ಬಾಗಲಕೋಟೆ, ಅ.16: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಪ್ರತಿ ವರ್ಷ ಗಾಂಧಿಜಯಂತಿ ದಿನದಂದು ಅತ್ಯುತ್ತಮ ಗ್ರಾಮ ಪಂಚಾಯತಿಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರʼಗಳನ್ನು (Gandhi Gram Puraskar) ನೀಡಿ ಗೌರವಿಸುತ್ತದೆ. ಈ ವರ್ಷ ಕರ್ನಾಟಕದ 233 ಗ್ರಾಮ ಪಂಚಾಯಿತಿಗಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಆದರೆ ನೀರಲಕೇರಿ (Neeralakeri) ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿರೋದು ಚರ್ಚೆಗೆ ಕಾರಣವಾಗಿದೆ. ನೀರಲಕೇರಿ ಗ್ರಾಮದಲ್ಲಿ ಅವ್ಯವಸ್ಥೆ, ಕೊಳಕು ಎದ್ದು ಕಾಣುತ್ತಿದ್ದು ಪುರಸ್ಕಾರ ಹೇಗೆ ಸಿಕ್ತು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಜನರ ಗುಣಮಟ್ಟ ಸುಧಾರಣೆ, ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ, ರಸ್ತೆ, ಬೀದಿ ದೀಪಗಳ ನಿರ್ವಹಣೆ, ಘನ ತ್ಯಾಜ್ಯ ಸಂಗ್ರಹಣೆ ಸೇರಿದಂತೆ ಗ್ರಾಮದಲ್ಲಿ ಉತ್ತಮ ಮೂಲ ಸೌಕರ್ಯ ಹೊಂದಿರುವ ಗ್ರಾಮಗಳನ್ನು ಆಯ್ಕೆ ಮಾಡಿ ‘ಗಾಂಧಿ ಗ್ರಾಮ ಪುರಸ್ಕಾರʼ ನೀಡಲಾಗುತ್ತೆ. ಆದರೆ ಈ ವರ್ಷ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾ.ಪಂಗೆ ಈ ಪುರಸ್ಕಾರ ಬಂದಿದ್ದು ಜನ ಕೆಂಡಾಮಂಡಲರಾಗಿದ್ದಾರೆ.
ಗ್ರಾಮ ಪಂಚಾಯಿತಿಗೆ ಕೊಡುವ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಯಾವ ಮಾನದಂಡ ಇದೆ? ಕೇವಲ ದಾಖಲಾತಿ ನೋಡಿ ರಾಜ್ಯ ಸರಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತಿದೆಯಾ? ಅಧಿಕಾರಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಜಿ ಹಾಕಿದ ಗ್ರಾ.ಪಂಗಳ ಸ್ಥಳ ಪರಿಶೀಲನೆ ಮಾಡೋದಿಲ್ವಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸದ್ಯ ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು ಈ ಮೂಲಕ ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಂಚಾಯಿತಿಯ ಹುಳುಕು ಬಯಲಾಗಿದೆ.
ಈ ವರ್ಷ ನೀರಲಕೇರಿ ಗ್ರಾ.ಪಂಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದ್ದು ಇದು ಈಗ ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಗ್ರಾ.ಪಂ ಮುಂದೆಯೇ ಚರಂಡಿ ಕೊಳಚೆ ನೀರು ಹರಿಯುತ್ತದೆ. ಗ್ರಾ.ಪಂ ಕಟ್ಟಡದ ಮುಂದೆಯೇ ಶಿಥಿಲಾವಸ್ಥೆಯ ಬೃಹತ್ ನೀರಿನ ಟ್ಯಾಂಕ್ ಇದೆ. ಯಾವುದೇ ಕ್ಷಣದಲ್ಲಿ ನೀರಿನ ಟ್ಯಾಂಕ್ ಬೀಳಬಹುದು. ಅದೇ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲಾಗುತ್ತೆ. ಕುಡಿಯುವ ನೀರಿನ ಟ್ಯಾಂಕ್ ಸುತ್ತಲೂ ಕೊಳಚೆ ನೀರು ಹರಿಯುತ್ತದೆ.
ಇದನ್ನೂ ಓದಿ: ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ: ಈ ಪಂಚಾಯ್ತಿ ಮಾಡಿದ ಕಾರ್ಯಗಳೇನು ಗೊತ್ತಾ?
