ಬಾಗಲಕೋಟೆ: ಬೆತ್ತಲೆ ದೇಹಕ್ಕೆ ಕೊಬ್ಬರಿ ಎಣ್ಣೆ ಬಳಿದು ಕಳ್ಳತನ; ಅಂತಾರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು

| Updated By: preethi shettigar

Updated on: Oct 27, 2021 | 12:02 PM

ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಅಕಸ್ಮಾತ್ ಕಳ್ಳತನದ ಸಮಯದಲ್ಲಿ ಸಿಕ್ಕರು ಎಣ್ಣೆಯಿಂದ‌ ಜಾರಬಹುದು ಎಂದು ಈ ರೀತಿ ಕಾರ್ಯತಂತ್ರ ರೂಪಿಸಿದ್ದಾನೆ. ಜೊತೆಗೆ ನೋಡಿದವರು ಭಯಗೊಳ್ಳಲಿ ಎಂದು ಬೆತ್ತಲಾಗಿ ಮನೆಗಳಿಗೆ ನುಗ್ಗುತ್ತಿದ್ದ ಎಂದು ಬಾಗಲಕೋಟೆ ಎಸ್​ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ: ಬೆತ್ತಲೆ ದೇಹಕ್ಕೆ ಕೊಬ್ಬರಿ ಎಣ್ಣೆ ಬಳಿದು ಕಳ್ಳತನ; ಅಂತಾರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು
ಅಂತಾರಾಜ್ಯ ಕಳ್ಳನನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪೊಲೀಸರು ಬಂಧಿಸಿದ್ದಾರೆ
Follow us on

ಬಾಗಲಕೋಟೆ: ಬೆತ್ತಲು ದೇಹಕ್ಕೆ ಕೊಬ್ಬರಿ ಎಣ್ಣೆ ಬಳಿದು ಕಳ್ಳತನ ಮಾಡುವ ಅಂತಾರಾಜ್ಯ ಕಳ್ಳನನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡುವವರು ಒಂದೊಂದು ರೀತಿಯಲ್ಲಿ ಕಳ್ಳತನ ಮಾಡುತ್ತಾರೆ ಎಂದು ನಾವು ಕೇಳಿದ್ದೇವೆ. ಆದರೆ ಬೆತ್ತಲಾಗಿ ಕಳ್ಳತನಕ್ಕೆ ಇಳಿಯುವುದು ಪೊಲೀಸರ ಮತ್ತು ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ. ಸುರೇಶ್ ಯಲ್ಲಪ್ಪ ಶಿವಪುರೆ (40) ಪಕ್ಕದ ಮಹಾರಾಷ್ಟ್ರ ರಾಜ್ಯದ ಸೊಲ್ಹಾಪುರ ನಗರದ ನಿವಾಸಿ. ಆದರೆ ಕಳ್ಳತನಕ್ಕಾಗಿ ಕರ್ನಾಟಕಕ್ಕೆ ಆಗಮಿಸಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಸೊಲ್ಹಾಪುರ ಸುರೇಶ್ ಕಳ್ಳತನ ಮಾಡುವುದಕ್ಕೆ ಆಗಾಗ ಕರ್ನಾಟಕಕ್ಕೆ ಬರುತ್ತಿದ್ದ. ಹೀಗೆ ಕಳ್ಳತನಕ್ಕೆ ಬರುತ್ತಿದ್ದ ಸುರೇಶ್ ಬೆತ್ತಲೆಯಾಗಿಯೇ ಒಂಟಿ ಮನೆಗೆ ನುಗ್ಗುತ್ತಿದ್ದ. ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ ಮೈಗೆಲ್ಲಾ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ. ಅಕಸ್ಮಾತ್ ಕಳ್ಳತನದ ಸಮಯದಲ್ಲಿ ಸಿಕ್ಕರು ಎಣ್ಣೆಯಿಂದ‌ ಜಾರಬಹುದು ಎಂದು ಈ ರೀತಿ ಕಾರ್ಯತಂತ್ರ ರೂಪಿಸಿದ್ದಾನೆ. ಜೊತೆಗೆ ನೋಡಿದವರು ಭಯಗೊಳ್ಳಲಿ ಎಂದು ಬೆತ್ತಲಾಗಿ ಮನೆಗಳಿಗೆ ನುಗ್ಗುತ್ತಿದ್ದ ಎಂದು ಬಾಗಲಕೋಟೆ ಎಸ್​ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದಾರೆ.

