ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 1006 ಆಟೋಗಳ ವಿರುದ್ದ ಕೇಸ್, 233 ಆಟೋ ಸೀಜ್: ಆದ್ರೂ ದುಪ್ಪಟ್ಟು ದರ ವಸೂಲಿಗೆ ಬೀಳ್ತಿಲ್ಲ ಬ್ರೇಕ್
ಪ್ರಯಾಣಿಕರ ಬಳಿ ಮನಸೋ ಇಚ್ಛೆ ಸುಲಿಗೆ ಮಾಡುತ್ತಿದ್ದ ಅಗ್ರಿಗೇಟರ್ ಕಂಪನಿಗಳಿಗೆ, ಅವುಗಳ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಬಿಸಿ ಮುಟ್ಟಿಸಿದೆ.ವಿಶೇಷ ಕಾರ್ಯಚರಣೆ ಮಾಡಿ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ ಆಟೋಗಳನ್ನು ಸೀಜ್ ಮಾಡಿದೆ. ಆದರೂ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು ಇನ್ನೂ ದುಪ್ಪಟ್ಟು ದರ ವಸೂಲಿ ಮಾಡುವುದನ್ನು ನಿಲ್ಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು, ಜುಲೈ 14: ಬೆಂಗಳೂರು (Bengaluru) ನಗರದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು (Auto Drivers) ಪ್ರಯಾಣಿಕರ ಬಳಿ ದುಪ್ಪಟ್ಟು ದರ ವಸೂಲಿಗೆ ಮುಂದಾಗಿದ್ದರು. ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿದ್ದ ಅಗ್ರಿಗೇಟರ್ ಕಂಪನಿಗಳು ಕೂಡ ಹಗಲು ದರೋಡೆಗೆ ಇಳಿದಿದ್ದವು.ಇದರ ವಿರುದ್ದ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಬಳಿಕ ಸಾರಿಗೆ ಇಲಾಖೆ ಎಚ್ಚೆತ್ತು, ದುಪ್ಪಟ್ಟು ದರ ವಸೂಲಿಗೆ ಕಡಿವಾಣ ಹಾಕಲು ಮುಂದಾಗಿದೆ. ಕಳೆದ ಒಂದು ವಾರದಿಂದ ನಗರದ 11 ಆರ್ಟಿಒ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನು ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3531 ಆಟೋಗಳ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್ ಇಲ್ಲದಿರುವುದು, ದುಪ್ಪಟ್ಟು ದರ ವಸೂಲಿ, ಇನ್ಸೂರೆನ್ಸ್, ಡಾಕ್ಯುಮೆಂಟ್ಗಳಿಲ್ಲದ 1006 ವಾಹನಗಳ ವಿರುದ್ದ ಕೇಸ್ ದಾಖಲಿಸಿ, 233 ಆಟೋಗಳನ್ನು ಸೀಜ್ ಮಾಡಿದ್ದಾರೆ. ಆದರೂ ಅಗ್ರಿಗೇಟರ್ ಕಂಪನಿಗಳು ಮತ್ತು ಕೆಲ ಆಟೋ ಚಾಲಕರು ಇನ್ನೂ ದುಪ್ಪಟ್ಟು ವಸೂಲಿ ಮಾಡೋದನ್ನು ನಿಲ್ಲಿಸಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಯಾವ ಆರ್ಟಿಒ ವ್ಯಾಪ್ತಿಯಲ್ಲಿ ಎಷ್ಟು ವಾಹನ ಜಪ್ತಿ?
ಆರ್ಟಿಒ ಕಚೇರಿ – ಪ್ರಕರಣಗಳ ಸಂಖ್ಯೆ – ಸೀಜ್
- ಬೆಂಗಳೂರು – 143- 69
- ಬೆಂಗಳೂರು ಪಶ್ಚಿಮ – 90- 21
- ಬೆಂಗಳೂರು ಪೂರ್ವ – 115 – 13
- ಬೆಂಗಳೂರು ಉತ್ತರ – 140 – 12
- ಬೆಂಗಳೂರು ದಕ್ಷಿಣ – 147 – 15
- ಜ್ಞಾನಭಾರತಿ – 43 – 34
- ಯಲಹಂಕ – 51 – 6
- ಎಲೆಕ್ಟ್ರಾನಿಕ್ ಸಿಟಿ – 117 – 22
- ಕೆ.ಆರ್.ಪುರಂ – 78 -19
- ಚಂದಾಪುರ – 49 – 18
- ದೇವನಹಳ್ಳಿ – 33 – 4
- ಒಟ್ಟು – 1006 – 233
ಅಗ್ರಿಗೇಟರ್ ಆ್ಯಪ್ ಸಂಬಂಧಿತ ಕೇಸ್ಗಳು ಹಾಗೂ ಸೀಜ್ ಮಾಡಿದ ಆಟೋಗಳ ವಿವರ.
