ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್

ಮ್ಯೂಸಿಕ್ ಮೈಲಾರಿ ಬಂಧನ: ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ 'ಮ್ಯೂಸಿಕ್ ಮೈಲಾರಿ' ಸಂಕಷ್ಟ ಎದುರಾಗಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮೈಲಾರಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರಕ್ಕೆ ಹೊರಟಿದ್ದಾಗ ಮಹಾಲಿಂಗಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಬಾಗಲಕೋಟೆ ಎಸ್ಪಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದು, ಅದು ಈ ಕೆಳಗಿನಂತಿದೆ.

ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಸಿಂಗರ್ ಮೈಲಾರಿ ಅರೆಸ್ಟ್
ಮ್ಯೂಸಿಕ್ ಮೈಲಾರಿ
Edited By:

Updated on: Dec 17, 2025 | 4:10 PM

ಬಾಗಲಕೋಟೆ, (ಡಿಸೆಂಬರ್ 17): ಉತ್ತರ ಕರ್ನಾಟಕದ (North Karnataka) ಖ್ಯಾತ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ‘( Music Mailari) ಬಂಧನವಾಗಿದೆ. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮೈಲಾರಿಯನ್ನು ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಆರ್ಕೆಸ್ಟ್ರಾ ಕಾರ್ಯಕ್ರಮದ ನಂತರ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಮೈಲಾರಿ ಇಂದು (ಡಿಸೆಂಬರ್ 17) ಮಹಾರಾಷ್ಟ್ರಕ್ಕೆ ತೆರಳುತ್ತಿರುವಾಗ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಾರಾಷ್ಟ್ರದಲ್ಲಿ ಮೈಲಾರಿ ಬಂಧನ

ಬೆಳಗಾವಿ ಜಿಲ್ಲೆಯ ಗೋಕಾಕ್ ಠಾಣೆಯಲ್ಲಿ ಮೈಲಾರಿ ಸೇರಿ 7 ಜನರ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ದಾಖಲಾಗಿತ್ತು. ನಂತರ ಡಿ.15ರಂದು‌ ಮಹಾಲಿಂಗಪುರ ಪೊಲೀಸ್​ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು.ಬಳಿಕ ಮಹಾಲಿಂಗಪುರ ಪೊಲೀಸರು, ಮೈಲಾರಿ ಬಂಧನಕ್ಕೆ ಹುಡುಕಾಟ ನಡೆಸಿದ್ದರು. ಸುಳಿವು ಸಿಗದಿದ್ದಕ್ಕೆ ತಂಡ ರಚನೆ ಮಾಡಿ ಕಾರ್ಯಚರಣೆ ನಡೆಸಲಾಗಿತ್ತು. ಕೊನೆಗೆ ಇಂದು  ಬೆಳಗ್ಗೆ ಮಹಾರಾಷ್ಟ್ರದ ಜತ್ತ ವ್ಯಾಪ್ತಿಯಲ್ಲಿ ಮೈಲಾರಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಆರ್ಕೆಸ್ಟ್ರಾದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ: ಯೂಟ್ಯೂಬ್ ಸ್ಟಾರ್ ಮೈಲಾರಿ ವಿರುದ್ಧ ಪೋಕ್ಸೋ ಕೇಸ್

ಪ್ರಕರಣದ ಮಾಹಿತಿ ಬಿಚ್ಚಿಟ್ಟ ಎಸ್ಪಿ

ಇನ್ನು ಮೈಲಾರಿ ಬಂಧನದ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮ್ಯೂಸಿಕ್ ಮೈಲಾರಿ ವಿರುದ್ಧ ಡಿಸೆಂಬರ್ 14 ರಂದು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಬ್ಬನ (ಮೈಲಾರಿ) ಮೇಲೆ ಪೊಕ್ಸೋ ಅಡಿ ಪ್ರಕರಣ ದಾಖಲಾಗಿದ್ದರೆ, ಇನ್ನುಳಿದ ಆರು ಜನರ ಮೇಲೆ ಬೆದರಿಕೆ ಹಾಗೂ ಹಲ್ಲೆ ಕೇಸ್ ದಾಖಲಾಗಿತ್ತು. ಈ ಪ್ರಕರಣ ಡಿಸೆಂಬರ್ 15ರಂದು ನಮ್ಮ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ತಕ್ಷಣ ನಾವು ಎಫ್.ಐಆರ್ ದಾಖಲು ಮಾಡಿದ್ದೇವೆ. ಎಫ್.ಐಆರ್ ನಂತರ ಮೂರ್ನಾಲ್ಕು ತಂಡ ರಚಿಸಿ, ಆರೋಪಿಗಳ ಬಲೆಗೆ ಬೀಸಲಾಗಿತ್ತು ಎಂದು ಮಾಹಿತಿ ನೀಡಿದರು.

