ಮಳೆಯಿಲ್ಲದೆ ತಾಪಮಾನ ಹೆಚ್ಚಳ; ಬಿಸಿ ವಾತಾವರಣಕ್ಕೆ ಸಾವನ್ನಪ್ಪುತ್ತಿರುವ ಕೋಳಿಗಳು

ಬರ ರಾಜ್ಯಾದ್ಯಂತ ತಾಂಡವವಾಡುತ್ತಿದೆ. ಮುಂಗಾರು ಮಳೆ ಕೈಕೊಟ್ಟು ಹಿಂಗಾರು ಮಳೆ ಕೂಡ ಸರಿಯಾಗಿ ಸುರಿಯದ ಹಿನ್ನೆಲೆ ಎಲ್ಲೆಡೆ ಬರ ಕಾಡುತ್ತಿದೆ.ಈ ಬರ ವಿವಿಧ ಆಯಾಮದಲ್ಲಿ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಕುಕ್ಕುಟೋದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ. ಇದರಿಂದ ಕೋಳಿ ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಲ್ಲದೆ ತಾಪಮಾನ ಹೆಚ್ಚಳ; ಬಿಸಿ ವಾತಾವರಣಕ್ಕೆ ಸಾವನ್ನಪ್ಪುತ್ತಿರುವ ಕೋಳಿಗಳು
ಕೋಳಿ ಪಾರಂಗೂ ತಟ್ಟಿದ ಬರದ ಎಫೆಕ್ಟ್​
Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2023 | 5:03 PM

ಬಾಗಲಕೋಟೆ, ನ.11: ಅತಿಯಾದ ಬಿಸಿ ವಾತಾವರಣದಿಂದ ಕೋಳಿಗಳು ಸಾವನ್ನಪ್ಪುತ್ತಿದ್ದು, ಇದನ್ನು ನೋಡಿದ ಸಾಕಾಣಿಕೆದಾರರು ಅವಧಿಗೂ ಮುನ್ನವೇ ಕೋಳಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೋಳಿ ಪಾರಂ(Poultry Farm) ಖಾಲಿ ಖಾಲಿಯಾಗಿದೆ. ಹೌದು, ಬಾಗಲಕೋಟೆ (Bagalakote) ತಾಲ್ಲೂಕಿನ ಗದ್ದನಕೇರಿ ಕ್ರಾಸ್ ಹಾಗೂ ಛಬ್ಬಿ ಗ್ರಾಮ ಸೇರಿದಂತೆ ನಾಡಿನಲ್ಲೆಡೆ ಬರನರ್ತನ ಶುರುವಾಗಿದೆ. ಮಳೆಯಿಲ್ಲದೆ ರೈತರ ಬೆಳೆ ಹಾಳಾಗಿ ಅನ್ನದಾತರು ಕಂಗಾಲಾಗಿದ್ದಾರೆ.ಸಾಲ ಮಾಡಿ ಬಿತ್ತಿದ ಬೆಳೆ ಬಾರದೆ ಮತ್ತೆ ಸಾಲಕ್ಕಾಗಿ ಕೈ ಚಾಚುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರದ್ದು ಈ ಪರಿಸ್ಥಿತಿ ಆದರೆ ಬರ ವಿವಿಧ ಉದ್ಯಮದ ಮೇಲೂ ಹೊಡೆತ ನೀಡುತ್ತಿದೆ. ಸದ್ಯ ಕುಕ್ಕುಟೋದ್ಯಮದ ಮೇಲೂ ಬರ ದುಷ್ಪರಿಣಾಮ ಬೀರಿದ್ದು, ಕೋಳಿ ಪಾರಂ ಮಾಡಿದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆಯಿಲ್ಲದೆ, ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ ತೀರಾ ಹೆಚ್ಚಾಗಿತ್ತು. ಇದರಿಂದ ಅತಿಯಾದ  ಶಾಕ ಹೆಚ್ಚಾಗಿ ಕೋಳಿಗಳು ಸಾವನ್ನಪ್ಪಿದ ಪ್ರಕರಣ ನಡೆದಿದೆ. ಈ ಹಿನ್ನಲೆ ಗದ್ದನಕೇರಿ ಕ್ರಾಸ್​ನಲ್ಲಿ ಪಾರಂ ಮಾಡಿರುವ ರಾಜು ಎಂಬ ಕೋಳಿ ಸಾಕಾಣಿಕೆದಾರರು, ಅವಧಿಗೂ ಮುನ್ನವೇ ಕೋಳಿಗಳನ್ನು ಮಾರಾಟ ಮಾಡಿ ಸದ್ಯ ಪಾರಂ ಖಾಲಿ ಬಿಟ್ಟಿದ್ದಾರೆ. ಇದು ಕೋಳಿ ಸಾಕಾಣಿಕೆದಾರರಿಗೆ ಮಳೆಯಿಲ್ಲದೆ ಬರ ತಂದಿಟ್ಟ ಫಜೀತಿ. ಆದರೆ, ಇನ್ನೊಂದು ಕಡೆ ಬರಗಾಲ ಹಿನ್ನೆಲೆ ಕೋಳಿ ಸಾಕಾಣಿಕೆದಾರರಿಗೆ ಆಹಾರದ್ದು ಸಮಸ್ಯೆಯಾಗುತ್ತಿದೆ. ಕೋಳಿಗಳಿಗೆ ಪ್ರಮುಖ ಆಹಾರ ಅಂದರೆ ಗೋವಿನಜೋಳ ಹಾಗೂ ಸೋಯಾಬಿನ್ ನುಚ್ಚು ಹಿಟ್ಟು. ಆದರೆ, ಮಳೆಯಾಗದ ಹಿನ್ನೆಲೆ ಗೋವಿಜೋಳ, ಸೋಯಾಬಿನ್ ಬೆಳೆಯೂ ಕೂಡ ಕುಂಠಿತವಾಗಿ ಕೋಳಿ ಸಾಕಾಣಿಕೆದಾರರಿಗೆ ಆಹಾರ ಕೊರತೆ ಉಂಟಾಗಿದೆ.