ಆ್ಯಪ್ – ಪ್ರಕರಣ ಸಂಖ್ಯೆ – ಸೀಜ್
- ಓಲಾ – 35 – 4
- ಊಬರ್ – 59 – 14
- ರ್ಯಾಪಿಡೋ – 92 -32
- ನಮ್ಮಯಾತ್ರಿ – 25 – 4
- ಇತರೆ ಆ್ಯಪ್ – 795 – 17
ಅಗ್ರಿಗೇಟರ್ ಆ್ಯಪ್ಗಳ ದರ ವಸೂಲಿ ವಿವರ
ಬೆಂಗಳೂರಿನಲ್ಲಿ 2 ಕಿ.ಮೀ. ಅಂತರಕ್ಕೆ ಕೇವಲ 30 ರೂಪಾಯಿ ದರ ಕೊಡಬೇಕು. ಆದರೆ 1 ಕಿ.ಮೀ ಅಂತರಕ್ಕೂ ಆ್ಯಪ್ಗಳಲ್ಲಿ 50-60 ರೂಪಾಯಿ ವರೆಗೆ ಚಾರ್ಜ್ ಮಾಡಲಾಗುತ್ತಿದೆ. ಲಕ್ಕಸಂದ್ರದಿಂದ ವಿಜಯನಗರಕ್ಕೆ 11 ಕಿಮೀ ದೂರ ಇದೆ. ನಿಯಮ ಪ್ರಕಾರ 165 ರುಪಾಯಿ ಆಗುತ್ತದೆ, ಸರ್ವಿಸ್ ಚಾರ್ಜ್ ಹಾಗೂ ಜಿಎಸ್ಟಿ ಸೇರಿಸಿದರೆ 190 ರುಪಾಯಿ ಆಗಬಹುದು. ಆದರೆ ಉಬರ್ ಆ್ಯಪ್ನಲ್ಲಿ ಬರೋಬ್ಬರಿ 313 ರುಪಾಯಿ ಚಾರ್ಜ್ ಮಾಡಲಾಗ್ತಿದೆ. ಮೆಜೆಸ್ಟಿಕ್ ಟು ಕೆ.ಆರ್ ಮಾರ್ಕೆಟ್ ಗೆ 1.5 ಕಿಮೀ ದೂರವಿದೆ. ನಿಯಮ ಪ್ರಕಾರ 45 ರುಪಾಯಿ, ಸರ್ವಿಸ್ ಮತ್ತು ಜಿಎಸ್ಟಿ ಸೇರಿದ್ರೆ 60 ರುಪಾಯಿ ಆಗಬಹುದು. ಆದರೆ ಓಲಾ 101 ರುಪಾಯಿ ಚಾರ್ಜ್ ಮಾಡುತ್ತಿದೆ. ಮೆಜೆಸ್ಟಿಕ್ ಟು ಆನಂದ್ ರಾವ್ ಸರ್ಕಲ್ ಗೆ 1 ಕಿಮೀ ಅಂದರೆ ನಿಯಮ ಪ್ರಕಾರ 20 ರಿಂದ 30 ರುಪಾಯಿ, ಸರ್ವಿಸ್ ಟ್ಯಾಕ್ಸ್, ಜಿಎಸ್ಟಿ ಸೇರಿದರೆ 40 ರುಪಾಯಿ ಆಗಬಹುದು. ಆದರೆ ಈ ನಮ್ಮಯಾತ್ರಿ ಆ್ಯಪ್ 70 ರುಪಾಯಿ ಚಾರ್ಜ್ ಮಾಡಿದೆ. ಈ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ನೂರಾರು ಆಟೋಗಳನ್ನು ಸೀಜ್ ಮಾಡಿ ಕೇಸ್ ಹಾಕುತ್ತಿದ್ದರೂ, ಈ ಅಗ್ರಿಗೇಟರ್ ಕಂಪನಿಗಳು ಹಾಗೂ ಆಟೋ ಚಾಲಕರು ಮಾತ್ರ ಇನ್ನೂ ಬುದ್ಧಿ ಕಲಿಯುತ್ತಿಲ್ಲವೆಂದು ಕಾಣುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:03 am, Mon, 14 July 25