ಗ್ರಾ.ಪಂ ಕಟ್ಟಡದ ಬಳಿಯೇ ಇರುವ ಶುದ್ದ ಕುಡಿಯವ ನೀರಿನ ಘಟಕ ಬಂದ್ ಆಗಿ ಎಷ್ಟೋ ವರ್ಷಗಳು ಕಳೆದಿವೆ. ಶುದ್ದ ಕುಡಿಯುವ ನೀರಿನ ಘಟಕದಿಂದ ಜನರಿಗೆ ಒಂದು ಹನಿ ಶುದ್ದ ನೀರು ಕೂಡ ಸಿಗುತ್ತಿಲ್ಲ. ನೀರಿನ ಘಟಕ ಬಂದ್ ಆಗಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಶುಚಿತ್ವವಿಲ್ಲದ ಚರಂಡಿಗಳು, ಸಮರ್ಪಕ ರಸ್ತೆಗಳಿಲ್ಲ. ಮನೆ ಮನೆಗೂ ಶೌಚಾಲಯ ವ್ಯವಸ್ಥೆ ಇಲ್ಲ. ಸಾಮೂಹಿಕ ಶೌಚಾಲಯ ಜಾಲಿ ಕಂಟಿಗಳ ಜಂಗಲ್ ನಲ್ಲಿ ಮರೆಯಾಗಿದೆ. ಸಾಮೂಹಿಕ ಶೌಚಾಲಯಕ್ಕೆ ಹೋಗೋದಕ್ಕೂ ಜಾಗ ಇಲ್ಲ. ಸುತ್ತಲೂ ಜಾಲಿ ಕಂಟಿಗಳದ್ದೇ ದರ್ಬಾರ್ ಆಗಿದೆ. ಎಮ್ಎನ್ಆರ್ಇಜಿ ಕಾಮಗಾರಿ ಬಿಲ್ ಬಾಕಿ ಇದೆ.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಅವ್ಯವಸ್ಥೆಯನ್ನು ಮುಚ್ಚಿಟ್ಟು ದಾಖಲಾತಿಯಲ್ಲಿ ಮನೆಗೊಂದು ಶೌಚಾಲಯ 100%, ಕುಡಿಯುವ ನೀರು, ಸ್ವಚ್ಚತೆ 100% ಪ್ರಗತಿ. ಶುದ್ದ ಕುಡಿಯುವ ನೀರಿನ ಘಟಕ ಶುರುವಾಗಿದೆ. ಸಾಮೂಹಿಕ ಶೌಚಾಲಯ ಸುಸ್ಥಿತಿಯಲ್ಲಿದೆ. ಎಮ್ಎನ್ಆರ್ಇಜಿ ಯಶಸ್ವಿಯಾಗಿದೆ. 100% ತೆರಿಗೆ ವಸೂಲಿ, ಸಕಾಲ, ಬಾಪೂಜಿ ಸೇವಾಕೇಂದ್ರ ಸಮರ್ಪಕ ಸೌಲಭ್ಯ ಎಂದೆಲ್ಲ ಸುಳ್ಳು ಮಾಹಿತಿ ನೀಡಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಮೂಲಕ ಅರ್ಜಿ ಹಾಕಿ ಗ್ರಾಪಂ ಸಿಬ್ಬಂದಿ ಹಾಗೂ ಅಧ್ಯಕ್ಷರು ಗಾಂಧಿ ಗ್ರಾಮ ಪುರಸ್ಕಾರ ಪಡೆದಿದ್ದಾರೆ.
ಅಕ್ಟೋಬರ್ 02ರಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಪುರಸ್ಕಾರ ನೀಡಲಾಗಿತ್ತು. ಪಿಡಿಒ ಭಾಗೀರಥಿ ಕುರಿ ಅವರು ಗ್ರಾ.ಪಂ ಅಧ್ಯಕ್ಷ ನಾಗರಾಜ ಹಳೆಮನಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದ್ದರು. ಗಾಂಧಿ ಗ್ರಾಮ ಪುರಸ್ಕಾರ ಪಡೆದ ಪಂಚಾಯಿತಿಗೆ ರಾಜ್ಯ ಸರಕಾರ ಐದು ಲಕ್ಷ ಹೆಚ್ಚುವರಿ ಅನುದಾನ ನೀಡುತ್ತೆ. 5 ವಾರ್ಡ್, 12 ಜನ ಸದಸ್ಯರ ಎರಡು ಗ್ರಾಮ ಒಳಗೊಂಡ ನೀರಲಕೇರಿ ಗ್ರಾ.ಪಂಗೆ ಏನು ನೋಡಿ ಪುರಸ್ಕಾರ ಕೊಟ್ಟರು ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿ ಯಾವುದು ಸರಿಯಿಲ್ಲ ಇಂತಹ ಗ್ರಾ.ಪಂಗೆ ಏನು ನೋಡಿ ಪ್ರಶಸ್ತಿ ಕೊಟ್ಟಿದ್ದಾರೆ. ಎಲ್ಲವೂ ಕೇವಲ ದಾಖಲಾತಿಯಲ್ಲಿ ಮಾತ್ರ ಇದೆ. ಊರಲ್ಲಿ ಏನು ಅಭಿವೃದ್ಧಿ ಇಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