ಅಲ್ಲದೇ ದೂರುದಾರಳಾದ ಅಪ್ರಾಪ್ತ ಬಾಲಕಿಯನ್ನೂ ನಾವು ವಿಚಾರಣೆ ಮಾಡಿದ್ದೇವೆ. ಪ್ರಮುಖ ಆರೋಪಿ ಮ್ಯೂಸಿಕ್ ಮೈಲಾರಿಯನ್ನ ಬೆಳಿಗ್ಗೆ 5 ಗಂಟೆಗೆ ಅರೆಸ್ಟ್ ಮಾಡಲಾಗಿದ್ದು, ಆತನಿಗೆ ಮೆಡಿಕಲ್ ಮಾಡಿಸಿದ ಬಳಿಕ ಕೋರ್ಟ್ ಗೆ ಹಾಜರುಪಡಿಸುತ್ತೇವೆ.ಇನ್ನುಳಿದ 6 ಜನ ಆರೋಪಿಗಳ ಬಗ್ಗೆ ಈಗ ನಮಗೆ ಕ್ಲಾರಿಟಿ ಸಿಕ್ಕಿದೆ. ಅವರ ಪಾತ್ರದ ಬಗ್ಗೆ ತನಿಖೆ ಆರಂಭಿಸಿದ್ದೇವೆ. ಎಫ್ಐಆರ್ ಆದ ಪ್ರಮುಖ ಆರೋಪಿಯನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಹೇಳಿದರು.

ಅಪ್ರಾಪ್ತ ಬಾಲಕಿಯು ಚಿಕ್ಕೊಡಿ ತಾಲೂಕಿನ ಜಾಗನೂರು ಗ್ರಾಮದಿಂದ ಮಹಾಲಿಂಗಪುರ ಬಸ್ ನಿಲ್ದಾಣದ ಬಳಿ ಬಿಡಿ ಎಂದು ಕೇಳಿಕೊಂಡಿದ್ದಳು. ದೂರುದಾರಳ ಮನೆ ಸಹ ನಮ್ಮ ಜಿಲ್ಲೆಯಲ್ಲಿ ಇಲ್ಲ. ದೂರಿನ ಪ್ರಕಾರ ಮಹಾಲಿಂಗಪುರ ಪಟ್ಟಣದಲ್ಲಿ ಘಟನೆ ಆಗಿದ್ದರಿಂದ ಕೇಸ್ ನಮಗೆ ವರ್ಗಾವಣೆ ಆಗಿದ್ದು, ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸ್ಥಳ ಮಹಜರು ಹಾಗೂ ಪಂಚನಾಮೆ ಸಹ ಆಗಿದೆ. ಲೋಕಲ್ ಮಾಹಿತಿ, ಕಾಲ್ ಡಿಟೇಲ್ ಕಲೆಕ್ಟ್ ಮಾಡಿ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರಕರಣದ ಹಿನ್ನೆಲೆ

ಬೆಳಗಾವಿ (Belagavi)ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಹಾಡಲು ಮ್ಯೂಸಿಕ್ ಮೈಲಾರಿ ಆಗಮಿಸಿದ್ದ. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಬಂದಿದ್ದಳು. ಕಾರ್ಯಕ್ರಮದ ವೇಳೆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸ್ವತಃ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಸದ್ಯ ಮ್ಯೂಸಿಕ್ ಮೈಲಾರಿ ಸೇರಿದಂತೆ ಏಳು ಜನರು ಅಪರಾಧ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಪ್ರಕರಣವನ್ನು ಡಿಸೆಂಬರ್ 15ರಂದು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಬಳಿಕ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