ಕಳ್ಳತನಕ್ಕೆ ಪತ್ನಿ ಸಾತ್​
ಇನ್ನು ಹೀಗೆ ಬೆತ್ತಲಾಗಿ ಕಳ್ಳತನ ಮಾಡುತ್ತಿದ್ದ ಸುರೇಶ್ ತನ್ನ ಪತ್ನಿ ಬಸಮ್ಮಳನ್ನು ಜೊತೆಗೆನೆ ಕರೆದುಕೊಂಡು ಬರುತ್ತಿದ್ದ. ಸೊಲ್ಹಾಪುರದಿಂದ ಬೈಕ್​ನಲ್ಲಿಯೇ ಬರುತ್ತಿದ್ದ ದಂಪತಿ ಒಂದೊಂದು ಊರಲ್ಲಿ ಉಳಿದುಕೊಳ್ಳುತ್ತಿದ್ದರು. ಸುರೇಶ್ ಕಳ್ಳತನ ಮಾಡಿಕೊಂಡು ಬಂದರೆ, ಬಸಮ್ಮ ಕಳ್ಳತನ ಮಾಡಿದ್ದ ಆಭರಣಗಳನ್ನು ಮಾರಾಟ ಮಾಡುವ ಜವಾಬ್ದಾರಿ ಹೊತ್ತಿದ್ದಳು. ಅದರಂತೆ ಈ ದಂಪತಿ ಮೇಲೆ ಮಹಾರಾಷ್ಟ್ರ, ಕರ್ನಾಟಕ ಸೇರಿ ಒಟ್ಟು 36 ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಕರ್ನಾಟಕದಲ್ಲಿ ಬಾಗಲಕೋಟೆ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆಯ ಪೊಲೀಸ್ ಕಾಲೋನಿ, ಗದ್ದನಕೇರಿ ಕ್ರಾಸ್, ಬಾದಾಮಿ, ಗುಳೇದಗುಡ್ಡ, ಶಿರೂರು ಗ್ರಾಮ ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಇದೀಗ ದಂಪತಿಯನ್ನು ಹೆಡೆಮುರಿ ಕಟ್ಟುವ ಮೂಲಕ ಕಳ್ಳತನ ಪ್ರಕರಣಗಳಿಗೆ ತಿಲಾಂಜಲಿ ಇಟ್ಟಿದ್ದಾರೆ.  ಅಲ್ಲದೆ ದಂಪತಿಯನ್ನು ಬಂಧಿಸಿರುವ ಬಾದಾಮಿ ಪೊಲೀಸರು ಬಂಧಿತರಿಂದ 10,50000 ಮೌಲ್ಯದ 210 ಗ್ರಾಂ ಚಿನ್ನಾಭರಣ, 15 ಸಾವಿರ ಮೌಲ್ಯದ 250 ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಊರಿಂದ ಸಂಚರಿಸುವುದಕ್ಕೆ ಬಳಸುತ್ತಿದ್ದ ಬೈಕ್ ಅನ್ನು ಕೂಡಾ ಪೊಲೀಸರು ಜಪ್ತಿ ಮಾಡಿದ್ದಾರೆ. ಅಂತಾರಾಜ್ಯ ಕಳ್ಳ ದಂಪತಿ ಬಂಧಿಸಿರುವ ಬಾದಾಮಿ ಪೊಲೀಸರಿಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಿನಲ್ಲಿ ಬೆತ್ತಲಾಗಿ ವಿಚಿತ್ರ ರೀತಿಯಲ್ಲಿ ಕಳ್ಳತನ ಮಾಡಿ ಜನರಲ್ಲಿ ಭಯಭೀತಿ ಹುಟ್ಟಿಸಿದ್ದ ಖದೀಮ ಹಾಗೂ ಆತನ ಪತ್ನಿಯನ್ನು ಬಾಗಲಕೋಟೆ ಖಾಕಿ ಪಡೆ ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ವಿಚಿತ್ರ ಕಳ್ಳನ ಬಂಧನದಿಂದ ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ವರದಿ: ರವಿ ಮೂಕಿ

ಇದನ್ನೂ ಓದಿ:
ನೀವು ಸಾಲ ಮಾಡಿ ಕಳ್ಳತನ‌ ಮಾಡಿ; ಆದ್ರೆ ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ: ಸರ್ಕಾರಕ್ಕೆ ಕೋರ್ಟ್​​ ತರಾಟೆ

ಹೋಟೆಲ್ ಬ್ಯುಸಿನೆಸ್ ಮಾಡ್ತಿದ್ದವರು ಕಳ್ಳತನ ಮಾಡಿ ಅರೆಸ್ಟ್, ಕಳ್ಳತನಕ್ಕೆ ಸಹಾಯ ಮಾಡ್ತು ಸೋಶಿಯಲ್ ಮೀಡಿಯಾ

 

Published On - 11:54 am, Wed, 27 October 21