ಬರದ ನಾಡಲ್ಲಿ ಶ್ರೀಗಂಧ ಬೆಳೆದ ಸಾಹಸಿ, ಮಿಶ್ರ ಪದ್ಧತಿ ಬೇಸಾಯದಿಂದ ಸುಧಾರಿಸಿತು ರೈತನ ಆದಾಯ
ಮಿಶ್ರ ಬೇಸಾಯ ಪದ್ಧತಿಯಲ್ಲಿ ಕೃಷಿ ಮಾಡುವುದರಲ್ಲಿ ಈ ರೈತ ಎತ್ತಿದ ಕೈ. ಪ್ರತಿ ತಿಂಗಳು 40ರಿಂದ 50 ಸಾವಿರ ರೂಪಾಯಿ ಗ್ಯಾರೆಂಟಿ. ಈತ ಬೆಳೆಸಿರುವ ಶ್ರೀಗಂಧ ನೋಡಿ ಬೆರಗಾಗಿದ್ದಾರೆ ಕೃಷಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು.
ಬೀದರ್: ಸಮಗ್ರ ಬೇಸಾಯದಿಂದ ಈ ರೈತ ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಕೃಷಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರ ಮೂಲಕ ಎಲ್ಲರಿಂದಲೂ ಸೈ ಎಣಿಸಿಕೊಂಡಿದ್ದಾರೆ.
ಮಿಶ್ರ ಬೇಸಾಯ ಪದ್ಧತಿಯಲ್ಲಿ ಕೃಷಿ ಮಾಡುವುದರಲ್ಲಿ ಈ ರೈತ ಎತ್ತಿದ ಕೈ. ಪ್ರತಿ ತಿಂಗಳು 40ರಿಂದ 50 ಸಾವಿರ ರೂಪಾಯಿ ಗ್ಯಾರೆಂಟಿ. ಈತ ಬೆಳೆಸಿರುವ ಶ್ರೀಗಂಧ ನೋಡಿ ಬೆರಗಾಗಿದ್ದಾರೆ ಕೃಷಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು. ಶ್ರೀಗಂಧ ನಾಟಿ ಮಾಡಿದ ಎರಡೇ ವರ್ಷಗಳಲ್ಲಿ ಮರ ಹತ್ತಾರು ಅಡಿಗಳಷ್ಟು ಎತ್ತರಕ್ಕೆ ಬೆಳೆದ ದಾಖಲೆಯೂ ಇವರ ಹೆಸರಿನಲ್ಲಿದೆ. ಹಾಗಾದ್ರೆ ಸಮಗ್ರ ಕೃಷಿಯಿಂದ ನೆಮ್ಮದಿಯ ಜೀವನ ನಡೆಸುತ್ತಿರುವ ಈ ಮಾದರಿ ರೈತ ಯಾರು ಅಂದುಕೊಂಡಿದ್ದೀರಾ?
ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ಜಾಫರ್ ಮಿಯಾ. ಕಡಿಮೆ ನೀರಿನ ಜೊತೆಗೆ ಬರಡು ಭೂಮಿಯಲ್ಲಿ ಹತ್ತು ಹಲವಾರು ಬೆಳೆ ಬೆಳೆಯುತ್ತಿರುವ ಈ ರೈತ ಜಿಲ್ಲೆಗೆ ಮಾದರಿ. ಕಲ್ಲು ಬಂಡೆಗಳಿಂದ ಕೂಡಿದ್ದ ಜಮೀನನ್ನು ಹದಮಾಡಿ ಕೃಷಿಯಲ್ಲಿ ಚಮತ್ಕಾರ ಮಾಡುತ್ತಿದ್ದಾರೆ.
