ರಾಜನಾಥ್ ಸಿಂಗ್ ಭೇಟಿ ಸಕ್ಸಸ್: ಸಿದ್ದರಾಮಯ್ಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ರಕ್ಷಣಾ ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿ ಪ್ರವಾದಲ್ಲಿದ್ದಾರೆ. ಈ ವೇಳೆ ಇಂದು ಸಿಎಂ ಸಿದ್ದರಾಮಯ್ಯನವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆ ಭೂಮಿ ಸೇರಿದಂತೆ ಇತರೆ ಬೇಡಿಕೆಗಳನ್ನು ಇಟ್ಟಿದ್ದು, ಇದಕ್ಕೆ ರಾಜನಾಥ್ ಸಿಂಗ್ ಸಹ ಸ್ಪಂದಿಸಿದ್ದಾರೆ. ಹಾಗಾದ್ರೆ, ಸಿಎಂ, ರಕ್ಷಣಾ ಸಚಿವರಿಗೆ ಯಾವೆಲ್ಲಾ ಮನವಿ ಮಾಡಿದ್ದಾರೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ನವದೆಹಲಿ, (ಜುಲೈ 09): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ (Mysuru Dasara) ಸಂಭ್ರಮ ಶುರುವಾಗಿದೆ. ನಾಡಹಬ್ಬಕ್ಕೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಸಿದ್ಧತೆಗಳು ಮೆಲ್ಲಗೆ ಶುರುವಾಗುತ್ತಿವೆ. ಇನ್ನು ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಅನುಮತಿ ನೀಡುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮ್ಯಯನವರು (Siddaramaiah) ಇಂದು(ಜುಲೈ 09) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಇದಕ್ಕೆ ರಾಜನಾಥ್ ಸಿಂಗ್ ಸಹ ಸಮ್ಮತಿಸಿದ್ದಾರೆ. ಹಾಗೇ ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆಯ ಭೂಮಿ ನೀಡುವಂತೆ ಸಿಎಂ ಮಾಡಿದ ಮನವಿಗೂ ಸಹ ಸ್ಪಂದಿಸಿದ್ದಾರೆ.
ರಾಜನಾಥ್ ಸಿಂಗ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ದಸರಾದಲ್ಲಿ ಏರ್ಶೋಗೆ ಮನವಿ ಮಾಡಿದ್ದೇವೆ. ಇದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿಸಿದ್ದಾರೆ. ಡಿಫೆನ್ಸ್ ಕಾರಿಡಾರ್ ಮಾಡಿ ಎಂದು ಮನವಿ ಮಾಡಲಾಗಿದೆ. ಉತ್ತರ ಪ್ರದೇಶ, ತಮಿಳುನಾಡಿನಲ್ಲಿ ಡಿಫೆನ್ಸ್ ಕಾರಿಡಾರ್ ಇದೆ. ಅದೇ ರೀತಿ ಕರ್ನಾಟಕದಲ್ಲೂ ಡಿಫೆನ್ಸ್ ಕಾರಿಡಾರ್ ಮನವಿ ಮಾಡಿದ್ದೇವೆ. ಹಾಗೇ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಚರ್ಚೆಗಾಗಿ ದೆಹಲಿಗೆ ಬಂದಿಲ್ಲ! ಮತ್ಯಾಕೆ? ವಿವರಿಸಿದ ಡಿಸಿಎಂ ಡಿಕೆ ಶಿವಕುಮಾರ್
ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆ ಭೂಮಿಗೆ ಮನವಿ ಮಾಡಲಾಗಿದೆ. ಸುರಂಗ ಯೋಜನೆ, ಲಿಂಕ್ ರಸ್ತೆ. ಏರ್ಪೋರ್ಟ್ ರಸ್ತೆಯಲ್ಲಿ ಡಬಲ್ ಡೆಕ್ಕರ್ ರಸ್ತೆಗಾಗಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಂದಿಸಿದ್ದಾರೆ. ನಾಳೆ (ಜುಲೈ 10) ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೇಳಲಾಗಿದ್ದು, ಅವಕಾಶ ನೀಡಿದರೆ ಭೇಟಿಯಾಗುತ್ತೇವೆ ಎಂದರು.
ದೆಹಲಿಯಲ್ಲಿ ಇಂದು ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜಿಸುವ ಕುರಿತು ಚರ್ಚೆ ನಡೆಸಿ, ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್, ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಕುರಿತು ಸಮಾಲೋಚನೆ ನಡೆಸಿದೆ.
ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಉತ್ಸವವೆಂದೇ… pic.twitter.com/7i0yGyQcAO
— Siddaramaiah (@siddaramaiah) July 9, 2025
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಭೇಟಿಗೆ ಅವಕಾಶ ಕೇಳಿದ್ದೇವೆ. ಆದ್ರೆ, ರಾಹುಲ್ ಗಾಂಧಿ ಇನ್ನೂ ಸಮಯ ನೀಡಿಲ್ಲ. ನೀಡಿದ್ರೆ ಭೇಟಿಯಾಗುವೆ. ಇನ್ನು ವಿಧಾನಪರಿಷತ್ನ 4 ಸ್ಥಾನಗಳಿಗೆ ನೇಮಕಾತಿ ಹಾಗೂ ನಿಗಮ ಮಂಡಳಿಗೆ ನೇಮಕಾತಿ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ನಾಳೆ ಚರ್ಚೆ ಮಾಡುವೆ ಎಂದು ಹೇಳಿದರು.