ಬೆಂಗಳೂರಿನಲ್ಲಿ ಆಟೋ ವಿರುದ್ಧ ಮುಂದುವರಿದ ಆರ್ಟಿಒ ಕಾರ್ಯಾಚರಣೆ: ದುಪ್ಪಟ್ಟು ದರ ವಸೂಲಿ ಮಾಡಿದ್ದ 56 ಆಟೋ ಸೀಜ್, 183 ಕೇಸ್
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದ್ದೇ ಆಗಿದ್ದು, ಈ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ ಇಚ್ಛೆ ದರ ವಸೂಲಿಗೆ ಮುಂದಾಗಿದ್ದರು. ಇದಕ್ಕೆ ಬ್ರೇಕ್ ಹಾಕಲು ಆರ್ಟಿಒ ಅಧಿಕಾರಿಗಳು ಮುಂದಾಗಿದ್ದು, ಎರಡು ದಿನ ಭರ್ಜರಿ ಕಾರ್ಯಾಚರಣೆ ನಡೆಸಿ 433 ಕೇಸ್ ದಾಖಲಿಸಿ 166 ಆಟೋಗಳನ್ನು ಸೀಜ್ ಮಾಡಿದ್ದಾರೆ.

ಬೆಂಗಳೂರು, ಜುಲೈ 2: ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಆಟೋ ಚಾಲಕರು (Auto Drivers) ದುಪ್ಪಟ್ಟು ದರ ವಸೂಲಿ ಮಾಡಲು ಶುರು ಮಾಡಿದ್ದರು. ಅಗ್ರಿಗೇಟರ್ ಕಂಪನಿಗಳು ಕೂಡ ಹಗಲು ದರೋಡೆಗೆ ಇಳಿದಂತೆ ವರ್ತಿಸಿದ್ದವು. ಇದಕ್ಕೆ ಕಡಿವಾಣ ಹಾಕಲು ಅಖಾಡಕ್ಕಿಳಿದ ಸಾರಿಗೆ ಇಲಾಖೆ (RTO), ಸೋಮವಾರ ಮತ್ತು ಮಂಗಳವಾರ ವಿಶೇಷ ತಪಾಸಣೆ ನಡೆಸಿದೆ. ಬೆಂಗಳೂರಿನ ವಿವಿಧೆಡೆ ಹತ್ತು ತಂಡಗಳ ಮೂಲಕ ದಾಳಿ ನಡೆಸಿದ್ದು, ದುಪ್ಪಟ್ಟು ದರ ವಸೂಲಿ ಮಾಡಿದ ಆಟೋಗಳನ್ನು ಸೀಜ್ ಮಾಡಿದೆ. ಮಂಗಳವಾರ ಸಾರಿಗೆ ಇಲಾಖೆಯ ಅಧಿಕಾರಿಗಳು 56 ಕ್ಕೂ ಅಧಿಕ ಆಟೋಗಳನ್ನು ದುಪ್ಪಟ್ಟು ದರ ವಸೂಲಿ ಮಾಡಿರುವ ಹಿನ್ನೆಲೆ ಸೀಜ್ ಮಾಡಿದ್ದಾರೆ.
ದಾಖಲೆಗಳನ್ನು ನೀಡದ ಕಾರಣ 184 ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿಕೊಂಡು ಆಟೋ ಚಾಲಕರಿಗೆ ದಂಡ ಸೇರಿದಂತೆ ಇತರೆ ಕಾನೂನು ಕ್ರಮ ಜರುಗಿಸಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಎಷ್ಟು?
