AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ, ಸುರ್ಜೆವಾಲಾ ಖಡಕ್ ಸ್ಪಷ್ಟನೆ: ನಾಯಕತ್ವ ಬದಲಾವಣೆ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್

ಆಡಳಿತರೂಢ ಕಾಂಗ್ರೆಸ್​​​​ನಲ್ಲಿ ಭುಗಿಲೆದ್ದಿರೋ ಅಸಮಾಧಾನಕ್ಕೆ ಮದ್ದರೆಯಲು ರಾಜ್ಯ ಉಸ್ತುವಾರಿ ಸುರ್ಜೇವಾಲ ಎಂಟ್ರಿಕೊಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕರೊಂದಿಗೆ ಒನ್ ಟು ಒನ್ ಸಭೆ ಮಾಡ್ತಿದ್ದಾರೆ. ನಿನ್ನೆ 7 ಶಾಸಕ ಜೊತೆ ಮಾತುಕತೆ ನಡೆಸಿದ ಸುರ್ಜೇವಾಲ, ಇವತ್ತು ಕೂಡ ಶಾಸಕರ ಜೊತೆ ಒನ್ ಟು ಒನ್ ಮಾತುಕತೆ ನಡೆಸಿದರು. ಇದೇ ವೇಳೆ ನಾಯಕತ್ವ ಬದಲಾವಣೆ ಉದ್ಭವಿಸಿದ್ದ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಡಿಕೆಶಿ, ಸುರ್ಜೆವಾಲಾ ಖಡಕ್ ಸ್ಪಷ್ಟನೆ: ನಾಯಕತ್ವ ಬದಲಾವಣೆ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್
Karnataka Congress
ರಮೇಶ್ ಬಿ. ಜವಳಗೇರಾ
|

Updated on: Jul 01, 2025 | 10:33 PM

Share

ಬೆಂಗಳೂರು, (ಜುಲೈ 01): ಕರ್ನಾಟಕ ಕಾಂಗ್ರೆಸ್ (Karnataka Congress) ಮನೆಯಲ್ಲಿ ಶಾಸಕರ ಅಸಮಾಧಾನ ಭುಗಿಲೆದಿದ್ದು, ಸ್ವಪಕ್ಷದ ಶಾಸಕರ ಅಸಮಾಧಾನ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ಡ್ಯಾಮೇಜ್ ಉಂಟುಮಾಡಿದೆ. ಹೀಗಾಗಿ ಈ ಡ್ಯಾಮೇಜ್ ಕಂಟ್ರೋಲ್ ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ಬೆಂಗಳೂರಿಗೆ ದೌಡಾಯಿಸಿದ್ದು, ಶಾಸಕರ‌ ಜೊತೆ ಒನ್ ಟೂ ಒನ್ ಸಭೆ ಮೂಲಕ ಅಸಮಾಧಾನಕ್ಕೆ ಮದ್ದರೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ನಾಯಕತ್ವ ಬದಲಾವಣೆ ಇಲ್ಲ. ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಸುರ್ಜೆವಾಲಾ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಎಳೆದಿದ್ದಾರೆ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೇವಲ ಊಹಾಪೋಹ. ಶಾಸಕರ ಸಭೆ ನಡೆಸಿ ಮಾತುಕತೆ ನಡೆಸಲಾಗುತ್ತಿದ್ದು, ಕೇವಲ ಪಕ್ಷದ ಶಾಸಕರ ರಿಪೋರ್ಟ್ ಕಾರ್ಡ್ ಪಡೆಯುತ್ತಿದ್ದೇನೆ.ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಸಿದ್ದರಾಮಯ್ಯನವೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸುರ್ಜೆವಾಲ ಬೆಂಗಳೂರಿನಲ್ಲಿ ಇರುವಾಗಲೇ ಸಿಎಂ ಬದಲಾವಣೆ ಮಾತು: ಶಾಸಕ ಇಕ್ಬಾಲ್ ಹುಸೇನ್​​ಗೆ ಶಾಕ್

ಸಿದ್ದರಾಮಯ್ಯನವರ ಕೈಬಲಪಡಿಸುತ್ತೇವೆ ಎಂದ ಡಿಕೆಶಿ

ಇನ್ನು ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗವಾಗಿ ಹೇಳಿದ್ದು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜ್ಯದಲ್ಲಿ ಯಾವ ನಾಯಕತ್ವ ಬದಲಾವಣೆಯೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾಯಕತ್ವ ಬದಲಾವಣೆ ಇಲ್ಲ ಮತ್ತು ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಸಹ ನಡೆದಿಲ್ಲ. ಪಕ್ಷವನ್ನು ಸಂಘಟಿಸುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಇದು ಸಂಘಟನೆಯ ವರ್ಷವಾಗಿದೆ ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸ್ಪಷ್ಟವಾಗಿ ಸಂದೇಶ ನೀಡಿದ್ದಾರೆ ಎಂದರು. ಈ ಮೂಲಕ ಎರಡುವರೆ ವರ್ಷದ ಬಳಿಕ ಸಿಎಂ ಬದಲಾವಣೆ ಗೊಂದಲಗಳಿಗೆ ಸ್ವತಃ ಡಿಕೆ ಶಿವಕುಮಾರ್ ತೆರೆ ಎಳೆದರು.

