿ ನಾಸೀರ್ ಪರಾರಿಯಾಗುವಂತೆ ಮಾಡುವುದು ಸಂಚಿನ ಭಾಗವಾಗಿತ್ತು. ಈ ಎಲ್ಲ ಮಾಹಿತಿಯನ್ನು ಫಾತಿಮಾ ಮೂಲಕ ಉಗ್ರ ಜುನೈದ್ಗೆ ರವಾನೆ ಮಾಡಲಾಗುತ್ತಿತ್ತು ಎಂಬುದನ್ನು ಎನ್‌ಐಎ ಪತ್ತೆ ಮಾಡಿದೆ.
ಉಗ್ರ ಜುನೈದ್ ಮೂಲಕ ಪೂರೈಕೆಯಾಗುತ್ತಿದ್ದ ಗ್ರೆನೇಡ್
ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಮೂಲಕ ಸಂಚುಕೋರರಿಗೆ ಗ್ರೆನೇಡ್ ಪೂರೈಕೆಯಾಗುತ್ತಿತ್ತು. 2023ರಲ್ಲಿ ಸಿಸಿಬಿ ದಾಳಿ ಸಂದರ್ಭ ಕೊಡಿಗೆಹಳ್ಳಿ ಮನೆಯ ಅಲ್ಮೆರಾದಲ್ಲಿ ನಾಲ್ಕು ಗ್ರೆನೇಡ್ಗಳು ಪತ್ತೆಯಾಗಿದ್ದವು. ಹೀಗಾಗಿ ಉಗ್ರರ ಸಂಚು ವಿಫಲವಾಗಿತ್ತು. ಜುನೈದ್, ಮೊಹಮ್ಮದ್ ಅರ್ಷದ್ ಖಾನ್, ಸುಹೈಲ್, ಫೈಜಲ್, ತಬ್ರೇಜ್, ಮುದಾಸಿರ್ ಎಂಬವರು ಸೇರಿಕೊಂಡು ಈ ಸಂಚು ರೂಪಿಸಿದ್ದು, ಎಎಸ್ಐ ಚಾಂದ್ ಪಾಷಾ ನೆರವಿತ್ತು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್, ರಾಮೇಶ್ವರಂ ಕೆಫೆ ಸ್ಫೋಟ ಮಾಸ್ಟರ್ ಮೈಂಡ್ಗೂ ಬಂಧಿತ ಶಂಕಿತರಿಗೂ ಪ್ರಬಲ ನಂಟು!
ಸದ್ಯ ಉಗ್ರ ನಾಸೀರ್ ಪರಾರಿ ಸಂಚು ಪ್ರಕರಣದಲ್ಲಿ ಮೂವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಎಸ್ಐ ಚಾಂದ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು ಮಂಗಳವಾರ ರಾತ್ರಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಎಎಸ್ಐ ಚಾಂದ್ ಪಾಷಾನನ್ನು 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರಿಸಲಿದೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:18 am, Thu, 10 July 25