ಅನಾವೃಷ್ಟಿ-ಅತಿವೃಷ್ಟಿಗೆ ಸೆಡ್ಡು ಹೊಡೆದರು ಬೀದರ್ ಜಿಲ್ಲೆ ಅಂದರೆ ನಮಗೆ ನೆನಪಿಗೆ ಬರೋದು ಬರ. ಪ್ರತಿ ವರ್ಷ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ರೈತ ತೊಂದರೆ ಅನುಭವಿಸೋದು ಜಿಲ್ಲೆಯಲ್ಲಿ ಮಾಮೂಲು. ಆದರೆ ಇಂತಹ ಹತ್ತಾರು ಸಮಸ್ಯೆಗಳ ನಡುವೆ ರೈತ ಜಾಫರ್ ಮಿಯಾ, ಮಿಶ್ರ ಬೇಸಾಯ ಪದ್ಧತಿಯಲ್ಲಿ ಬೆಳೆ ಬೆಳೆಯುವುದರ ಮೂಲಕ ಈ ಸಮಸ್ಯೆಗಳಿಗೆ ಸೆಡ್ಡು ಹೊಡೆದು ನಿಂತಿದ್ದಾರೆ. ತಿಂಗಳಿಗೆ ಒಬ್ಬ ಸರಕಾರಿ ನೌಕರರ ಪಡೆದುಕೊಳ್ಳುವ ಸಂಬಳಕ್ಕಿಂತ ಹೆಚ್ಚಿಗೆ ಗಳಿಸುತ್ತಿದ್ದಾರೆ.
ಬೀದರ್ ತಾಲೂಕಿನ ಚಿಟ್ಟಾ ಗ್ರಾಮದ ಪ್ರಗತಿಪರ ರೈತ ಜಾಫರ್ ಮಿಯಾ, ಬರಡು ಭೂಮಿಯಲ್ಲಿ ಕಡಿಮೆ ನೀರಿನಲ್ಲಿ ಸಮಗ್ರ ಕೃಷಿ ಮಾಡುವುದರ ಮೂಲಕ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ. ಸಮಗ್ರ ಬೇಸಾಯದ ಮೂಲಕ ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಆದಾಯ ಪಡೆಯುತ್ತಿರುವ ಜಾಫರ್ ಓದಿದ್ದು ಹತ್ತನೆಯ ತರಗತಿಯಾದರೂ ಕೃಷಿಯಲ್ಲಿ ಮಾತ್ರ ಆಗಾಧ ಸಾಧನೆಯನ್ನು ಮಾಡುತ್ತಿದ್ದಾರೆ.
ತನ್ನ 10 ಎಕರೆ ಜಮೀನಿನಲ್ಲಿ ಶ್ರೀಗಂಧ, ಪಪ್ಪಾಯಿ, ಸೀತಾ ಫಲ, ಜೊತೆಗೆ ಹೈನುಗಾರಿಕೆ, ದನಗಳಿಗೆ ಮೇವೂ ಕೂಡಾ ಬೆಳೆಯುತ್ತಿದ್ದಾರೆ. ಒಂದು ಬೆಳೆ ಫಸಲು ಕೊಡುವುದನ್ನ ನಿಲ್ಲಿಸಿದ ಕೂಡಲೇ ಇನ್ನೊಂದು ಬೇಳೆ ಫಸಲು ಕೊಡಲು ಆರಂಭಿಸುವುದರಿಂದ ಪ್ರತಿ ತಿಂಗಳು ಆದಾಯ ಬರುತ್ತಿದ್ದು ನಾವು ಸಂತೋಷದಿಂದ ಇದ್ದೇವೆಂದು ರೈತ ಜಾಫರ್ ಹೇಳುತ್ತಾರೆ.
ಮಿಶ್ರ ಬೇಸಾಯ, ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ.. ತಂದೆಯವರ ಕಾಲದಲ್ಲಿ ಕಬ್ಬು ಬೆಳೆಗೆ ಸೀಮಿತವಾಗಿದ್ದ ಭೂಮಿಯಲ್ಲಿ ಈಗ ಶ್ರೀಗಂಧ, ಮಾವು, ಪಪ್ಪಾಯಿ, ಸೀತಾಫಲ, ಬೆಳೆಸಿದ್ದಾರೆ. ಮಿಶ್ರ ಬೇಸಾಯವು ಅವರಿಗೆ ಮೇಲಿಂದ ಮೇಲೆ ಆದಾಯ ತಂದುಕೊಡುತ್ತಿದೆ. ಮಳೆಯ ಕೊರತೆ, ನೈಸರ್ಗಿಕ ವಿಕೋಪದಿಂದ ಒಂದು ಬೆಳೆ ಕೈಕೊಟ್ಟಾಗ ಮತ್ತೊಂದು ಬೆಳೆ ಕೈಹಿಡಿಯುತ್ತಿದೆ. ಇನ್ನೂ ತಮ್ಮ ಹೊಲದ ಬದುವಿನಲ್ಲಿ ಮಾವು, ಶ್ರೀಗಂಧ ಗಿಡಗಳನ್ನು ನಾಟಿ ಮಾಡಿದ್ದಾರೆ. ಸರಿಸುಮಾರು 800 ಗಿಡಗಳನ್ನು ನಾಟಿ ಮಾಡಿದ್ದಾರೆ. ಹತ್ತು ವರ್ಷದ ಬಳಿಕ ಒಂದು ಗಿಡ 10 ರಿಂದ 15 ಸಾವಿರ ರೂಪಾಯಿ ಮಾರಾಟವಾಗುತ್ತದೆ. ಬಂದ ಹಣದಲ್ಲಿ ಮಕ್ಕಳ ಮದುವೆ, ಶಿಕ್ಷಣಕ್ಕೆ ಬಳಕೆ ಮಾಡುಬಹುದೆಂದು ರೈತ ಹೇಳುತ್ತಿದ್ದಾರೆ.
ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ.. ನೀರಿನ ಉಳಿತಾಯಕ್ಕಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ವಿದ್ಯುತ್ ಕೊರತೆಯಾದಾಗ ಬೆಳೆಗಳಿಗೆ ನೀರೊದಗಿಸಲು 4 ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ತೊಟ್ಟಿ ನಿರ್ಮಿಸಿದ್ದಾರೆ. ಮುಂದೆ ಹನಿ ನೀರಾವರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮುಂತಾದ ಕೃಷಿ ಉಪಕರಣ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ. ಇನ್ನೂ ಇವರು ಬೆಳೆದಿರುವ ಬೆಳೆಗಳನ್ನ ರಕ್ಷಿಸಲು ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇದೆ.
ಸಾಧಕ ರೈತನ ಬಗ್ಗೆ ಇಲ್ಲಿನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಪದ್ಧತಿ ಅಳವಡಿಸಿಕೊಂಡರೆ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಕೈ ಹಿಡಿಯುತ್ತದೆ. 2018-19ನೇ ಸಾಲಿನಲ್ಲಿ ಸುಮಾರು 800 ಶ್ರೀಗಂಧದ ಸಸಿಗಳನ್ನು ಅರಣ್ಯ ಇಲಾಖೆಯಿಂದ ಪಡೆದು ತಮ್ಮ ಹೊಲದಲ್ಲಿ ನಾಟಿ ಮಾಡಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯೂ ಸಹಾಯಧನ ನೀಡುತ್ತಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ದತ್ತಿಯನ್ನು ಅಳವಡಿಸಿಕೊಂಡು ಲಕ್ಷ ಲಕ್ಷ ರೂಪಾಯಿ ಆದಾಯವನ್ನ ಹೇಗೇ ಗಳಿಸಬಹುದೆಂದು ರೈತ ಜಾಫರ್ ಜಿಲ್ಲೆಗೆ ತೋರಿಸಿಕೊಟ್ಟಿದ್ದಾರೆ. ಅಷ್ಟೆ ಅಲ್ಲದೆ ಕೇವಲ 10 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಬಂಪರ್ ಬೆಳೆ ಬೆಳೆಯುತ್ತಿದ್ದಾರೆ. ಕೂಲಿ ಆಳುಗಳ ಜೊತೆಗೆ ಕುಟುಂಬದ ಸದಸ್ಯರ ಜೊತೆ ಕೆಲಸ ಮಾಡುವುದರಿಂದ ಹೆಚ್ಚಿನ ಕೆಲಸವಾಗುತ್ತಿದೆ. ಕೆಲಸ ಯಾವುದಾದರೇನು? ಶ್ರದ್ಧೆಯಿಂದ ಮಾಡಿದರೆ ಇನ್ನೊಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಎಂಬುವುದನ್ನು ಮಾಡಿ ತೋರಿಸಿದ್ದಾರೆ ರೈತ ಜಾಫರ್ ಮಿಯಾ.
ಸಂಪರ್ಕ ಸಂಖ್ಯೆ: 80885 64196
ನಾಪತ್ತೆಯಾಗಿದ್ದ ಶ್ರೀಗಂಧ ಬೆಳೆಗಾರ ವಿಶುಕುಮಾರ್ ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಕಚೇರಿ ಬಳಿ ಪತ್ತೆ