ಬಾಗಲಕೋಟೆ: ಬಾಕಿ ಹಣ ಮತ್ತು ದರ ನಿಗದಿ ಮಾಡದ ಹಿನ್ನೆಲೆಯಲ್ಲಿ ನಿರಾಣಿ ಸಕ್ಕರೆ ಕಾರ್ಖಾನೆಯ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ, ಕಾರ್ಖಾನೆ ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್ಗಳನ್ನು ಹೊರ ತರಲು ಮುಂದಾದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ನಡೆದಿದೆ. ಕಳೆದ ಎರಡು ವರ್ಷಗಳ ಕಬ್ಬಿನ ಬಾಕಿ ಬಿಲ್ ಸೇರಿದಂತೆ, ಪ್ರಸಕ್ತ ಸಾಲಿನ ದರ ಘೋಷಿಸದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನ ಬಾಕಿ ಹಣ ಮತ್ತು ಪ್ರಸಕ್ತ ಸಾಲಿನ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು. ದರ ನಿಗದಿಗೊಳಿಸುವರೆಗೂ ಕಾರ್ಖಾನೆ ಆರಂಭಿಸಬಾರದು ಎಂದು ಪಟ್ಟು ಹಿಡಿದರು. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಕ್ಕರೆ ಕಾರ್ಖಾನೆಯು ಸಚಿವ ಮುರುಗೇಶ ನಿರಾಣಿ ಒಡೆತನದಲ್ಲಿದೆ. ಬಾಕಿ ಹಣ ಮತ್ತು ದರ ನಿಗದಿ ಮಾಡುವವರೆಗೂ ಕಾಖಾ೯ನೆ ಆರಂಭಿಸಬಾರದು ಎಂದು ಕಬ್ಬು ಬೆಳೆಗಾರ ರೈತರು ಒತ್ತಾಯಿಸುತ್ತಿದ್ದಾರೆ. ಕಾಖಾ೯ನೆ ಸುತ್ತಮುತ್ತ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಬಾಕಿ ಪಾವತಿಗೆ ಸರ್ಕಾರ ಸೂಚನೆ
ಕರ್ನಾಟಕದ 7 ಸಕ್ಕರೆ ಕಾರ್ಖಾನೆಗಳು ರೈತರಿಗೆ ಒಟ್ಟು ₹ 42 ಕೋಟಿ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿವೆ. ಶೀಘ್ರ ಬಾಕಿ ಪಾವತಿಸಬೇಕು ಎಂದು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈಚೆಗೆ ತಾಕೀತು ಮಾಡಿದ್ದರು. ಪ್ರಸ್ತಕ ಸಾಲಿನಲ್ಲಿ ಸಾಲಿನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲು ಪೂರ್ವ ಸಿದ್ಧತಾ ಯೋಜನೆಗಳು, ಕಾರ್ಖಾನೆಗಳ ಕಾರ್ಯ, ದೊರೆಯಬಹುದಾದ ಕಬ್ಬಿನ ಲಭ್ಯತೆಯನ್ನೂ ಸಚಿವರು ಚರ್ಚಿಸಿದ್ದರು.
ಇದನ್ನೂ ಓದಿ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ಅಸಮಾಧಾನ; ಸಾಮೂಹಿಕ ರಾಜೀನಾಮೆಗೆ ನಿರ್ಧರಿಸಿದ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು
ಇದನ್ನೂ ಓದಿ: ರೈತರಿಗೆ ಹಣ ಪಾವತಿ ಬಾಕಿ ಇಟ್ಟುಕೊಂಡಿರುವ 7 ಸಕ್ಕರೆ ಕಾರ್ಖಾನೆಗಳಿಗೆ 2 ದಿನ ಗಡುವು ನೀಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