ಬೆಂಗಳೂರು ನಗರದಲ್ಲಿ ಎರಡು ಕಿಲೋಮೀಟರ್ ಪ್ರಯಾಣದ ಕನಿಷ್ಠ ಆಟೋ ದರ 30 ರುಪಾಯಿ ಇದ್ದು, ಅದರ ನಂತರದ ಪ್ರತಿ ಕಿಮೀ ಪ್ರಯಾಣಕ್ಕೆ 15 ರುಪಾಯಿ ಇದೆ. ಕನಿಷ್ಠ ಆಟೋ ದರ 40 ರುಪಾಯಿ, ನಂತರದ ಕಿಮೀಗೆ 20 ರುಪಾಯಿ ಮಾಡಲು ಅನುಮತಿ ನೀಡಲು ಆಟೋ ಚಾಲಕ ಸಂಘಟನೆಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (Regional transport Authority) ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ .ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕನಿಷ್ಠ ಆಟೋ ದರವನ್ನು 36 ರುಪಾಯಿಗೆ ಮತ್ತು ನಂತರದ ಒಂದು ಕಿಮೀ ಗೆ 15 ರುಪಾಯಿ ಇರುವುದನ್ನು 18 ರುಪಾಯಿಗೆ ಏರಿಕೆ ಮಾಡಲು ತೀರ್ಮಾನ ಮಾಡಿದ್ದಾರೆ. ಈ ವಿಚಾರವನ್ನು ಸಾರಿಗೆ ಸಚಿವರಿಗೆ ಮತ್ತು ಸಿಎಂ ಗಮನಕ್ಕೆ ತಂದಿದ್ದು, ಈ ಇಬ್ಬರು ಗ್ರೀನ್ ಸಿಗ್ನಲ್ ನೀಡಿದ್ದೇ ಆದಲ್ಲಿ ಹೊಸ ದರ ಜಾರಿ ಆಗುವ ಸಾಧ್ಯತೆಗಳಿವೆ.
ದುಪ್ಪಟ್ಟು ದರ ವಸೂಲಿಗೆ ಪ್ರಯಾಣಿಕರಿಂದ ಆಕ್ರೋಶ
ಆಟೋ ದರ ಏರಿಕೆ ಬಗ್ಗೆ ಮಾತನಾಡಿದ ಆಟೋ ಪ್ರಯಾಣಿಕರು, ಆಟೋ ಚಾಲಕರು ಸರ್ಕಾರ ನಿಗದಿ ಮಾಡಿರುವ ದರವನ್ನು ತೆಗೆದುಕೊಳ್ಳುವುದಿಲ್ಲ. ಅವರದ್ದೇ ದರವನ್ನು ಕೇಳುತ್ತಾರೆ. ಮೀಟರ್ ಹಾಕುವುದೇ ಇಲ್ಲ, 100-150 ರುಪಾಯಿ ಕೇಳುತ್ತಾರೆ. 100- 200 ರು ನಿಗದಿ ಮಾಡಿಕೊಂಡಿದ್ದಾರೆ. ಹೀಗೆ ಮಾಡುವುದಾದರೆ ಸರ್ಕಾರ ಯಾಕೆ ದರ ನಿಗದಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಕಾಲಿನ ಸಮಸ್ಯೆ ಇದೆ ಎಂದು ಪ್ರತಿದಿನ ಆಟೋದಲ್ಲಿ ಸಂಚಾರ ಮಾಡುತ್ತೇನೆ. ಮೀಟರ್ ಹಾಕುವುದೂ ಇಲ್ಲ, ಕರೆದ ಕಡೆ ಬರುವುದೂ ಇಲ್ಲ. ಅಗ್ರಿಗೇಟರ್ ಕಂಪನಿಗಳ ಆ್ಯಪ್ ನಲ್ಲಿ 30-40 ರುಪಾಯಿ ಟಿಪ್ಸ್ ಸೇರಿಸಿದ್ದೇ ಮರುಕ್ಷಣಕ್ಕೆ ಆಟೋ ಬರುತ್ತದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀವಾಣಿ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಆರ್ಟಿಓ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್
ಒಟ್ಟಿನಲ್ಲಿ ಆಟೋ ಚಾಲಕರು, ಅಗ್ರಿಗೇಟರ್ ಕಂಪನಿಗಳ ದರ್ಬಾರ್ಗೆ ಸಾರಿಗೆ ಇಲಾಖೆ ಸರಿಯಾದ ಪಾಠ ಕಲಿಸಲು ಮುಂದಾಗಿದೆ. ಇನ್ನಾದರೂ ಆಟೋ ಚಾಲಕರು ಪ್ರಯಾಣಿಕರು ಕರೆದ ಕಡೆ ಹೋಗುತ್ತಾರಾ, ನಿಯಮಗಳ ಪ್ರಕಾರವೇ ಪ್ರಯಾಣಿಕರಿಂದ ದರವನ್ನು ತೆಗೆದುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:55 am, Wed, 2 July 25







