
ಬಾಗಲಕೋಟೆ, (ಜನವರಿ 29): ಜಿಲ್ಲೆಯ ಆಲಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳು(School Students) ಬಿಸಿಯೂಟದ (midday meal) ನಂತರ ಚರಂಡಿ ಪಕ್ಕದಲ್ಲಿ ತಟ್ಟೆ ತೊಳೆಯುತ್ತಿರುವ ಪೋಟೋ ವೈರಲ್ ಆಗಿದೆ. ಶಾಲೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲದಿರುವುದು ಈ ದುಸ್ಥಿತಿಗೆ ಕಾರಣವಾಗಿದ್ದು, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ. ಇದು ಮಕ್ಕಳ ಹಕ್ಕು ಆಯೋಗದ ಗಮನಕ್ಕೂ ಬಂದಿದ್ದು, ಕೂಡಲೇ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಪತ್ರ ಬರೆದು ಘಟನೆ ಬಗ್ಗೆ ಗಮನಹರಿಸಬೇಕು. ಹಾಗೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಕೂಡಲೇ ಸೂಚನೆ ನೀಡಬೇಕು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಜಮಖಂಡಿ ಬಿ ಇ ಒ ಅಶೋಕ ಬಸಣ್ಣವರ್ , ಶಾಲೆಗೆ ಓಡೋಡಿ ಬಂದು ಪರಿಶೀಲಿಸಿದ್ದು, ಮಕ್ಕಳು ಚರಂಡಿ ನೀರಲ್ಲಿ ಪ್ಲೇಟ್ ತೊಳೆದಿಲ್ಲ. ಬದಲಾಗಿ ಚರಂಡಿ ಪಕ್ಕದ ಫಿಲ್ಟರ್ ನೀರಿನ ಪೈಪ್ ನಲ್ಲಿ ಪ್ಲೇಟ್ ತೊಳೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಸೂಚನೆ ಮೇರೆಗೆ ಜಮಖಂಡಿ ಬಿ ಇ ಒ ಅಶೋಕ ಬಸಣ್ಣವರ್ , ಆಲಬಾಳ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು. ಶಾಲೆಯಲ್ಲಿ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹಾಗೇ ಪ್ಲೇಟ್ ತೊಳೆಯಲು ವ್ಯವಸ್ಥೆ ಇದೆ. ಮಕ್ಕಳು ಚರಂಡಿ ನೀರಲ್ಲಿ ಪ್ಲೇಟ್ ತೊಳೆದಿಲ್ಲ. ಬದಲಾಗಿ ಚರಂಡಿ ಪಕ್ಕದ ಫಿಲ್ಟರ್ ನೀರಿನ ಪೈಪ್ ನಲ್ಲಿ ಪ್ಲೇಟ್ ತೊಳೆದಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಬಿಸಿಯೂಟ ಮಾಡಿದ ಬಳಿಕ ಕೆಲ ವಿದ್ಯಾರ್ಥಿಗಳು ಕೊಳಚೆ ನೀರಿನಲ್ಲಿ ಪ್ಲೇಟ್ ತೊಳೆದಿರುವ ಫೋಟೋ ವೈರಲ್ ಆಗಿರುವುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಗಮನಕ್ಕೆ ಬಂದಿತ್ತು. ಕೂಡಲೇ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬಿ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಆಲಬಾಳ ಶಾಲೆಯಲ್ಲಿ ನಡೆದ ಈ ಘಟನೆ ಬಗ್ಗೆ ಗಮನಹರಿಸಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಕೂಡಲೇ ಸೂಚನೆ ನೀಡಬೇಕು. ಎಸ್ ಡಿ ಎಮ್ ಸಿ ಹಾಗೂ ಶಾಲಾ ಶಿಕ್ಷಕರ ವಿರುದ್ದ ಇಲಾಖಾ ನಿಯಮಾನುಸಾರ ಕ್ರಮ ಜರುಗಿಸಿ. ಕೈಗೊಂಡ ಕ್ರಮದ ವರದಿ ಆಯೋಗಕ್ಕೆ ಪುನಃ ತಿಳಿಸಲು ಪತ್ರದ ಮೂಲಕ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ, ಜಮಖಂಡಿ ಬಿಇಓಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದರು.
ಇನ್ನು ಆಲಬಾಳ ಶಾಲೆಯ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿ ಬಳಿಕ ಪ್ಲೇಟ್ ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಗಿತ್ತು. ಇದು ಭಾರೀ ಸುದ್ದು ಮಾಡಿದ್ದು, ಶಿಕ್ಷಣ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಛೀಮಾರಿ ಹಾಕಿದ್ದಾರೆ. ಬಿಸಿಯೂಟದ ನಂತರ ಪ್ಲೇಟ್ ತೊಳೆಯಲು ಸೂಕ್ತ ಸ್ಥಳ ಅಥವಾ ನೀರಿನ ಸೌಲಭ್ಯ ಕಲ್ಪಿಸದೆ ಶಾಲಾ ಸುಧಾರಣಾ ಸಮಿತಿ (SDMC) ಹಾಗೂ ಶಿಕ್ಷಕರ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದರು. ಮಕ್ಕಳು ಕೊಳಚೆ ನೀರಿನ ಪಕ್ಕದಲ್ಲೇ ನಿಂತಿರುವುದು ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು.