ಬಾಗಲಕೋಟೆ: ಅವಧಿಗೂ ಮುನ್ನ ರಾಜ್ಯ ವಿಧಾನಸಭೆಗೆ ಚುನಾವಣೆ ಸಾಧ್ಯತೆಗಳನ್ನು ತಮ್ಮ ಹೇಳಿಕೆಯೊಂದರ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ( D K Shivakumar) ಹುಟ್ಟುಹಾಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ಅವಧಿಗೂ ಮುನ್ನ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಂದು ವಾರ ಕಾಯಿರಿ, ಮುಂದೆ ಏನಾಗುತ್ತೆ ನೋಡೋಣ’ ಎಂದು ಉತ್ತರಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಬೆಳಗಾವಿ ಸುವರ್ಣಸೌಧಕ್ಕೆ ಸರ್ಕಾರದ ಪ್ರತಿನಿಧಿಗಳು ಎರಡು ವರ್ಷದಿಂದ ಬರಲಿಲ್ಲ. ಅಲ್ಲಿನ ಖುರ್ಚಿಗಳ ಮೇಲೆ ಹೆಗ್ಗಣಗಳು ಕೂತಿವೆ. ಆಗ ಸುವರ್ಣಸೌಧ ಕಟ್ಟಿದ್ರು, ಈಗ ಮುಚ್ಚಿಕೊಂಡು ಕೂತಿದ್ದಾರೆ. ಹೀಗೆ ಬಳಸದೇ ಇರುವುದಕ್ಕಿಂತ ಸುವರ್ಣಸೌಧವನ್ನು ಬಾಡಿಗೆ ಕೊಡೋದು ಮೇಲು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ್ದಕ್ಕೆ ಬಾಡಿಗೆಯಾದರು ಬರಲಿ ಎಂದು ಇದೇ ಸಂದರ್ಭದಲ್ಲಿ ಸರ್ಕಾರದ ಕುರಿತು ವ್ಯಂಗ್ಯವಾಡಿದರು.
ನೇಕಾರ ಸಮುದಾಯದ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂವಾದ ನಡೆಸುತ್ತಿರುವ ವೇಳೆಯೇ ನಿದ್ದೆಗೆ ಜಾರಿದ ಪ್ರಸಂಗವೂ ಇದೇ ಸಂದರ್ಭದಲ್ಲಿ ನಡೆಯಿತು.
‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ..
ಡಿಕೆ.. ಡಿಕೆ.. ಅಂತ ಕೂಗಿದ ಅಭಿಮಾನಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ ಅದೆಲ್ಲ ಬಿಡು. ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ ನೀವು ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಗೆ ಗದರಿದರು. ನಿಮಗೆ ಅಭಿಮಾನ ಇದ್ರೆ ಮುಂದೆ ತೋರಿಸಿ. ಈಗ ಯಾವುದೇ ಜಯಕಾರ, ಹಾರ ತುರಾಯಿ ಬೇಡ ಅಂತ ಡಿಕೆಶಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಜಿಲ್ಲೆಯ ಬನಹಟ್ಟಿ ನಗರದಲ್ಲಿ ನೇಕಾರ ಸಂವಾದಕ್ಕೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಕ್ರಾಸ್ ಬಳಿ ಡಿ.ಕೆ.ಶಿವಕುಮಾರ್ಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಕ್ರೇನ್ ಮೂಲಕ ಸುಮಾರು ಒಂದು ಕ್ವಿಂಟಾಲ್ ಸೇಬಿನ ಹಣ್ಣಿನ ಹಾರ ಹಾಕಿ, ಹೂಮಳೆ ಸುರಿಸಿ ಅವರ ಬೆಂಬಲಿಗರು ಸ್ವಾಗತಿಸಿದ್ದಾರೆ. ಅಲ್ಲದೆ ಡಿಕೆ ಡಿಕೆ ಎಂದು ಘೋಷಣೆ ಕೂಗುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಜಿ.ಮಾದೇಗೌಡ ನಿಧನಕ್ಕೆ ಡಿಕೆಶಿ ಸಂತಾಪ
ನಾನು ವಿದ್ಯಾರ್ಥಿ ಜೀವನದಿಂದಲೂ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ನೋಡುತ್ತಿದ್ದೇನೆ. 45 ವರ್ಷಗಳಿಂದ ಅವರ ಜತೆ ರಾಜಕೀಯ ಸಂಪರ್ಕದಲ್ಲಿದ್ದೆ. ರೈತ ಮುಖಂಡ ಜಿ.ಮಾದೇಗೌಡ ನಿಧನದಿಂದ ನೋವಾಗಿದೆ ಎಂದು ಸಂತಾಪ ಸೂಚಿಸಿದ ಶಿವಕುಮಾರ್, ನಿಧನದ ಸುದ್ದಿ ತಿಳಿದ ಬಳಿಕ ಕಾರ್ಯಕ್ರಮ ರದ್ದು ಮಾಡಿ, ಹೆಲಿಕಾಪ್ಟರ್ ಮೂಲಕ ಅಂತಿಮ ದರ್ಶನಕ್ಕೆ ಬರಬೇಕು ಅಂತ ಅಂದುಕೊಂಡಿದ್ದೆ. ಆದರೆ ಮೋಡ ಕವಿದ ವಾತವಾರಣ ಇರುವ ಕಾರಣ, ಹೆಲಿಕಾಪ್ಟರ್ ಪ್ರಯಾಣ ಸೂಕ್ತವಲ್ಲ ಎಂದು ಪೈಲಟ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಲಿಂಗಾಯತ ಸಮುದಾಯ ಬಿಜೆಪಿ ಆಸ್ತಿಯಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಪಾಳಮೋಕ್ಷಗೈದದ್ದು ಕಾಂಗ್ರೆಸ್ ಕಾರ್ಯಕರ್ತನಿಗಲ್ಲ, ಜೆಡಿಎಸ್ ಕಾರ್ಯಕರ್ತನಿಗೆ!
(KPCC President D K Shivakumar give hint on Karnataka Assembly polls ahead of schedule)