ಶಾಸಕರ ಹೆಸರು ಬರೆದಿಟ್ಟು ಎಸ್​ಡಿಎ ಆತ್ಮಹತ್ಯೆ ಪ್ರಕರಣ: ಚಿತ್ರದುರ್ಗ ಎಸ್​ಪಿ ಸ್ಪಷ್ಟನೆ

| Updated By: Rakesh Nayak Manchi

Updated on: Aug 06, 2023 | 7:25 PM

ಮರಣ ಪತ್ರದಲ್ಲಿ ಬಿಜೆಪಿ ಶಾಸಕ ಎಂ ಚಂದ್ರಪ್ಪ ಹೆಸರು ಉಲ್ಲೇಖಿಸಿ ಎಸ್​ಡಿಎ ನೌಕರ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಚಿತ್ರದುರ್ಗ ಎಸ್​ಪಿ ಪರಶುರಾಮ್ ಅವರು ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ಹೆಸರು ಬರೆದಿಟ್ಟು ಎಸ್​ಡಿಎ ಆತ್ಮಹತ್ಯೆ ಪ್ರಕರಣ: ಚಿತ್ರದುರ್ಗ ಎಸ್​ಪಿ ಸ್ಪಷ್ಟನೆ
ಎಸ್​ಡಿಎ ತಿಪ್ಪೇಸ್ವಾಮಿ ಆತ್ಮಹತ್ಯೆ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ಚಿತ್ರದುರ್ಗ ಎಸ್​ಪಿ ಕೆ. ಪರಶುರಾಮ್
Follow us on

ಚಿತ್ರದುರ್ಗ, ಆಗಸ್ಟ್ 6: ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯತ್​ ಎಸ್​ಡಿಎ ಆತ್ಮಹತ್ಯೆ (Suicide) ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಮೃತ ತಿಪ್ಪೇಸ್ವಾಮಿ ಅವರ ಪತ್ನಿ ಆಶಾ ಅವರು ನೀಡಿದ ದೂರಿನಲ್ಲಿ ಶಾಸಕ ಎಂ.ಚಂದ್ರಪ್ಪ ಹಾಗೂ ಇಒ ರವಿ ಹೆಸರು ಉಲ್ಲೇಖಿಸಿಲ್ಲ ಎಂದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ (M Chandrappa) ಅವರ ಅಮಾನತು ಬೆದರಿಕೆ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಕಿರುಕುಳ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮರಣ ಪತ್ರ ಬರೆದಿಟ್ಟು ವಿಷ ಸೇವಿಸಿ ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಿಪ್ಪೇಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪತ್ನಿ ಆಶಾ ಅವರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಎಸ್​ಪಿ ಪರಶುರಾಮ್, ತಿಪ್ಪೇಸ್ವಾಮಿ ಡೆತ್‌ನೋಟ್‌ನಲ್ಲಿ ಶಾಸಕ, ಇಒ ಹೆಸರು ಉಲ್ಲೇಖಿಸಿದ್ದರು. ಆದರೆ ದೂರಿನಲ್ಲಿ ಅವರ ಹೆಸರು ಉಲ್ಲೇಖಿಸಿಲ್ಲ. ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಅಪಾರ್ಟ್​ಮೆಂಟ್​ನಿಂದ ಹಾರಿ ಬಿಲ್ಡರ್ ಆತ್ಮಹತ್ಯೆ

ಏನಿದು ಪ್ರಕರಣ?

ಶಾಸಕರು ಹಾಗೂ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತ ಎಸ್​ಡಿಎ ತಿಪ್ಪೇಸ್ವಾಮಿ ಅವರು ಮರಣ ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮರಣ ಪತ್ರದಲ್ಲಿರುವಂತೆ, ದಿನಾಂಕ 3-8-2023ರಂದು ಎಂಎಲ್​ಎ ಚಂದ್ರಪ್ಪನವರು, ನಿನ್ನನ್ನು ಅಮಾನತು ಮಾಡುಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಮತ್ತು ಇಓ ರವಿ ಅವರು ಹಿಂಸೆ ಕೊಡುತ್ತಿದ್ದರು. ಅಲ್ಲದೇ ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್, ಮೂರ್ತಿ, ಉಗ್ರಪ್ಪ, ಲವ, ರಾಜಪ್ಪ ಕಿರುಕುಳ ನೀಡುತ್ತಿದ್ದ ಎಂಬಿತ್ಯಾದಿ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ನನ್ನ ಸಾವಿಗೆ ಇವರೇ ಕಾರಣ ಅಂತಾನೂ ಬರೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