ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ (Rain) ಮನೆಗಳು ಕುಸಿದಿವೆ. ಸೂರು ಕಳೆದುಗೊಂಡ ಕುಟುಂಬಗಳು ಪರದಾಡುತ್ತಿವೆ. ಜಿಲ್ಲೆಯಲ್ಲಿ 1 ಮನೆ ಸಂಪೂರ್ಣ ಹಾನಿಯಾಗಿದ್ದು, 114 ಮನೆಗಳು ಭಾಗಶಃ ಹಾನಿಯಾಗಿವೆ. ಜಿಲ್ಲೆಯ ಮುಧೋಳ (Mudol) ತಾಲೂಕಿನಲ್ಲಿ ಘಟಪ್ರಭಾ (Ghataprabha) ನದಿಗೆ ಅಡ್ಡಲಾಗಿ ಕಟ್ಟಿದ್ದ, ಮಿರ್ಜಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ಪರದಾಡುತ್ತಿದ್ದಾರೆ. ರಬಕವಿ-ಬನಹಟ್ಟಿಯ ಢವಳೇಶ್ವರ ಸೇತುವೆಯೂ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಜಮಖಂಡಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗಿದ್ದು, ನೀರಿನ ರಬಸಕ್ಕೆ ಜಮೀನುಗಳಿಗೆ ಹಾಕಲಾಗಿದ್ದ ಒಡ್ಡು ಒಡೆದಿದ್ದು, ರೈತರಿಗೆ ನಷ್ಟವಾಗಿದೆ. ಮುಧೋಳ ತಾಲೂಕಿನ ಪೆಟ್ಲೂರ ಕ್ರಾಸ್ ಬಳಿಯ ಜಮೀನುಗಳಲ್ಲಿ ಬೆಳೆದ ಸೂರ್ಯಕಾಂತಿ ಬೆಳೆ ಜಲಾವೃತಗೊಂಡಿದೆ. ಸದ್ಯ ಕೃಷಿ ಬೆಳೆ ಇಲ್ಲದ್ದರಿಂದ ಬೆಳೆ ನಾಶದ ಸಮಸ್ಯೆ ಉಂಟಾಗಿಲ್ಲ.
ಇದನ್ನು ಓದಿ: ವಾಣಿಜ್ಯ ಪರೀಕ್ಷೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಗಾಳಿ ಮಳೆಯಿಂದ ಪೌರಕಾರ್ಮಿಕನ ಮನೆ ಮೇಲೆ ಬಿದ್ದ ಮರ
ಕುಮಟಾ: ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯತ ಪೌರಕಾರ್ಮಿಕನ ಮನೆ ಮೇಲೆ ಮರ ಮುರಿದು ಬಿದ್ದಿದೆ. ಗ್ರಾಮ ಪಂಚಾಯಿತಿ ಪೌರಕಾರ್ಮಿಕ ಕಾಂತೇಶ್ ಮನೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯಲ್ಲಿ ಇಂದು ಮುಂದುವರೆದ ಮೋಡ ಕವಿದ ವಾತಾವರಣ ಇದೆ.
ಮಳೆಯಿಂದ ಜಲಾವೃತಗೊಂಡ ಬಡವಾಣೆ, ವೃದ್ದ ದಂಪತಿಯ ಪರದಾಟ
ಶಿವಮೊಗ್ಗ: ಮಲೆನಾಡು ಕರ್ನಾಟಕ ಶಿವಮೊಗ್ಗದಲ್ಲಿ ಸುರಿದ ಮಳೆಯಿಂದ ವಿದ್ಯಾನಗರ ಬಡಾವಣೆ ಕಳೆದ ಎರಡು ದಿನಗಳಿಂದ ಜಲಾವೃತಗೊಂಡಿದೆ. ಇಂದು ಮಳೆ ತಗ್ಗಿದ ಹಿನ್ನಲೆ ಬಡಾವಣೆಯಲ್ಲಿ ನಿಂತ ನೀರು ಇಳಿಮುಖವಾಗಿದೆ. ಇದರಿಂದ ಜಲಾವೃತ ಆಗಿರುವ ಬಡಾವಣೆಯ ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಆಗಿದೆ. ಹೀಗಾಗಿ ಜನರು ಮನೆಗಳನ್ನು ಸ್ವಚ್ಛ ಗೊಳಿಸುತ್ತಿದ್ದಾರೆ. ವೃದ್ಧ ದಂಪತಿಗಳು ಮನೆಯನ್ನು ಸ್ವಚ್ಚ ಮಾಡುತ್ತಿದ್ದಾರೆ. ಈ ಕುರಿತು ಟಿವಿ9 ಮುಂದೆ ಅಳಲು ತೋಡಿಕೊಂಡ ವೃದ್ಧ ಮಹಿಳೆ ಗಾಯತ್ರಿ ಪರಿಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ.
ಪ್ರತಿ ವರ್ಷ ಮಳೆ ಬಂದು ಅವಾಂತರ ಸೃಷ್ಟಿಯಾಗುತ್ತದೆ. ಕಳೆದ ಎರಡು ದಿನಗಳಿಂದ ನೀರು ಆಹಾರ ಇಲ್ಲದೇ ಪರದಾಡುವಂತಾಗಿದೆ. ಸಂಬಂಧಿಕರು ನೀರಿನಲ್ಲಿ ಬಂದು ಊಟದ ವ್ಯವಸ್ಥೆ ಮಾಡಿದ್ದರು. ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೀರಿನ ರಭಸಕ್ಕೆ ಸೇತುವೆ ಕೊಚ್ಚಿಹೋದ ಸೇತುವೆ
ಗದಗ: ಜಿಲ್ಲೆಯಲ್ಲಿ ಮಳೆರಾಯ ಕೊಂಚ ವಿರಾಮ ನೀಡಿದ್ದಾನೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಗದಗ ಜಿಲ್ಲೆ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ಭಾಗದಲ್ಲಿ ಬೆಳೆ ಹಾನಿಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಹಮ್ಮಿಗಿ-ಗುಮ್ಮಗೋಳ ಮಾರ್ಗದಲ್ಲಿರುವ ಸೇತುವೆ ಜಲಾವೃತಗೊಂಡಿದೆ. ಸಿಂಗಟಾಲೂರು ಬ್ಯಾರೇಜ್ ಭರ್ತಿ ಹಿನ್ನೆಲೆ ಸೇತುವೆ ಮುಳುಗಡೆಯಾಗಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿಕೊಂಡು ಹೋಗುತ್ತಿದೆ. ಸಿಂಗಟಾಲೂರು ಬ್ಯಾರೇಜ್ ಹಿನ್ನೀರಿನಲ್ಲಿನ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದ ಗುಮ್ಮಗೋಳ ಗ್ರಾಮಸ್ಥರು ಸಂಚಾರಕ್ಕೆ ಪರದಾಡುತ್ತಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 11:10 am, Sat, 21 May 22