ಇದನ್ನೂ ಓದಿ:ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಜಾನುವಾರುಗಳ ಬಹಿರಂಗ ಹರಾಜಿಗೆ ನಿರ್ಧಾರ; ಹಿಂದೂಪರ ಸಂಘಟನೆಗಳಿಂದ ವಿರೋಧ

ಕೋಳಿ ಸಾಕಾಣಿಕೆದಾರರಿಗೆ ಆಯಾ ಕಂಪನಿಯವರೆ ಆಹಾರ ಕೊಡುತ್ತಾರೆ. ಆದರೆ, ಕೆಲವರು ಹೆಚ್ಚುವರಿ ಆಹಾರ ನೀಡುವುದಕ್ಕೆ ಇದು ಅಡಚಣೆಯಾಗಿದೆ. ಜೊತೆಗೆ ಆಹಾರದ ರೇಟ್ ಕೂಡ ಜಾಸ್ತಿಯಾಗಿದೆ. ಇನ್ನು ಬರ ಹಿನ್ನೆಲೆ ಮಾಂಸ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಕೋಳಿ ಮಾರಾಟದಲ್ಲೂ ಇಳಿಕೆಯಾಗಿದೆ. ಬರಗಾಲ, ಕೋಳಿ ಆಹಾರ ಸೇರಿದಂತೆ ವಿವಿಧ ಕಾರಣದಿಂದ ಕೋಳಿ ಮರಿಗಳ ರೇಟ್ ಕೂಡ ಏರಿಕೆಯಾಗಿದೆ. ಮೊದಲು ಒಂದು ಮರಿಗೆ 20-25 ರೇಟ್ ಇತ್ತು. ಈಗ ಒಂದು ಮರಿಗೆ 50 ರೂಪಾಯಿ ಆಗಿದೆ. ಒಂದು ಮರಿ ಒಂದುವರೆ ತಿಂಗಳಿಗೆ ಎರಡುವರೆ ಕೆಜಿ ಆಗುತ್ತದೆ. ಎರಡುವರೆ ಕೆಜಿ ಬೆಳೆಸಲು 200-250 ಖರ್ಚು ಆಗುತ್ತದೆ. ಆದರೆ, ಮಾರಾಟ ಮಾಡುವ ವೇಳೆ ಆ ಒಂದು ಕೋಳಿಗೆ 170-180 ಮಾತ್ರ ಸಿಗುತ್ತಿದೆ. ಇದೆಲ್ಲದಕ್ಕೆ ಬರಗಾಲ, ಆಹಾರ ಕೊರತೆ, ಜನರಿಂದ ಮಾಂಸ ಖರೀದಿ ಪ್ರಮಾಣ ಕಡಿಮೆಯಾಗಿದ್ದು, ಬರವು ಕೋಳಿ ಸಾಕಾಣಿಕೆದಾರರಿಗೂ ಬರೆ ಎಳೆದಿದೆ. ಒಟ್ಟಿನಲ್ಲಿ ಬರ ಕೇವಲ ಕೃಷಿಗಷ್ಟೇ ಅಲ್ಲದೇ ವಿವಿಧ ಕ್ಷೇತ್ರದ ಮೇಲೂ ತನ್ನ ಕರಿನೆರಳು ಚಾಚಿದ್ದು, ಬರಕ್ಕೆ ಕುಕ್ಕುಟೋದ್ಯಮ ಕೂಡ ಬಲಿಯಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