ನಾಯಕತ್ವ ಬದಲಾವಣೆ ಬಗ್ಗೆ ಮಾತಾಡೋರಿಗೆ ಎಚ್ಚರಿಕೆ

ಇದೇ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರೆಗೆ ಖಡಕ್ ಎಚ್ಚರಿಕೆ ನೀಡಿದ ಡಿಕೆಶಿ, ಇನ್ಮುಂದೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು. ಶಾಸಕರಾದ ಬಿ.ಆರ್.ಪಾಟೀಲ್, ಬಾಲಕೃಷ್ಣ ಯಾರೇ ಆಗಿರಲಿ ಯಾರೂ ಸಹ ಮಾಧ್ಯಮಗಳ ಮುಂದೆ ಹೋಗಬಾರದು ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆದರೂ ಶಾಸಕ ಇಕ್ಬಾಲ್‌ ಹುಸೇನ್​ ಮತ್ತಷ್ಟು ತಮ್ಮ ಹೆಚ್ಚಳ ಮಾಡಿದ್ದರಿಂದ ಕೋಪಗೊಂಡ ಡಿಕೆ ಶಿವಕುಮಾರ್, ನೋಟಿಸ್ ನೀಡಿದ್ದಾರೆ. ಇಕ್ಬಾಲ್ ಹುಸೇನ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದ್ದು, ಇಕ್ಬಾಲ್ ಹುಸೇನ್ ಅವರ ಅಶಿಸ್ತಿನ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಲಾಗಿದೆ. ಒಂದು ವಾರದೊಳಗೆ ಸಮಜಾಯಿಷಿ ನೀಡುವಂತೆ ನೋಟಿಸ್ ನೀಡಿದ್ದಾರೆ.

ಇನ್ನು ಇಕ್ಬಲ್ ಹುಸೇನ್ ಹೇಳಿಕೆ ಮುನ್ನ ಸಿದ್ದರಾಮಯ್ಯ ಡಿಕೆಶಿಯ ಕೈ ಎತ್ತಿ ಹಿಡಿದ ವಿಡಿಯೋ ಬಗ್ಗೆ ಸುರ್ಜೆವಾಲ ಪ್ರಸ್ತಾಪಿಸಿ, ನಾನು ವಿಡಿಯೋ ನೋಡಿದೆ. ಕೆಪಿಸಿಸಿ ಕಚೇರಿಯಲ್ಲಿ ತೋರಿಸಿದರು. ಒಳ್ಳೆಯ ಬೆಳವಣಿಗೆ. ನೀವಿಬ್ಬರು ಒಗ್ಗಟ್ಟು ಪ್ರದರ್ಶಿಸಿದ್ದು ಓಕೆ, ಆದರೆ ಕೆಲ ಮಿನಿಸ್ಟರ್ಸ್, ಶಾಸಕರು ಗೊಂದಲದ ಹೇಳಿಕೆಗಳು ಯಾಕೆ? ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಬಹಿರಂಗ ಹೇಳಿಕೆ ನೀಡಿದ್ದ ಇಕ್ಬಾಲ್ ಹುಸೇನ್​ ಗೆ ನೋಟಿಸ್ ಬಿಸಿ ಮುಟ್ಟಿಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಹಲವು ದಿನಗಳಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಣಗಳ ನಡುವಿನ ನಾಯಕತ್ವ ಬದಲಾವಣೆ ಹಗ್ಗಾಜಗ್ಗಾಟಕ್ಕೆ ಕೊನೆ ಬಿದ್ದಿದ್ದು, ಸಿದ್ದರಾಮಯ್ಯನವರೇ ಪುಲ್ ಟೈಮ್ ಸಿಎಂ ಎನ್ನುವ ಸಂದೇಶ ರವಾನಿಸಲಾಗಿದೆ. ಇದರೊಂದಿಗೆ ಎಲ್ಲಾ ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಬಿದ್ದಂತಾಗಿದೆ.